ಬೆಂಗಳೂರು : ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಬಾಪು ಪದ್ಮನಾಭ ಹಲವು ಸಂಗೀತದ ಅನ್ವೇಷಣೆಗಳನ್ನು ಯಶಸ್ವಿಯಾಗಿ ಮಾಡಿದವರು. ಅವರ ಪ್ರಯೋಗಶೀಲ ಸಂಗೀತದ ಆಲ್ಭಂಗಳು ಜಾಗತಿಕ ಮನ್ನಣೆಯನ್ನು ಪಡೆದಿವೆ. ಪಂಡಿತ್ ಹರಿಪ್ರಸಾದ್ ಚೌರಾಸಿಯಾರವರ ನೇರ ಶಿಷ್ಯರಾದ ಇವರು ಸಾಹಿತ್ಯ ಮತ್ತು ಸಂಗೀತವನ್ನು ಬೆಸೆಯುವ ನೆಲೆಯಲ್ಲಿಯೂ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ವಚನಗಳನ್ನು ಅಂತರಂಗದ ಧ್ವನಿಯಾಗಿ ನೋಡುವ, ಅವುಗಳ ಸಾರ್ವಕಾಲಿಕ ನೆಲೆಗಳನ್ನು ಹಿಡಿಯುವ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ.
‘ವಚನ ದನಿ’ ಬಾಪು ಪದ್ಮನಾಭರವರ ವಿಶಿಷ್ಟ ಪ್ರಯತ್ನ. ವಚನಗಳ ಸ್ವರೂಪದ ಸೂಕ್ಷ್ಮಗಳನ್ನು ಸಂಗೀತದ ಮೂಲಕ ಅರಸುವ ಈ ವಿಶಿಷ್ಟ ಪ್ರಾತ್ಯಕ್ಷಿಕೆಯನ್ನು ಅಂತರ್ಧ್ವನಿ ಇವರ ವತಿಯಿಂದ ಇಂಡಿಯನ್ ಇನ್ಸಿಟ್ಯೂಟ್ ಆಫ್ ವಲ್ಡ್ ಕಲ್ಚರ್ ನಲ್ಲಿ ದಿನಾಂಕ 18 ನವಂಬರ್ 2025ರ ಮಂಗಳವಾರ ಸಂಜೆ ಗಂಟೆ 6-30ಕ್ಕೆ ಅಯೋಜಿತವಾಗಿದೆ. ಬಾಪು ಪದ್ಮನಾಭ ಇವರಿಗೆ ರಾಷ್ಟ್ರಪ್ರಶಸ್ತಿಯನ್ನು ತಂದು ಕೊಟ್ಟ ‘ಅಲ್ಲಮ’ ಚಿತ್ರದ ನಿರ್ದೇಶಕ ಡಾ. ಟಿ.ಎಸ್. ನಾಗಾಭರಣ ಇವರು ಇದಕ್ಕೆ ರಂಗರೂಪವನ್ನು ನೀಡಿದ್ದು, ಶ್ರೀಮತಿ ನಾಗಣಿ ಭರಣ ವಸ್ತ್ರವಿನ್ಯಾಸವನ್ನು ಮಾಡಿದ್ದಾರೆ. ಬೆನಕ ರಂಗತಂಡ ಇದರ ಪ್ರಯೋಗಕ್ಕೆ ಸಹಕಾರ ನೀಡಿದೆ.

