ಉಡುಪಿ : ಭಾಷಾ ಉಪನ್ಯಾಸಕಿ, ಜಾನಪದ ಸಾಹಿತಿ, ಸಂಶೋಧಕಿ ಡಾ. ಸಾಯಿಗೀತಾ ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ ಕೊಡಲ್ಪಡುವ ‘ಡಾ. ಯು.ಪಿ. ಉಪಾಧ್ಯಾಯ ಮತ್ತು ಡಾ. ಸುಶೀಲಾ ಪಿ. ಉಪಾಧ್ಯಾಯ ಸಂಶೋಧನಾ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಬಹುಭಾಷಾ ವಿದ್ವಾಂಸರು, ತುಳು ನಿಘಂಟು ರಚನೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಡಾ. ಯು.ಪಿ. ಉಪಾಧ್ಯಾಯ ಮತ್ತು ಡಾ. ಸುಶೀಲಾ ಪಿ. ಉಪಾಧ್ಯಾಯ ಅವರ ನೆನಪಿನಲ್ಲಿ ಈ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯು ರೂ.10,000/- ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ.
ಡಾ. ಸಾಯಿಗೀತಾ ಅವರು ಮಂಗಳೂರಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥರಾಗಿ, ಸಹಾಯಕ ಭಾಷಾ ಪ್ರಾಧ್ಯಾಪಿಕೆಯಾಗಿ, ನಿಟ್ಟೆ ವಿವಿ ತುಳು ಅಧ್ಯಯನ ಕೇಂದ್ರದ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ತುಳುವ ಪರಿಪುಡು ಪೊಣ್ಣ ಮೂಲಕಟ್’ ವಿಷಯದ ಕುರಿತು ಕುಪ್ಪಂನ ದ್ರಾವಿಡಿಯನ್ ವಿ.ವಿ.ಯಿಂದ ಪಿ.ಎಚ್.ಡಿ. ಪಡೆದಿದ್ದಾರೆ. ಗೋವಿಂದ ಪೈ ಸಂಶೋಧನಾ ಕೇಂದ್ರದ ‘ಹಿಸ್ಟರಿ ಆಫ್ ಬಂಟ್ಸ್’ ಸಂಶೋಧನಾ ಯೋಜನೆಯಲ್ಲಿ ಸಂಶೋಧನಾ ಸಹಾಯಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ‘ತುಳುವರ್ ತೆನಸ್ ಅಸರ್ದ ಪೊರ್ಲು ತಿರ್ಲ್’, ಜಾನಪದ ಅಕಾಡೆಮಿಯ ಜಾನಪದ ನಿಘಂಟು ಯೋಜನೆ, ಜಾನಪದ ವಿ.ವಿ.ಯ ‘ಕನ್ನಡ ಜಾನಪದ ನುಡಿಕೋಶ’ ಮುಂತಾದ ಯೋಜನೆಗಳಲ್ಲಿ ಸಂಶೋಧನಾ ಸಹಾಯಕಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.
ಡಾ.ಸಾಯಿಗೀತಾ ಅವರ 25ಕ್ಕೂ ಹೆಚ್ಚು ಲೇಖನಗಳು, ‘ಎರಡು ನೋಟಗಳು’ ಕವನ ಸಂಗ್ರಹ, ಕನ್ನಡ ನುಡಿ ಕಲಿಕೆಗೊಂದು ಕೈಪಿಡಿ, ವೈದ್ಯಸಾರ (ಜನಪದ ಔಷಧಿ) ಪುಸ್ತಕಗಳು ಪ್ರಕಟವಾಗಿವೆ.