ಉಡುಪಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ಪ್ರೊ. ಕೆ.ಪಿ. ರಾವ್ ಅಭಿನಂದನಾ ಸಮಿತಿ ವತಿಯಿಂದ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿನಾಂಕ 06-08-2023ರಂದು ನಡೆದ ವಿದ್ವಾಂಸ ಪ್ರೊ. ಕೆ.ಪಿ. ರಾವ್ ಇವರಿಗೆ ಅಭಿನಂದನ ಕಾರ್ಯಕ್ರಮದಲ್ಲಿ ಅವರನ್ನು ವಾದ್ಯ ಘೋಷದೊಂದಿಗೆ ಹೂ ಹಾರ, ಅಭಿನಂದನೆ ಪತ್ರ, ಬಾಳೆಗೊನೆ, ಎಳನೀರು, ಹೂವು-ಹಣ್ಣು, ಅಕ್ಕಿಮುಡಿ ಸೇರಿದಂತೆ ವಿವಿಧ ಸುವಸ್ತುಗಳನ್ನು ನೀಡಿ ವಿಶಿಷ್ಟ ರೀತಿಯಲ್ಲಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿದ ಅವರು ಮಾತನಾಡುತ್ತಾ “ದೇವರು ಮತ್ತು ಭಾಷೆ ಕಣ್ಣಿಗೆ ಕಾಣುವುದಿಲ್ಲ. ಹಿಡಿತಕ್ಕೆ ಸಿಗುವುದಿಲ್ಲ. ಆದರೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಶಕ್ತಿ ಭಾಷೆ ಮತ್ತು ದೇವರಿಗಿದೆ. ಪ್ರಾಣಿ ಸಂಕುಲ ಭಾಷೆ ಕಲಿಯುವುದು ಮೊದಲಿಗೆ ತಾಯಿಯಿಂದ ಪರಸ್ಪರ ಅರ್ಥಮಾಡಿಕೊಳ್ಳಲು ಇರುವ ಮಾಧ್ಯಮ ಭಾಷೆ. ಎಲ್ಲರನ್ನು ಒಳಗೊಳ್ಳುವಂತಹ ಶಕ್ತಿ ಭಾಷೆಗಿದೆ” ಎಂದು ಹೇಳಿದರು.
ಸಾಹಿತಿ ಜಯಂತ ಕಾಯ್ಕಿಣಿ ಮಾತನಾಡಿ, “ತನ್ಮಯತೆ ಇಲ್ಲದ ಚಿಂತನಶೀಲತೆಯಿಂದಲೂ ಏನೂ ಪ್ರಯೋಜನವಿಲ್ಲ. ಅದೇ ರೀತಿ ಚಿಂತನಶೀಲತೆ ಇಲ್ಲದ ತನ್ಮಯತೆಯಿಂದಲೂ ಏನೂ ಪ್ರಯೋಜನವಿಲ್ಲ. ಅವೆರಡೂ ಒಂದಾದ ಪವಾಡದ ಅದ್ಭುತ ವ್ಯಕ್ತಿತ್ವವೇ ಕೆ.ಪಿ. ರಾವ್. ಆ ಕಾಲದಲ್ಲಿ ಇತರರಿಂದ ಪಠ್ಯ ಪುಸ್ತಕಗಳನ್ನು ಕೊಂಡುಕೊಂಡು ನಾವು ಬರೆಯುತ್ತಿದ್ದರೆ ಕೆ.ಪಿ. ರಾವ್ ಮರದ ಕೆಳಗೆ ಕುಳಿತುಕೊಂಡು ಪಠ್ಯಪುಸ್ತಕವನ್ನು ಯಕ್ಷಗಾನದ ಧಾಟಿಯಲ್ಲಿ ಕಂಠಪಾಠ ಮಾಡುತ್ತಿದ್ದರು. ಇಂತಹ ವಿಶೇಷ ಮನಸ್ಸು ಅವರಲ್ಲಿತ್ತು” ಎಂದರು.
ಅಭಿನಂದನಾ ಸಮಿತಿಯ ಗೌರವಾದಕ್ಷ ವಿಶ್ವನಾಥ್ ಶೆಣೈ, ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪ್ರೊ. ಮುರಲೀಧರ ಉಪಾಧ್ಯ ಹಿರಿಯಡ್ಕ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು. ರವಿರಾಜ್ ಎಚ್.ಪಿ, ಸ್ವಾಗತಿಸಿ, ರಾಜೇಶ್ ಭಟ್ ಪಣಿಯಾಡಿ ವಂದಿಸಿ, ಮುರಳಿ ಕಡೆಕಾರ್ ನಿರೂಪಿಸಿದರು.