ಉಡುಪಿ : ಶ್ರೀ ಜಲವಳ್ಳಿ ವಿದ್ಯಾಧರ ರಾವ್ ಅಭಿಮಾನಿ ಬಳಗ ಉಡುಪಿ ವತಿಯಿಂದ ಅಜ್ಜರಕಾಡು ಪುರಭವನದಲ್ಲಿ ‘ಜಲವಳ್ಳಿ ಯಕ್ಷಯಾನ-30’ ಜಲವಳ್ಳಿಯವರ ಸಾರ್ಥಕ ಮೂರು ದಶಕಗಳ ಯಕ್ಷಗಾನ ಕಲಾಸೇವೆಯ ಸಂಭ್ರಮ, ಸಮ್ಮಾನ ಹಾಗೂ ಯಕ್ಷಗಾನ ಪ್ರದರ್ಶನಗಳ ಕಾರ್ಯಕ್ರಮವು ದಿನಾಂಕ 06-08-2023ರಂದು ನಡೆಯಿತು. ಇದೇ ಸಂದರ್ಭದಲ್ಲಿ ಜಲವಳ್ಳಿ ವಿದ್ಯಾಧರ ರಾವ್ ಅವರನ್ನು ಸಮ್ಮಾನಿಸಲಾಯಿತು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶ್ರೀ ಕೆ. ಜಯಪ್ರಕಾಶ ಹೆಗ್ಡೆ ಉದ್ಘಾಟನೆ ನೆರವೇರಿಸಿ “ಯಕ್ಷಗಾನ ಕಲೆ ಸ್ವಚ್ಛ ಕನ್ನಡ ಭಾಷೆ ಉಳಿವಿಗೆ ಪೂರಕವಾಗಿದ್ದು, ಕಲಾವಿದನಿಗೆ ಭಾಷೆಯ ಮೇಲಿದ್ದ ಹಿಡಿತ ಅಸಾಧಾರಣ. ಆಧುನಿಕ ಭರಾಟೆಯಲ್ಲಿ ಯಕ್ಷಗಾನ ಕಲೆ ನಶಿಸಿ ಹೋಗುತ್ತಿದೆ ಎನ್ನುವ ಭೀತಿಯ ಹೊತ್ತಿಗೆ ಯುವ ಸಮುದಾಯ ಹಿರಿಯ ಮಾರ್ಗದರ್ಶನದೊಂದಿಗೆ ಈ ಕಲೆಯನ್ನು ಉಳಿಸಿ, ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ” ಎಂದರು. ಜಲವಳ್ಳಿ ವಿದ್ಯಾಧರ ರಾವ್ ಕಲಾ ಸೇವೆಯನ್ನು ಕೊಂಡಾಡಿದರು.
ಶಾಸಕರಾದ ಶ್ರೀ ಯಶಪಾಲ ಎ. ಸುವರ್ಣ ಜಲವಳ್ಳಿ ವಿದ್ಯಾಧರ ರಾವ್ ಅವರ ಯಕ್ಷಗಾನ ಕಲಾ ಸೇವೆಯನ್ನು ಶ್ಲಾಘಿಸಿ, ಅಭಿನಂದಿಸಿದರು. ವಿದ್ವಾನ್ ದತ್ತಮೂರ್ತಿ ಭಟ್, ಶಿವಮೊಗ್ಗ ಮಾತನಾಡಿದರು. ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ, ಮಾಹಿ ಸಹಕುಲಾ ಪತಿ ಡಾ. ಎಚ್.ಎಸ್. ಬಲ್ಲಾಳ್, ಉದ್ಯಮಿಗಳಾದ ಶ್ರೀ ಬಿ. ಶಾಂತಾರಾಮ ಶೆಟ್ಟಿ ಬಾರ್ಕೂರು, ಶ್ರೀ ಪುರುಷೋತ್ತಮ ಶೆಟ್ಟಿ, ಬ್ರಹ್ಮಾವರ ವಿ.ಎಸ್.ಎಸ್. ಸಂಘದ ನಿರ್ದೇಶಕ ಶ್ರೀ ಬಿರ್ತಿ ರಾಜೇಶ ಶೆಟ್ಟಿ, ಶ್ರೀ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ‘ಮಹಾಮಲ್ಲ ಮಾಗಧ’ ಹಾಗೂ ‘ದ್ರೌಪದಿ ಪ್ರತಾಪ’ ಎಂಬ ಯಕ್ಷಗಾನ ಪ್ರಸಂಗಗಳ ಪದರ್ಶನ ನಡೆಯಿತು.