ಉಡುಪಿ: ಉಡುಪಿ ಅಜ್ಜರಕಾಡಿನ ವಿದ್ಯಾ ವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ದಿನಾಂಕ 18-08-2023ರಂದು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ ಮತ್ತು ಡಿಜಿಟಲ್ ಗ್ರಂಥಾಲಯ ಹಾಗೂ ಗ್ರಂಥಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷರಾದ ವಸಂತಿ ಶೆಟ್ಟಿ ಬ್ರಹ್ಮಾವರ ಇವರು ಉದ್ಘಾಟಿಸಿ ಗ್ರಂಥಾಲಯ ಮತ್ತು ಗ್ರಂಥಗಳ ಮಹತ್ವದ ಬಗ್ಗೆ ಉಪನ್ಯಾಸವನ್ನು ನೀಡಿದರು. “ಜ್ಞಾನದೇಗುಲಗಳಾದ ಗ್ರಂಥಾಲಯದ ಸದ್ಬಳಕೆ ಮಾಡಿಕೊಂಡರೆ ಜೀವನದ ಅಂಧಕಾರವು ದೂರಾವಾಗಿ ಜ್ಞಾನವೆಂಬ ಬೆಳಕು ನಮ್ಮ ಜೀವನದಲ್ಲಿ ನೆಲೆಗೊಳ್ಳುತ್ತದೆ. ಆದುದರಿಂದ ಆದಷ್ಟು ಗ್ರಂಥಾಲಯಗಳ ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನವು ಬದುಕಿನ ಪ್ರಮುಖವಾದ ಘಟ್ಟ. ಈ ಜೀವನದಲ್ಲಿ ಮೊಬೈಲ್ ಹಾಗೂ ದುಶ್ಚಟಗಳಿಂದ ದೂರವಿದ್ದು ಜೀವನದ ಮೌಲ್ಯಗಳನ್ನು ಅರಿತು ಇನ್ನಷ್ಟು ಹೆಚ್ಚಿಸಿಕೊಳ್ಳುವಂತೆ ಮತ್ತು ಜೀವನದಲ್ಲಿ ಎಂತಹ ಪರಿಸ್ಥಿತಿ ಬಂದರೂ ಮಾನಸಿಕ ಖಿನ್ನತೆಗೆ ಒಳಗಾಗದೇ ಆತ್ಮಸ್ಥೆರ್ಯ ಹಾಗೂ ಆತ್ಮವಿಶ್ವಾಸದಿಂದ ಜೀವನವನ್ನು ಎದುರಿಸಬೇಕು. ದೈನಂದಿನ ಪಾಠ ಪ್ರವಚನಗಳನ್ನು ಕೇಳಿ ತಮ್ಮಲ್ಲಿಯೇ ಚಿಂತನ-ಮಂಥನವನ್ನು ಮಾಡಿಕೊಳ್ಳುವುದರ ಮೂಲಕ ತಮ್ಮ ವಿದ್ಯಾರ್ಥಿ ಜೀವನವನ್ನು ಉತ್ತಮಗೊಳಿಸಬಹುದು. ವಿದ್ಯಾರ್ಥಿಗಳು ದೇಶದ ಅತೀ ಅಮೂಲ್ಯವಾದ ಸಂಪತ್ತು. ಉತ್ತಮ ಗುಣ ನಡತೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೂರ್ಣ ಪ್ರಜ್ಞಾ ಇನ್ಸ್ಟಿಟ್ಯೂಟ್ ಮೇನೇಜ್ಮೆಂಟ್ ಇಲ್ಲಿನ ಗ್ರಂಥಾಲಯ ಕಮಿಟಿ ಸಂಯೋಜಕಿಯಾದ ಸುಜಾತ ಜಿ.ಎಲ್. ಇವರು ಗ್ರಂಥಾಲಯವನ್ನು ವೀಕ್ಷಿಸಿ “ವಿದ್ಯಾರ್ಥಿಗಳು ಕಾಲೇಜು ಮುಗಿದ ನಂತರ ಯು.ಪಿ.ಎಸ್.ಸಿ. ಮತ್ತು ಕೆ.ಎ.ಎಸ್. ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಾಗ ಇಂತಹ ಗ್ರಂಥಾಲಯದ ಪ್ರಯೋಜನ ಪಡೆದುಕೊಂಡರೆ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಬಹುದು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಆಗಬೇಕಾದರೆ ಗ್ರಂಥಾಲಯಗಳಿಂದ ಮಾತ್ರ ಸಾಧ್ಯ. ಅತೀ ಹೆಚ್ಚು ಗ್ರಂಥಗಳನ್ನು ಓದುವುದರಿಂದ ನಿಮ್ಮ ಉತ್ತಮ ಭವಿಷ್ಯವನ್ನು ರೂಪಿಸಬಹುದು” ಎಂದು ಕಿವಿ ಮಾತು ಹೇಳಿದರು.
ಪೂರ್ಣ ಪ್ರಜ್ಞಾ ಇನ್ಸ್ಟಿಟ್ಯೂಟ್ ಮೇನೇಜ್ಮೆಂಟ್ ಇಲ್ಲಿನ ಗ್ರಂಥಾಲಯದ ಗ್ರಂಥಪಾಲಕರಾದ ಪುರೋಷತ್ತಮ ಗೌಡ ಪಿ.ಸಿ. ಇವರು “ಪಠ್ಯ ಪುಸ್ತಕವಲ್ಲದೆ ಪಠ್ಯೇತ್ತರ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ” ಎಂದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗ್ರಂಥಾಲಯ ಸಹಾಯಕರಾದ ಸುನೀತ ಇವರು ಸುಶ್ರಾವ್ಯವಾಗಿ ಪ್ರಾರ್ಥಿಸಿ, ಗ್ರಂಥಪಾಲಕಿ ರಂಜಿತ ಸಿ. ಕಾರ್ಯಕ್ರಮ ನಿರೂಪಿಸಿ, ಪ್ರಥಮ ದರ್ಜೆ ಸಹಾಯಕರಾದ ಶಕುಂತಳಾ ಕುಂದರ್ ವಂದಿಸಿದರು.