ಕುಂದಾಪುರ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಹಾಗೂ ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಆಶ್ರಯದಲ್ಲಿ ಉಡುಪಿ ಜಿಲ್ಲಾ ಗಮಕ ಕಲಾ ಸಮ್ಮೇಳನವು ದಿನಾಂಕ 24 ಜನವರಿ 2026ರಂದು ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆಯಿತು.

ಈ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ “ಗಮಕ ವಿಶಿಷ್ಟವಾದ ಕಲೆ. ಪದ್ಯವನ್ನು ಸುಲಭವಾಗಿ ಅರ್ಥವಾಗುವಂತೆ, ಲಯಬದ್ಧವಾಗಿ, ಸಂಗೀತದ ರೂಪದಲ್ಲಿ ಹೇಳುವುದೇ ಗಮಕ. ಪುರಾಣದ ಕಥೆಗಳನ್ನು ಗಮಕದ ಮೂಲಕ ಸರಳವಾಗಿ ಅರ್ಥ ಮಾಡಿಕೊಳ್ಳಬಹುದು. ಕನ್ನಡ ಭಾಷೆ ಇನ್ನಷ್ಟು ಶ್ರೀಮಂತವಾಗಬೇಕಾದರೆ ಗಮಕ ಕಲೆಗೆ ಮತ್ತಷ್ಟು ವಿಶೇಷ ಆದ್ಯತೆ ನೀಡಬೇಕು” ಎಂದು ಹೇಳಿದರು.

“ಬಹು ಪ್ರತಿಭೆಗಳು ಅಂತರ್ಗತಗೊಳಿಸಿರುವ ಅದ್ಭುತ ಕಲಾ ಪ್ರಕಾರವೇ ಗಮಕ. ಸುಶ್ರಾವ್ಯತೆ, ರಸಾನುಭವ, ಭಾಷಾ ಸೌಂದರ್ಯ, ಕಾವ್ಯದ ಅರ್ಥವಂತಿಕೆ ಇದೆಲ್ಲದರ ಸಮರ್ಥ ಅರ್ಥ ಅಭಿವ್ಯಕ್ತಿಗೆ ಪೂರಕವಾದ ರಾಗ, ಭಾವ, ರಹಸ್ಯ ಇತ್ಯಾದಿಗಳು ಮೇಲೈಸಿರುವ ಕಲೆಯೇ ಗಮಕ. ಸಂಗೀತ, ಸಾಹಿತ್ಯ, ಭಾಷೆಯಲ್ಲಿನ ಪಾಂಡಿತ್ಯ, ಪೂರ್ಣತೆಯು ಗಮಕ ಕಲೆಯ ಹೆಚ್ಚುಗಾರಿಕೆ. ಕವಿ ಬರೆದ ಕಾವ್ಯದ ಪ್ರಚಾರದಲ್ಲಿ ಗಮಕಿಗಳ ಪಾತ್ರ ದೊಡ್ಡದು. ಮನೆಯ ಮಕ್ಕಳು ಕನ್ನಡ ಕಾವ್ಯಗಳನ್ನು ಗಂಭೀರವಾಗಿ ಅಧ್ಯಯನ ಮಾಡಲು, ಕಾವ್ಯದ ಅರ್ಥ ಅರಿಯಲು, ಅರಿತು ಹಾಡುವ ವಾತಾವರಣ ಮತ್ತೆ ಸೃಷ್ಟಿಯಾಗಬೇಕಾದರೆ ಗಮಕ ಅಭ್ಯಾಸಿಸಬೇಕು” ಎಂದು ಸಮ್ಮೇಳನಾಧ್ಯಕ್ಷೆ ಸುಜಲಾ ಎಸ್. ಭಟ್ ಉಡುಪಿ ಪ್ರತಿಪಾದಿಸಿದರು.

ಡಾ. ಶ್ರೀಕಾಂತ್ ಸಿದ್ದಾಪುರ ಶಿಖರೋಪನ್ಯಾಸನಗೈದು, “ಗಮಕ ಪರಂಪರೆ ಬೆಳೆದು ಬಂದಿರುವುದೇ ಕವಿ ಬರೆದ ಕಾವ್ಯದ ತಿಳಿಸುವ ಉದ್ದೇಶದಿಂದ. ಗಮಕದಲ್ಲಿ ಸಾಹಿತ್ಯ, ಸ್ಪಷ್ಟತೆ, ವ್ಯಾಕರಣ, ರಸ ಬದ್ದತೆ, ಸಂವಹನಕ್ಕೆ ದೈವದತ್ತವಾದ ಕಂಠವೂ ಬೇಕು. ಸಂಗೀತದ ಜೀವಾಳವೇ ಗಮಕ. ಗಮಕಿ ನಿಷ್ಟುರಿಯಾಗಿರಬೇಕು. ಇಲ್ಲದಿದ್ದರೆ ಯಕ್ಷಗಾನದಲ್ಲಿ ಭಾಗವತರ ಸ್ಥಾನಮಾನ ಕುಸಿದಂತೆ ಇಲ್ಲೂ ಆಗಬಹುದು” ಎಂದರು.
ನಾಗರೀಕ ಪತ್ರಿಕೆ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಗಮಕ-ವ್ಯಾಖ್ಯಾನ ಪಥ ಪುಸ್ತಕ ಅನಾವರಣಗೊಳಿಸಿದರು. ಆಮಾಸೆಬೈಲಿನ ಗೀತಾ ಎಚ್.ಎಸ್.ಎನ್., ಅಧ್ಯಕ್ಷ ಶಂಕರ್ ಐತಾಳ್, ಉದ್ಯಮಿ ಕೆ.ಆರ್. ನಾಯ್ಕ್, ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಗಮಕ ಕಲಾ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಸತೀಶ ಕುಮಾರ ಕಮ್ಮಣ್ಣು ಉಪಸ್ಥಿತಿರಿದ್ದರು. ಪ್ರೊ. ಎಂ.ಎಲ್. ಸಾಮಗ ಸ್ವಾಗತಿಸಿ, ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರೂಪಿಸಿದರು.

