ಮಂಗಳೂರು : ಉಮ್ಮಕ್ಕೆ ನೆಂಪು ಕೂಟ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಬೋಳಾರದ ದಿ. ಉಮಾವತಿ ಇವರ ಕಾರ್ಯಚಟುವಟಿಕೆಯನ್ನು ನೆನಪಿಸಿಕೊಳ್ಳುವ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಉಮ್ಮಕ್ಕೆ ನೆಂಪು ಕೂಟ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಮ್ಮಕ್ಕ ನೆಂಪು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಮೂರನೇ ವರ್ಷಾಂತಿಕೆಯ ‘ಉಮ್ಮಕ್ಕೆನ ನೆಂಪು’ ಕಾರ್ಯಕ್ರಮ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ (ರಿ.) ಸಹಭಾಗಿತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ದಿನಾಂಕ 17 ಆಗಸ್ಟ್ 2025ರ ಭಾನುವಾರದಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ. ಉಮ್ಮಕ್ಕೆ ನೆಂಪು ಕೂಡುಕಟ್ಟ್ ದ ಪಾತೆರಕತೆ, ದತ್ತಿ ನಿಧಿ ಉಪನ್ಯಾಸ, ವಿದ್ಯಾರ್ಥಿನಿಯರಿಗೆ ಉಮ್ಮಕ್ಕೆ ನೆಂಪು ಪಣವುದ ಬೆರಿಸಾಯ, ಸಂತ ಕವಿ ಕನಕದಾಸ ಪ್ರಶಸ್ತಿ ಪ್ರದಾನ ಹಾಗೂ ಪದರಂಗಿತ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿದೆ.
ಉಮೆಕ್ಕೆನ ನೆಂಪು ಕುರಿತ ಕೂಡು ಕಟ್ಟುದ ಪಾತೆರಕತೆಯನ್ನು ಮಂಗಳೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಜಾರಾಮ ತೋಲ್ಪಾಡಿಯವರು ನಡೆಸಿಕೊಡುವರು. ಚೇಳ್ಯಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮತ್ತು ಲೇಖಕಿ ಡಾ. ಜ್ಯೋತಿ ಚೇಳ್ಯಾರು ವಿಶೇಷ ದತ್ತಿ ಉಪನ್ಯಾಸ ನೀಡಲಿದ್ದಾರೆ. ಉಮ್ಮಕ್ಕೆ ನೆಂಪು ಪಣವುದ ಬೆರಿಸಾಯ ತಲಾ ರೂ.10,000/- ವನ್ನು ಕನ್ನಡ ಮಾಧ್ಯಮದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರೌಢ ಶಾಲಾ ಮಟ್ಟದಲ್ಲಿ ಅಧಿಕ ಅಂಕಗಳಿಸಿದ ಸಾಮಾಜಿಕ, ಆರ್ಥಿಕ ಬಡ ವಿದ್ಯಾರ್ಥಿನಿಯರಾದ ಗುರವಾಯನಕೆರೆ ಸರಕಾರಿ ಪ್ರೌಢ ಶಾಲೆಯ ಫಾತಿಮಾತ್ ರಿಫಾನ, ಮಾನಿಲ ಸರಕಾರಿ ಪ್ರೌಢಶಾಲೆಯ ಶೈನಾ ಲೀಸಾ ಮೊಂತೇರೋ ಮತ್ತು ಮಂಗಳೂರಿನ ಜಪ್ಪು ಕಾಸ್ಸಿಯ ಪ್ರೌಢಶಾಲೆಯ ಪ್ರಜ್ಞಾ ಇವರುಗಳಿಗೆ ನೀಡಲಾಗುವುದು.
ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ಸೇವೆಗೈದ ಮಹನೀಯರಿಗೆ ‘ಸಂತಕವಿ ಕನಕದಾಸ ಪ್ರಶಸ್ತಿ’ ನೀಡುವ ಕಾರ್ಯಕ್ರಮವನ್ನು ಈ ವರ್ಷ ಪ್ರಾರಂಬಿಸಿದ್ದು, ಈ ಬಾರಿ, ಹಿರಿಯ ಸಾಮಾಜಿಕ, ಸಾಂಸ್ಕೃತಿಕ. ಸಾಹಿತ್ಯಕ ಸಂಘಟಕ ಮತ್ತು ಜನಪರ ಹೋರಾಟಗಾರ ವಾಸುದೇವ ಉಚ್ಚಿಲರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಕೆ. ರಾಜು ಮೊಗವೀರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ರೂ.30,000/- ನಗದು ಮತ್ತು ಸ್ಮರಣಿಕೆ ಫಲಕಗಳನ್ನು ಒಳಗೊಂಡಿದೆ. ಸಮಾರಂಭದ ಅಧ್ಯಕ್ಷತೆಯನ್ನು ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಇವರು ವಹಿಸಲಿದ್ದಾರೆ. ಪದರಂಗಿತ ಬಾವಗೀತಾ ಕಾರ್ಯಕ್ರಮವನ್ನು ಕಿನ್ನಿಗೋಳಿ ಸ್ವರಾಂಜಲಿಯ ಕುಮಾರಿ ಆಶ್ವೀಜಾ ಉಡುಪ ನಡೆಸಿ ಕೊಡಲಿದ್ದಾರೆ.
ಪತ್ರಿಕಾ ಗೋಷ್ಟಿಯಲ್ಲಿ ಉಮ್ಮಕ್ಕೆ ನೆಂಪು ಕೂಟ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಪ್ರೊ. ಬಿ. ಶಿವರಾಮ ಶೆಟ್ಟಿ, ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಕಾರ್ಯದರ್ಶಿ ಕೃಷ್ಣಮೂರ್ತಿ, ಜೊತೆ ಕಾರ್ಯದರ್ಶಿ ಶ್ರೀಮತಿ ಸುಚಿತಾ, ಸದಸ್ಯರಾಗಿರುವ ಶ್ರೀ ಪ್ರಲ್ಹಾದ್, ನಿಶಾನ್ ಶೆಟ್ಟಿ, ಕರಾವಳಿ ಲೇಖಕಿ ವಾಚಕಿಯರ ಸಂಘದ ಕಾರ್ಯದರ್ಶಿ ಶ್ರೀಮತಿ ಯಶೋಧ ಮೋಹನ್ ಉಪಸ್ಥಿತರಿದ್ದರು.