ಬೆಳಗಾವಿ : ರಂಗಸಂಪದ ಇದರ ಆಶ್ರಯದಲ್ಲಿ ಕೋನವಾಳ ಬೀದಿಯ ಲೋಕಮಾನ್ಯ ರಂಗಮಂದಿರದಲ್ಲಿ ದಿನಾಂಕ 05 ಜುಲೈ 2025ರಂದು ಪ್ರದರ್ಶನಗೊಂಡ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಜನಮನಸೂರೆಗೊಂಡಿತು.
ಚಲನಚಿತ್ರಗಳಲ್ಲಿ ಅಭಿನಯಿಸಿ, ನಾಡಿನ ಜನರ ಮನ ಗೆದ್ದಿರುವ ಉಮಾಶ್ರೀ ನಾಟಕದಲ್ಲಿ ಶರ್ಮಿಷ್ಠೆಯಾಗಿ ಕಾಣಿಸಿಕೊಂಡು ಅದ್ಭುತ ಅಭಿನಯ ನೀಡಿದರು. ಮೂಲ ಮರಾಠಿಯ ವಿ.ಸ. ಖಾಂಡೇಕರ ಇವರ ‘ಯಯಾತಿ’ ಕಾದಂಬರಿಯನ್ನು ಕನ್ನಡಕ್ಕೆ ವಿ.ಎಂ. ಇನಾಮದಾರ ಅನುವಾದಿಸಿದ್ದಾರೆ. ಇದೇ ಆಧಾರದ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಗಿರೀಶ ಕಾರ್ನಾಡ ರಚಿಸಿರುವ ‘ಯಯಾತಿ’ ನಾಟಕದಲ್ಲಿ ಬರುವ ಒಂದು ಪ್ರಮುಖ ಪಾತ್ರವೇ ‘ಶರ್ಮಿಷ್ಠೆ’. ಇವಳು ಒಬ್ಬಳು ರಾಜಕುಮಾರಿಯಾಗಿದ್ದರೂ ದೇವಯಾನಿ ಹತ್ತಿರ ಆಳಾಗಿ ದುಡಿದು ಬದುಕುವ ಪ್ರಸಂಗ ಬಂದಾಗ ಅವಳ ಮನಸ್ಸಿನಲ್ಲಿ ಆಗುವ ತಳಮಳ, ಹೆಣ್ಣಾಗಿ ಅನುಭವಿಸುವ ನೋವುಗಳು ಈ ನಾಟಕದ ಕಥಾ ವಸ್ತು. ಉಮಾಶ್ರೀಯವರು ತಮ್ಮ ಅದ್ಭುತ ಹಾವ, ಭಾವ, ಅಭಿನಯದಿಂದ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಏಕವ್ಯಕ್ತಿಯ ರಂಗ ಪ್ರಯೋಗಗಳು ಅಪರೂಪವಾಗುತ್ತಿರುವ ಇಂದಿನ ದಿನಗಳಲ್ಲಿ ಕರ್ನಾಟಕದ ಉದಯೋನ್ಮುಖ ನಾಟಕಕಾರರಾದ ಬೇಲೂರು ರಘುನಂದನ ಈ ನಾಟಕವನ್ನು ರಚಿಸಿದ್ದು, ಕರ್ನಾಟಕದ ಪ್ರಸಿದ್ಧ ರಂಗ ನಿರ್ದೇಶಕ ಮೈಸೂರು ರಂಗಾಯಣದ ಮಾಜಿ ನಿರ್ದೇಶಕರು, ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಚಿದಂಬರರಾವ್ ಜಂಬೆ ನಿರ್ದೇಶಸಿದ್ದಾರೆ. ಈ ನಾಟಕಕ್ಕೆ ಅನುಷ್ ಶೆಟ್ಟಿಯವರ ಸಂಗೀತ, ವಸ್ತ್ರವಿನ್ಯಾಸ, ರಂಗ ಸಜ್ಜಿಕೆ ಮತ್ತು ರಂಗ ಪರಿಕರಗಳ ನಿರ್ವಹಣೆ ಪ್ರಮೋದ ಶಿಗ್ಗಾಂವ ಮಾಡಿದ್ದಾರೆ. ನಾಟಕದ ಬಳಿಕ ಕಲಾವಿದೆ ಉಮಾಶ್ರೀಯವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ರಂಗಸಂಪದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿ ಮಾತನಾಡಿ, ನಾಟಕ ನೋಡುವ ಪ್ರೇಕ್ಷಕರ ಕೊರತೆಯಿಲ್ಲ. ಒಳ್ಳೆಯ ನಾಟಕಗಳನ್ನು ನೀಡಿದಲ್ಲಿ ಪ್ರೇಕ್ಷಕರು ಖಂಡಿತ ಬರುತ್ತಾರೆ ಎಂಬುದಕ್ಕೆ ರಂಗಮಂದಿರವೇ ಸಾಕ್ಷಿ ಎಂದರು. ಡಾ. ಬಸವರಾಜ ಜಗಜಂಪಿ, ಪ್ರೊ. ಎಂ.ಎಸ್. ಇಂಚಲ, ಎಲ್.ಎಸ್. ಶಾಸ್ತ್ರಿ, ಜಯಂತ ಜೋಶಿ, ಡಾ. ಸರಜೂ ಕಾಟ್ಕರ್, ರವಿ ಭಜಂತ್ರಿ, ಸುರೇಖಾ ದೇಸಾಯಿ, ಜ್ಯೋತಿ ಬದಾಮಿ, ರಾಮಚಂದ್ರ ಕಟ್ಟಿ, ಗುರುನಾಥ ಕುಲಕರ್ಣಿ, ಪ್ರಸಾದ ಕಾರಜೋಳ, ಅನಂತ ಪಪ್ಪು, ಪದ್ಮಾ ಕುಲಕರ್ಣಿ, ಯೋಗೇಶ ದೇಶಪಾಂಡೆ, ಚಿದಾನಂದ ವಾಳ್ಯ, ವಿನೋದ ಸಪ್ಪಣ್ಣವರ, ಎ.ಎಂ. ಕುಲಕರ್ಣಿ ಉಪಸ್ಥಿತರಿದ್ದರು.