ಕಾಸರಗೋಡು: ಕಲ್ಲಕಟ್ಟದ ಕೆ. ಜಿ. ಭಟ್ ಗ್ರಂಥಾಲಯದ ವತಿಯಿಂದ ವಾಚನಾ_ ಪಕ್ಷಾಚರಣೆ, ಕಯ್ಯಾರ ಕಿಞ್ಞಣ್ಣ ರೈ ಅವರ ಸಂಸ್ಮರಣೆ ಹಾಗೂ ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ ಪುರಸ್ಕೃತ ಪ್ರಾಧ್ಯಾಪಕ ಪ್ರೊ. ಎ.ಶ್ರೀ ನಾಥ್ ಇವರಿಗೆ ಅಭಿನಂದನಾ ಕಾರ್ಯಕ್ರಮವು ದಿನಾಂಕ 29 ಜೂನ್ 2025ರಂದು ಕಲ್ಲಕಟ್ಟ ಮದ್ದೂರರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮಾತನಾಡಿ “ಗಡಿನಾಡ ಚೇತನ ಕಯ್ಯಾರ ಕಿಞ್ಞಣ್ಣ ರೈಗಳು ಬದುಕು ಬರಹಗಳ ಮೂಲಕ ನವ ಸಮಾಜ ನಿರ್ಮಿಸಿದವರು. ನವೋದಯ ಸಾಹಿತ್ಯದ ಆರಂಭ ಕಾಲದಲ್ಲಿ ಸಾಹಿತ್ಯ ವಲಯಕ್ಕೆ ಪ್ರವೇಶಿಸಿದ ಅವರ ಕಾವ್ಯ ಪರಂಪರೆ ಬಹುಮುಖಗಳೊಡನೆ ಕನ್ನಡ ನಾಡು ನುಡಿಗೆ ಅಮೂಲ್ಯ ಸಾಹಿತ್ಯ ರತ್ನಗಳನ್ನು ನೀಡುವಲ್ಲಿ ಸಾಫಲ್ಯಗೊಂಡಿತು. ಆದರ್ಶ ಜೀವನ ನಡೆಸಿದ್ದ ಕಯ್ಯಾರರು ಬದುಕಿನ ಕೊನೆವರೆಗೂ ಖಾದಿ ವಸ್ತ್ರಧಾರಿಗಳಾಗಿ ಮಹಾತ್ಮನ ಹಾದಿಯಲ್ಲಿ ನಡೆದವರು. ದಕ್ಷ ರಾಜಕಾರಣಿಯಾಗಿಯೂ ಗಮನ ಸೆಳೆದಿದ್ದರು. ಅಧ್ಯಾಪನ, ಮಾಧ್ಯಮ, ಕೃಷಿ, ಸಂಶೋಧನೆ ಸಹಿತ ವಿವಿಧ ರಂಗಗಳಲ್ಲಿ ಅವರು ಅಚ್ಚಳಿಯದ ಸಾಧನೆಗಳ ಸಾಧಿಸಿ ಮೆರೆದವರು” ಎಂದರು.
ಗ್ರಂಥಾಲಯದ ಅಧ್ಯಕ್ಷರಾದ ಕೆ.ವೇಣುಗೋಪಾಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಯ್ಯಾರ ಪ್ರಶಸ್ತಿ ಪುರಸ್ಕೃತ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎ. ಶ್ರೀನಾಥ್ ಇವರನ್ನು ಅಭಿನಂದಿಸಿ ಗೌರವಿಸಲಾಯಿತು. ಶಾಲಾ ಪ್ರಬಂಧಕ ಪಿ. ವಿ. ಶಿವರಾಮ ಮಾಸ್ತರ್, ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀ ಟೀಚರ್, ನಿವೃತ್ತ ವಾಯು ಸೇನಾಧಿಕಾರಿ ತಿರುಮಲೇಶ್ವರ ಭಟ್ ಪಜ್ಜ, ನಿವೃತ್ತ ಜೈಲು ಮೇಲ್ವಿಚಾರಕ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರಾದ ನಾರಾಯಣನ್ ನಾಯರ್ ಉಪಸ್ಥಿತರಿದ್ದರು. ಕೆ. ಕೆ. ಗಣೇಶ್ ಸ್ವಾಗತಿಸಿ, ಗ್ರಂಥ ಪಾಲಕಿ ಮಂಜು ವಿಜಯ್ ವಂದಿಸಿದರು.