ಉಳ್ಳಾಲ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಳ್ಳಾಲ ತಾಲೂಕು ಘಟಕ, ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಪಾವೂರು ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಆಶ್ರಯದಲ್ಲಿ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ದಿನಾಂಕ 03-01-2025ರಂದು ಉಳ್ಳಾಲ ತಾಲೂಕು ಪ್ರಥಮ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮ್ಮೇಳನದಲ್ಲಿ ಜಾನಪದ ದಿಬ್ಬಣ, ಕನ್ನಡಾಂಬೆಗೆ ಜೈಕಾರ, ಕವಿಗೋಷ್ಠಿ, ಪ್ರಬಂಧ ಮಂಡನೆ, ಕಾವ್ಯ ವಾಚನ, ಗೀತಾ ಗಾಯನಗೋಷ್ಠಿ ಇವೆಲ್ಲದರಲ್ಲೂ ವಿದ್ಯಾರ್ಥಿಗಳದ್ದೇ ಪಾರಮ್ಯ.
ಕನ್ನಡ ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ನಡೆಸುವ ಯೋಜನೆ ಕ.ಸಾ.ಪ.ದ್ದು. ಅದರಂತೆ ತಾಲೂಕಿನ ವಿದ್ಯಾರ್ಥಿ ಸಮ್ಮೇಳನಕ್ಕಾಗಿ ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಹರೇಕಳ ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಯನ್ನೇ ಆರಿಸಲಾಗಿತ್ತು. ಇದೇ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ರಫೀದಾರವರನ್ನು ಸಮ್ಮೇಳನ ಅಧ್ಯಕ್ಷೆಯಾಗಿ ಆರಿಸಲಾಗಿತ್ತು. ಇತರ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲೇ ಅಧ್ಯಕ್ಷರನ್ನು ಜಾನಪದ ದಿಬ್ಬಣದ ಮೂಲಕ ಸಮ್ಮೇಳನ ನಡೆಯುವ ಶಾಲಾ ಸಭಾಂಗಣಕ್ಕೆ ಕರೆದೊಯ್ಯಲಾಯಿತು. ವಿವಿಧ ಶಾಲೆಗಳ ಆಸಕ್ತ ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.
ಪ್ರೊ. ಅಮೃತ ಸೋಮೇಶ್ವರ ವೇದಿಕೆಯಲ್ಲಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ “ಶಿಕ್ಷಣದೊಂದಿಗೆ ಕ್ರೀಡೆ, ಸಾಹಿತ್ಯದಲ್ಲೂ ಮಕ್ಕಳು ತೊಡಗಿಸಿಕೊಳ್ಳಲು ಅವಕಾಶ ಸಿಗಬೇಕು. ಮಕ್ಕಳು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು ಶಿಕ್ಷಕರ ಜತೆ ಹೆತ್ತವರ ಪ್ರೋತ್ಸಾಹ ಅಗತ್ಯ. ಸಾಹಿತ್ಯದಲ್ಲಿ ತೊಡಗಿಸಿಕೊಂಡವರು ಸಮಾಜದಲ್ಲಿ ದಾರಿ ತಪ್ಪಿ ಹೋಗಲು ಅಸಾಧ್ಯ” ಎಂದು ಹೇಳಿದರು.
ಹರೇಕಳ ಗ್ರಾಮ ಪಂಚಾಯತ್ ಆವರಣದಲ್ಲಿ ಜಾನಪದ ದಿಬ್ಬಣವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಗುಲಾಬಿ ಉದ್ಘಾಟಿಸಿದರು. ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ ಧ್ವಜಾರೋಹಣಗೈದರು. ಕಲೆ, ಸಾಹಿತ್ಯ, ಕ್ರೀಡೆ, ಯಕ್ಷಗಾನ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಕಾವ್ಯ ವಾಚನ ಹಾಗೂ ಗೀತಾ ಗಾಯನಗೋಷ್ಠಿಗೆ ತೋನ್ಸೆ ಪುಷ್ಕಳ್ ಕುಮಾರ್ ಗಾಯನದ ರೂಪ ನೀಡಿ ವಿದ್ಯಾರ್ಥಿ ಕವಿಗಳನ್ನು ಹುರಿದುಂಬಿಸಿದರು. ಬಳಿಕ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು.
ಸಮ್ಮೇಳನ ಸರ್ವಾಧ್ಯಕ್ಷೆ ಫಾತಿಮತ್ ರಫೀದಾ “ಭಾಷೆ ಉಳಿದು ಬೆಳೆಯಬೇಕಾದರೆ ಕನ್ನಡ ಶಾಲೆಗಳು ಉಳಿಯಬೇಕಿದೆ. ಆದರೆ ಇಂದು ಸರ್ಕಾರಿ ಮತ್ತು ಅನುದಾನಿತ ಕನ್ನಡ ಶಾಲೆಗಳು ಮುಚ್ಚಲ್ಪಟ್ಟು ಭಾಷೆ ಸೊರಗುತ್ತಿರುವುದು ನಿಜಕ್ಕೂ ಖೇದಕರ. ಬ್ಯಾಂಕ್, ಇತರ ಕಚೇರಿಗಳಲ್ಲಿ ಕನ್ನಡ ಭಾಷೆ ಬಾರದವರಿದ್ದು ಅವರಿಗೆ ಭಾಷೆ ಕಲಿಸುವ ಕಾರ್ಯ ಪ್ರತಿಯೊಬ್ಬರೂ ಮಾಡಬೇಕು” ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಒಂದು ವರ್ಷದಿಂದ ತಾಲೂಕಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಅತ್ಯಧಿಕ ಕಾರ್ಯಕ್ರಮಗಳು ನಡೆದಿವೆ. ಮಕ್ಕಳಲ್ಲಿ ಕನ್ನಡದ ಬಗ್ಗೆ ಆಸಕ್ತಿ ಮೂಡಿಸದೆ ಸಾಹಿತ್ಯ ಬೆಳೆಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಕ್ಕಳನ್ನೇ ಅಧ್ಯಕ್ಷರನ್ನಾಗಿಸಿ, ಸಾಹಿತ್ಯಿಕವಾಗಿ ತೊಡಗಿಸಿಕೊಳ್ಳುವಂತೆ ಮಾಡುವ ವಿಶೇಷ ಅವಕಾಶ ಲಭಿಸಿದೆ. ದಿನಾಂಕ 21 ಮತ್ತು 22 ಫೆಬ್ರವರಿ 2025ರಂದು 27ನೇ ಜಿಲ್ಲಾ ಸಮ್ಮೇಳನ ತಾಲೂಕಲ್ಲಿ ನಡೆಯಲಿದೆ” ಎಂದು ಹೇಳಿದರು.
ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ಅಧ್ಯಕ್ಷ ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ ಇವರು ಅಧ್ಯಕ್ಷತೆಯಲ್ಲಿ ‘ನಮ್ಮ ಅಬ್ಬಕ್ಕ ನಾನು ಕಂಡಂತೆ’ ಎಂಬ ಸಂವಾದಗೋಷ್ಠಿ, ‘ಶಿಕ್ಷಣ ಮತ್ತು ಮಾಧ್ಯಮ’ ಸಂವಾದ ಗೋಷ್ಠಿಯಲ್ಲಿ ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಹಾಗೂ ಉಳ್ಳಾಲ ತಾಲೂಕು ಅಧ್ಯಕ್ಷ ವಸಂತ ಕೊಣಾಜೆ ಭಾಗವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ.ಎನ್. ಆಳ್ವ, ಉದ್ಯಮಿಗಳಾದ ಚಂದ್ರಶೇಖರ ಶೆಟ್ಟಿ ಮಂಟಮೆ, ಸುರೇಶ್ ಅಸೈಗೋಳಿ, ಶಾಲಾ ಸಂಚಾಲಕ ಕಡೆಂಜ ಸೋಮಶೇಖರ್ ಚೌಟ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ಮಂಗಳೂರು ತಾ.ಪಂ. ಮಾಜಿ ಸದಸ್ಯ ಮುಸ್ತಫಾ ಮಲಾರ್, ಕ.ಸಾ.ಪ. ತಾಲೂಕು ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ ದೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಕ.ಸಾ.ಪ. ತಾಲೂಕು ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್ ಸ್ವಾಗತಿಸಿ, ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಪ್ರಸ್ತಾವನೆಗೈದು, ಮುಖ್ಯಶಿಕ್ಷಕಿ ಉಷಾಲತಾ ವಂದಿಸಿ, ಸಮ್ಮೇಳನ ಸಂಚಾಲಕ ತ್ಯಾಗಂ ಹರೇಕಳ ನಿರೂಪಿಸಿದರು.