20 ಮಾರ್ಚ್ 2023, ಉಳಿಯ: ಕರಾವಳಿಯ ಸರ್ವಾಂಗ ಸುಂದರ ಕಲೆ ಯಕ್ಷಗಾನಕ್ಕೆ ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದ ಕೊಡುಗೆ ಅಪಾರ. ಅನೇಕ ವರ್ಷಗಳಿಂದ ಉಳಿಯ ಮನೆಯಲ್ಲಿ ತಾಳಮದ್ದಳೆ, ಕೇರಳ ಮತ್ತು ಕರ್ನಾಟಕದ ಹಲವೆಡೆಗಳಲ್ಲಿ ಬಯಲಾಟಗಳನ್ನು ನಡೆಸುತ್ತಾ ಬಂದಿದೆ. ಯಕ್ಷಗಾನಕ್ಕೆ ಸಂಬಂಧಿಸಿದ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಐವತ್ತರ ಸಂಭ್ರಮಾಚರಣೆ ನಡೆಸಿ ಸಾರ್ಥಕ್ಯವನ್ನು ಪಡೆದುಕೊಂಡಿದೆ. ಉಳಿಯ ಮನೆತನದ ಪೂರ್ವಸೂರಿಗಳಾದ ನಾರಾಯಣ ಆಸ್ರರು ಯಕ್ಷಗಾನಕಲಾ ಪ್ರೇಮಿಯಾಗಿದ್ದರು. ಉಳಿಯ ಮನೆಯ ಒಡೆಯರನ್ನು ‘ಯಜಮಾನ’ರೆಂದು ಸಂಬೋದಿಸುವುದು ಪದ್ಧತಿ. ಅಂದಿನ ಯಜಮಾನರಾದ ದಿವಂಗತ ನಾರಾಯಣ ಆಸ್ರರು ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿದ ಸ್ನೇಹಮಯಿ. ಇವರ ಸ್ನೇಹ ಒಡನಾಟಕ್ಕೆ ಕಟ್ಟು ಬಿದ್ದು ಹಿರಿಯರಾದ ದಿವಂಗತ ಬಲಿಪ ಭಾಗವತರು ಮೇಳದ ತಿರುಗಾಟ ಕೊನೆಗೊಂಡ ಮೇಲೆ ಕೆಲವು ದಿನಗಳು ಹಾಯಾಗಿ ಉಳಿಯದಲ್ಲಿ ಉಳಿಯುತ್ತಿದ್ದರು. ಆ ದಿನಗಳಲ್ಲಿ ಉಳಿಯ ಮನೆಯಲ್ಲಿ ತಾಳಮದ್ದಳೆ ಸರಾಗವಾಗಿ ನಡೆಯುತಿತ್ತು.
ದಿವಂಗತ ನಾರಾಯಣ ಆಸ್ರರ ಪುತ್ರ ಕೀರ್ತಿಶೇಷ ವಿಷ್ಣು ಆಸ್ರರು, ಯಕ್ಷಗಾನ ಕಲಾವಿದ ಮಧೂರು ಗಣಪತಿ ರಾವ್, ಉಗ್ರಾಣೆ ಮಧೂರು ಈಶ್ವರ, ಉಳಿಯ ಮಹಾಲಿಂಗ ಗಟ್ಟಿ, ಯಕ್ಷಗಾನ ಹಾಡುಗಾರ ಪಟ್ಟೆ ರಾಮಚಂದ್ರ ಮಯ್ಯ, ಮದ್ದಳೆ ವಾದಕರು ದಿ. ವಾಸುದೇವ ಆಸ್ರರು. ಈ ಏಳು ಮಂದಿ ಒಟ್ಟಾಗಿ ಸ್ಥಾಪಿಸಿದ ಸಂಘವೇ “ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘ”. ಅಲ್ಲಿ ಸೇರುವವರ ಸಂಖ್ಯೆ ಸೀಮಿತವಾಗಿದ್ದುದರಿಂದ ಪ್ರತಿ ಶನಿವಾರ ರಾತ್ರಿ 9 ಗಂಟೆಯಿಂದ ಸಂಘದ ತಾಳಮದ್ದಳೆ ನಡೆಯುತಿತ್ತು. ಚೆಂಡೆಯ ನಾದಕ್ಕೆ ಎಚ್ಚೆತ್ತ ಪರಿಸರದ ಶ್ರೋತೃಗಳ ಸಂಖ್ಯೆ ದಿನೇ ದಿನೇ ವೃದ್ದಿಸಿ, ಹಲವು ಮಂದಿ ಸಮಾನ ಆಸಕ್ತರು ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಂದಾದರು. ಸ್ಥಳದ ಅಭಾವದಿಂದಾಗಿ ಮುಂದಿನ ಕಾರ್ಯಕ್ರಮ ಈ ಸಂಘದ ರಜತ ಮಹೋತ್ಸವದ ದಿನ “ಸುಧಾ ಮಂದಿರ”ವೆಂದು ಹೆಸರಿಸಲಾದ ಚಾವಡಿಗೆ ಸ್ಥಳಾಂತರಗೊಂಡಿತು. ಮುಂದೆ ಎಲ್ಲಾ ಕಾರ್ಯಕ್ರಮಗಳೂ ಅಲ್ಲೇ ನಡೆಯಲಾರಂಭಿಸಿದವು.
ವಾರದ ತಾಳಮದ್ದಳೆ ಎಂದೂ ಮೊಟಕುಗೊಳ್ಳಬಾರದು ಇದು ಸದಸ್ಯರೆಲ್ಲರ ಆಶಯ. ಈ ನಿಟ್ಟಿನಲ್ಲಿ ಕೆಲವು ಮಂದಿ ತರುಣರು ಆ ಕಾಲದಲ್ಲೇ ಹಾಡುಗಾರಿಕೆ ಮತ್ತು ಹಿಮ್ಮೇಳ ವಾದನದ ಅಭ್ಯಾಸ ಮಾಡಿಕೊಂಡರು. ಇದೊಂದು ಉತ್ತಮ ಬೆಳವಣಿಗೆ ಎನ್ನಬಹುದು. ಯಕ್ಷಗಾನ ದಿಗ್ಗಜಗಳೆಂದೇ ಹೆಸರಾದ ಅನೇಕ ಕಲಾವಿದರು ತಾವಾಗಿ ಬಂದು ತಾಳಮದ್ದಳೆಯಲ್ಲಿ ಸಹಭಾಗಿಗಳಾಗುತ್ತಿದ್ದುದು ಉಳಿಯ ಮನೆಯ ಹಿರಿಮೆ-ಗರಿಮೆ ಮತ್ತು ಅಲ್ಲಿರುವವರ ಸೌಹಾರ್ದಪೂರ್ಣ ಒಡನಾಟಕ್ಕೆ ಒಂದು ಸಾಕ್ಷಿ.
ಸ್ಥಾಪಕಾಧ್ಯಕ್ಷರಾದ ವಿಷ್ಣು ಆಸ್ರರ ಅನಾರೋಗ್ಯದಿಂದ ವಾರದ ತಾಳಮದ್ದಳೆ ಶನಿವಾರದ ಬದಲು ರವಿವಾರ ಅಪರಾಹ್ನಕ್ಕೆ ನಿಗದಿಪಡಿಸಲಾಯಿತು. 25-07-1985 ಸಂಘದ ಕರಾಳ ದಿನ. ಸ್ಥಾಪಕಾಧ್ಯಕ್ಷರ ನಿಧನ. ಅದು ಸಂಘದ ಅಳಿವು ಉಳಿವಿನ ಪ್ರಶ್ನೆಗೆ ಕಾರಣವಾಯಿತು. ಮುಂದೆ ಉಳಿಯತ್ತಾಯ ವಿಷ್ಣು ಆಸ್ರರು, ಉಳಿಯ ಮನೆಯ ಮತ್ತು ಕಲಾ ಸಂಘದ ಇತಿಹಾಸಕ್ಕೆ ಹೊಸ ಬೆಳಕು ಚೆಲ್ಲಿದರು.
ತಾಂತ್ರಿಕ ವೃತ್ತಿ ಪರಿಣತರು, ಕಲಾಪೋಷಕ, ಕಲಾಪ್ರೇಮಿಗಳಾದ ಇವರೇ ಸಂಘದ ಆಧಾರಸ್ತಂಭ, ಕಾರ್ಯದಕ್ಷತೆಗೆ ಹೆಸರಾದವರು. ಸೌಹಾರ್ದಪೂರ್ಣ ಒಡನಾಟದಿಂದ ಜನಾನುರಾಗವನ್ನು ಗಳಿಸಿದವರು. ಸದಸ್ಯರಲ್ಲಿ ಅವರಿಗಿರುವ ಪ್ರೀತಿ ಅನನ್ಯ. ಅವರ ಪರಿಶ್ರಮದಿಂದ ಸಂಘವು ಅಧಿಕೃತ ದಾಖಲಾತಿಯನ್ನು ಪಡೆಯುವಂತಾಯಿತು. ಸಂಘದ ತಾಳಮದ್ದಳೆಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರಗೊಳ್ಳಲೂ ಅವರೇ ಕಾರಣರು. ರಜತ ಮಹೋತ್ಸವ, ತ್ರಿಂಶತಿ ಉತ್ಸವ, ಹಿರಿಯ ಕಲಾವಿದರ ಸಂಮಾನ ಸಮಾರಂಭ, ಪ್ರಸಂಗ ಪುಸ್ತಕ ಪ್ರಕಟಣೆ, ವರ್ಷಂಪ್ರತಿ ಧನ್ವಂತರಿ ಜಯಂತಿಯ ಆಚರಣೆ, ವಾಚಿಕ ಸಮಾರಾಧನೆ, ಸಂಘದ ನಲ್ವತ್ತರ ಹರೆಯದಲ್ಲಿ ‘ಯಕ್ಷ ಪರ್ಯಟನೆ’ಯ ಹೆಸರಲ್ಲಿ ಕೇರಳ-ಕರ್ನಾಟಕ ರಾಜ್ಯಗಳಲ್ಲಿ ನಲ್ವತ್ತು ಸರಣಿ ತಾಳಮದ್ದಳೆ ಹೀಗೆ ಒಂದಲ್ಲ ಒಂದು ಕಾರ್ಯಕ್ರಮ ನಡೆಯುತ್ತಲೇ ಇತ್ತು. ಇದರ ಹಿಂದೆ ಅವರ ಉತ್ತೇಜನ ಮತ್ತು ಪರಿಶ್ರಮ ಶ್ಲಾಘನೀಯ. ಹೀಗೆ ಅನೇಕ ಪ್ರತಿಭೆಗಳು ಬೆಳಕಿಗೆ ಬಂದು ಹಿರಿಯರ ಮಾರ್ಗದರ್ಶನದಲ್ಲಿ ಕಲಾರಾಧನೆ ಮುಂದುವರಿಯುತ್ತಿದೆ.
ರಂಗದಲ್ಲಿ ಮಿಂಚಿದ ಹಿರಿಯ ತಲೆಮಾರಿನ ಅರ್ಥಧಾರಿಗಳು ಸ್ವಯಂಸ್ಪೂರ್ತಿಯಿಂದ ಉಳಿಯದಲ್ಲಿ ನಡೆಯುವ ತಾಳಮದ್ದಳೆಗಳಲ್ಲಿ ಭಾಗವಹಿಸುವ ಪರಿಪಾಟವನ್ನು ಇರಿಸಿಕೊಂಡಿದ್ದಾರೆ. ಆ ರೀತಿಯಲ್ಲಿ ಆಗಮಿಸಿದ ಹಾಸ್ಯಗಾರ ನಾರಾಯಣಯ್ಯ ಮಧವೂರು ಗಣಪತಿ ರಾವ್, ಏರಿಕ್ಕಳ ಈಶ್ವರಪ್ಪಯ್ಯ, ಕೋಟೆಕುಂಜ ನಾರಾಯಣ ಶೆಟ್ಟಿ, ಎಲ್ಲಂಗಳ ಶಂಕರನಾರಾಯಣ ಶ್ಯಾನುಭೋಗ್, ಶಿವನಾರಾಯಣ ಸರಳಾಯ, ಬನ್ನೂರು ಶಂಕರನಾರಾಯಣ ನಾವಡ, ಕೋಟೆಕ್ಕಾರು ದೇರಣ್ಣ ರೈ, ಭಾಗವತ ಜತ್ತಪ್ಪ ರೈ, ನಾರಾಯಣ ಕೆದಿಲಾಯ, ಬೈಲಂಗಡಿ ದಾಮೋದರ ಅಗ್ಗಿತ್ತಾಯ ಮೊದಲಾದವರು ಸ್ಮರಣೀಯರು. ಅಂತೆಯೇ ಅನಂತರದ ತಲೆಮಾರಿನ ಮಧೂರು ವೆಂಕಟಕೃಷ್ಣ, ಕಕ್ಕೆಪಾಡಿ ವಿಷ್ಣುಭಟ್, ಮಧೂರು ಈಶ್ವರ ಸಹಿತ ಅನೇಕರು ಅಭಿನಂದನಾರ್ಹರು.