12 ಏಪ್ರಿಲ್ 2023, ಉಡುಪಿ: ಭಾವನಾ ಫೌಂಡೇಶನ್ ಹಾವಂಜೆ ಮತ್ತು ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸುವ ‘ಬಾಲ ಲೀಲ -2023’ ಚಿನ್ನರ ಬೇಸಿಗೆ ಶಿಬಿರವು ದಿನಾಂಕ ಏಪ್ರಿಲ್ 20ರಿಂದ 23ರ ತನಕ ಹಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ನಡೆಯಲಿದೆ.
2014ರಿಂದ ತೊಡಗಿ ಆಯೋಜಿಸುತ್ತಿರುವ ಈ ಬೇಸಿಗೆ ಶಿಬಿರದಲ್ಲಿ ಎಂಟನೇ ಆವೃತ್ತಿ ಇದಾಗಿದ್ದು, ಗ್ರಾಮೀಣ ಭಾಗದಲ್ಲಿ ಮಕ್ಕಳಿಗಾಗಿ ಕರಕುಶಲ ಕಲೆ, ವಿವಿಧ ರೀತಿಯ ಆಟೋಟಗಳು, ಚಿತ್ರಕಲೆ, ಸಂಗೀತ, ಭಾರತೀಯ ವಿವಿಧ ಕಲಾ ಪ್ರಕಾರಗಳು, ಪಕ್ಷಿ ವೀಕ್ಷಣೆ, ಮಕ್ಕಳ ಸಿನಿಮಾ, ಕಸದಿಂದ ರಸ, ಸರಿಸೃಪಗಳ ಪರಿಚಯ ಮುಂತಾಗಿ ಹಲವಾರು ಸೃಜನಾತ್ಮಕ ವಿಷಯಗಳ ಕಲಿಕೆಯನ್ನು ಈ ಶಿಬಿರವು ಒಳಗೊಂಡಿರುತ್ತದೆ.
ಬೇಸಿಗೆಯ ರಜೆಯನ್ನು ಸಜೆಯಾಗಿಸುವುದನ್ನು ತಪ್ಪಿಸುವುದಕ್ಕಾಗಿ ಈ ಶಿಬಿರದ ಆಯೋಜನೆ ನಡೆಸಲಾಗುತ್ತಿದ್ದು, ಗ್ರಾಮೀಣ ಶಾಂತಪರಿಸರದಲ್ಲಿ ಬೆಳಗ್ಗೆ 9:00ರಿಂದ ಸಂಜೆ 5:00 ತನಕ ಮಕ್ಕಳ ಬೌದ್ಧಿಕ ವಿಕಸನಕ್ಕಾಗಿ ಬಹಳಷ್ಟು ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಸಲದ ಶಿಬಿರದಲ್ಲಿ ಪ್ರಮುಖ ಆಕರ್ಷಣೆಯಾಗಿ ಬಿಹಾರದ ಮಧುಬನಿ ಕಲೆ, ಗೋದನ ಮತ್ತು ಪೇಪರ್ ಮೆಶ್ ಮುಂತಾದ ಕಲಾ ಕೃತಿಗಳನ್ನು ರಾಷ್ಟ್ರ ಪುರಸ್ಕೃತ ಕಲಾವಿದರಿಂದ ಕಲಿಯುವ ಅವಕಾಶವನ್ನು ಕಲ್ಪಿಸಲಾಗಿದೆ. ಅಂತೆಯೇ ಗ್ರಾಮೀಣ ಕರಕುಶಲ ವಸ್ತುಗಳ ತಯಾರಿಕೆ ಮತ್ತು ಮಣ್ಣಿನ ಮಡಿಕೆ ತಯಾರಿಕೆಯ ಪ್ರಾತ್ಯಕ್ಷಿಕೆಯೂ ಶಿಬಿರದ ನಡುವೆ ಇರಲಿದೆ ಎಂಬುದಾಗಿ ಶಿಬಿರದ ನಿರ್ದೇಶಕರಾದ ಡಾ. ಜನಾರ್ದನ ಹಾವಂಜೆ ತಿಳಿಸಿದ್ದಾರೆ.
ಶಿಬಿರದ ಅಂತಿಮ ದಿನ ಭಾಗವತ ಪುರಾಣ ಅಂತರ್ಗತ ಸರಣಿ ತಾಳಮದ್ದಳಿಯ ಸಮಾರೋಪ ಸಮಾರಂಭವು ನಡೆಯಲಿದ್ದು ಅಂದು ಡಾ. ಪಾದೆಕಲ್ಲು ವಿಷ್ಣು ಭಟ್ಟ ಅವರಿಗೆ ಕಲಾಸಿಂದು ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು. ಸಮಾರಂಭದ ನಂತರ ತಾಳ ಮದ್ದಳೆ ಕಾರ್ಯಕ್ರಮವು ಜರುಗಲಿರುವುದು.
ಜನಾರ್ದನ ಹಾವಂಜೆ
9845650544