ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಉತ್ತಂಗಿ ಚೆನ್ನಪ್ಪನವರ ಜನ್ಮದಿನೋತ್ಸವವನ್ನು ದಿನಾಂಕ 28-10-2023ರ ಶನಿವಾರದಂದು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ “ಅಭಿನವ ಸರ್ವಜ್ಞ ಎಂದೇ ಖ್ಯಾತರಾಗಿರುವ ರೆವರೆಂಡ್ ಉತ್ತಂಗಿ ಚೆನ್ನಪ್ಪನವರು ದೀರ್ಘಕಾಲ ಅಜ್ಞಾತ ಕವಿಯಾಗಿಯೇ ಇದ್ದ ಸರ್ವಜ್ಞನ ಕುರಿತು ಸಂಶೋಧನೆ ಮಾಡಿ ‘ಸರ್ವಜ್ಞನ ವಚನಗಳು’ ಕೃತಿಯನ್ನು ಹೊರ ತಂದರು. ಈ ಮೂಲಕ ಕನ್ನಡ ಸಾಹಿತ್ಯದಲ್ಲಿ ಸರ್ವಜ್ಞನ ಕುರಿತು ಚರ್ಚೆಗಳು ಆರಂಭವಾಗಲು ಕಾರಣವಾಯಿತು. 1881ರ ಅಕ್ಟೋಬರ್ 28ರಂದು ಧಾರವಾಡದಲ್ಲಿ ಜನಿಸಿದ ಚೆನ್ನಪ್ಪನವರು ಕ್ರೈಸ್ತ ಧರ್ಮೋಪದೇಶಕರಾಗಿದ್ದರೂ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡವರು. ಬೈಬಲ್ ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿ ಗ್ರೀಕ್ ಮತ್ತು ಹಿಬ್ರೂ ಭಾಷೆಗಳನ್ನು ಕಲಿತು ಅವುಗಳ ಮೂಲ ಪಾಠಗಳನ್ನು ಇಟ್ಟು ಕೊಂಡು ಕನ್ನಡ ಬೈಬಲ್ ಸಿದ್ದಗೊಳಿಸಿದ ಹೆಗ್ಗಳಿಕೆ ಅವರದು. ಸ್ವಾತಂತ್ರ‍್ಯ ಚಳುವಳಿಯಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದ ಇವರು ಬಸವೇಶ್ವರರೂ ಅಸ್ಪೃಶ್ಯರ ಉದ್ದಾರ, ಸಿದ್ಧರಾಮ ಸಾಹಿತ್ಯ ಸಂಗ್ರಹ, ಮೋಳಿಗೆ ಮಾರಯ್ಯ, ರಾಣಿ ಮಹಾದೇವಿ, ಆದಯ್ಯ ಮೊದಲಾದವರ ವಚನಗಳ ಸಂಗ್ರಹದಂತಹ ಪ್ರಮುಖ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದರು. 1949ರಲ್ಲಿ ಕಲ್ಬುರ್ಗಿಯಲ್ಲಿ ನಡೆದ 32ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಉತ್ತಂಗಿ ಚೆನ್ನಪ್ಪನವರು ಸಮ್ಮೇಳನಾಧ್ಯಕ್ಷರೇ ಪರಿಷತ್ತಿನ ಅಧ್ಯಕ್ಷರಾಗುವ ಆಗಿದ್ದ ಪದ್ಧತಿಯಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದರು. ಅವರ ಅವಧಿಯಲ್ಲಿ ಎಂ.ಎಚ್.ಕೃಷ್ಣ ಅವರ ‘ಕರ್ನಾಟಕದ ಕಲೆಗಳು’ ಎನ್ನುವ ಬಹುಮುಖ್ಯವಾದ ಪುಸ್ತಕ ಪ್ರಕಟವಾಯಿತು. ಅವರ ಕಾಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆರ್ಥಿಕ ಸ್ಥಿತಿಯನ್ನು ಗಟ್ಟಿಗೊಳಿಸಲು ಪ್ರಕಟಣೆಗಳನ್ನು ಹೆಚ್ಚು ಮಾಡಿದರು. 1952ರ ಆಗಸ್ಟ್ 28ರಂದು ಅವರು ನಿಧನರಾದ ನಂತರ ಅವರ ಬಹಳ ಮುಖ್ಯಕೃತಿಗಳಾದ ಮೃತ್ಯುಂಜಯ ಮತ್ತು ಲಿಂಗಾಯತ ಧರ್ಮ ಮತ್ತು ಕ್ರೈಸ್ತ ಧರ್ಮ ಪ್ರಕಟವಾಯಿತು. 1981ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅವರ ಜನ್ಮಶತಮಾನೋತ್ಸವವನ್ನು ಆಚರಿಸಿ ‘ಉತ್ತಂಗಿ ಚೆನ್ನಪ್ಪನವರು’ ಎನ್ನುವ ಅವರ ಜೀವನ ಮತ್ತು ಸಾಧನೆಗಳನ್ನು ಹೇಳುವ ಕೃತಿಯನ್ನು ಪ್ರಕಟಿಸಿತು”. ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗಿನ ಉತ್ತಂಗಿಯವರ ಒಡನಾಟವನ್ನು ನೆನಪು ಮಾಡಿ ಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ.ಎನ್.ಎಸ್.ಶ್ರೀಧರ ಮೂರ್ತಿಯವರು ಮಾತನಾಡಿ “ಎಂ.ನರೇಂದ್ರ ಬಾಬು ಅವರು ‘ಸರ್ವಜ್ಞ ಮೂರ್ತಿ’ ಚಿತ್ರವನ್ನು ನಿರ್ಮಿಸಲು ನಿರ್ಧರಿಸಿದಾಗ ಉತ್ತಂಗಿ ಚೆನ್ನಪ್ಪನವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಆದರೆ ಸರ್ವಜ್ಞನ ಹೆಸರು ಕೇಳುತ್ತಲೇ ದೇಹದಲ್ಲಿ ಮಿಂಚಿನ ಸಂಚಾರವಾದಂತೆ ಎದ್ದು ಕುಳಿತ ಅವರು ಚಿತ್ರದ ಸ್ವರೂಪ ಹೇಗಿರಬೇಕು, ಚಿತ್ರಕಥೆ ಹೇಗಿರಬೇಕು ಎಂದೆಲ್ಲ ವಿವರಿಸಿದ್ದಲ್ಲದೆ ಒಂದೆರಡು ದಿನಗಳಲ್ಲಿ ಅದನ್ನು ಬರೆದೂ ಕೊಟ್ಟರು, ಸರ್ವಜ್ಞನ ಪಾತ್ರ ವಹಿಸಲು ನಿರ್ಧಾರವಾಗಿದ್ದ ಡಾ.ರಾಜ್ ಕುಮಾರ್ ಅವರಿಗೆ ಸರ್ವಜ್ಞನ ವ್ಯಕ್ತಿತ್ವವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ಅಬಲೂರಿನಲ್ಲಿ ಚಿತ್ರದ ಮಹೂರ್ತ ನಡೆದಾಗ ಭಾಗವಹಿಸಿ ಕ್ಯಾಮರಾ ಚಾಲನೆ ಮಾಡಿದ್ದರು. ಆದರೆ ದುರದೃಷ್ಟವಶಾತ್ ಚಿತ್ರ ಬಿಡುಗಡೆಯಾದಾಗ ಅವರು ಇರಲಿಲ್ಲ” ಎಂದು ಉತ್ತಂಗಿ ಚೆನ್ನಪ್ಪನವರ ಚಿತ್ರರಂಗದ ಒಡನಾಟವನ್ನು ನೆನಪು ಮಾಡಿ ಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು. ಕೋಶಾಧ್ಯಕ್ಷರಾದ ಪಟೇಲ್ ಪಾಂಡು, ಅರಸೀಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಕೆ.ವಿ. ಶಿವಮೂರ್ತಿ, ಪರಿಷತ್ತಿನ ಸಂಘ-ಸಂಸ್ಥೆಗಳ ಪ್ರತಿನಿಧಿ ಬಿ.ಎಚ್. ಸತೀಶ್ ಗೌಡ, ವಿಶೇಷ ಕರ್ತವ್ಯಾಧಿಕಾರಿ ಚಿಕ್ಕ ತಿಮ್ಮಯ್ಯ ಮತ್ತು ಪರಿಷತ್ತಿನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.