ಮಂಗಳೂರು : ತೆಂಕುತಿಟ್ಟು ಯಕ್ಷಗಾನದಲ್ಲಿ ಮರೆಯಾಗಿರುವ ರಾಮಾಯಣ ಪ್ರಸಂಗದ ವಾಲಿ ಹಾಗೂ ಸುಗ್ರೀವರ ಒಡ್ಡೋಲಗವನ್ನು ಅಧ್ಯಯನ ಸಂಶೋಧನೆ ನಡೆಸಿ ದಾಖಲೀಕರಣ ಮಾಡುವ ಹೊಸ ಪ್ರಯತ್ನವನ್ನು ಯಕ್ಷಗಾನ ಚಿಂತಕ ರಾಜಗೋಪಾಲ್ ಕನ್ಯಾನ ನಡೆಸಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಸೂರಿಕುಮೇರು ಮಾರ್ಗದರ್ಶನ ಹಾಗೂ ನಿರ್ದೇಶನದಲ್ಲಿ ಪಾರಂಪರಿಕ ಪ್ರದರ್ಶನದ ವೀಡಿಯೋ ಚಿತ್ರೀಕರಣ ಮೂಲಕ ದಾಖಲೀಕರಣ ನಡೆಸಲಾಗಿದೆ. ಗೋವಿಂದ ಭಟ್ಟರ ಶಿಷ್ಯ ಧರ್ಮೇಂದ್ರ ಆಚಾರ್ಯ ಕೂಡ್ಲು ಹಾಗೂ ಶಿಷ್ಯವೃಂದದವರು ಭಾಗವಹಿಸಿದ್ದಾರೆ.
ವಾಲಿ-ಸುಗ್ರೀವರ ಒಡ್ಡೋಲಗ ವಿಡಿಯೋ ಬಿಡುಗಡೆ ಮಂಗಳೂರಿನ ಪತ್ರಿಕಾಭವನದಲ್ಲಿ ದಿನಾಂಕ 19-10-2023ರಂದು ನಡೆಯಿತು. ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಸೂರಿಕುಮೇರು ಅವರು ಮಾತನಾಡಿ, “ತೆಂಕುತಿಟ್ಟು ಯಕ್ಷಗಾನವು ಈವರೆಗೆ ಹಲವು ಪ್ರಮುಖ ಅಂಶಗಳನ್ನು ಕಳೆದುಕೊಂಡಿದ್ದು ಇದೆ. ಈ ಸಾಲಿನಲ್ಲಿ ರಾಮಾಯಣ ಪ್ರಸಂಗದ ವಾಲಿ ಹಾಗೂ ಸುಗ್ರೀವರ ಒಡ್ಡೋಲಗವೂ ಒಂದಾಗಿದೆ. ಇದನ್ನು ರಾಜಗೋಪಾಲ್ ಕನ್ಯಾನ ಅವರು ದಾಖಲಾತಿ ಮಾಡಿದ್ದಾರೆ” ಎಂದರು.
ಕಸಪಾ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ವೀಡಿಯೋ ದಾಖಲೀಕರಣವನ್ನು ಉದ್ಘಾಟಿಸಿ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು, “1950ರಿಂದ ರಂಗವೇರದ ವಾಲಿ, ಸುಗ್ರೀವರ ಒಡ್ಡೋಲಗ ಅಳಿಯುವ ಅಂಚಿನಲ್ಲಿತ್ತು. ಇದನ್ನು ತಿಳಿದವರು ಒಂದಿಬ್ಬರು ಮಾತ್ರ ಇದ್ದರು. ಆ ಪೈಕಿ ಗೋವಿಂದ ಭಟ್ ಸೂರಿಕುಮೇರು ಪ್ರಮುಖರಾಗಿದ್ದರು. ಇದನ್ನು ಮನಗಂಡು ರಾಜಗೋಪಾಲ್ ಕನ್ಯಾನ ಅವರ ಮುತುವರ್ಜಿಯಿಂದ ಮಧುಸೂದನ ಅಲೆವೂರಾಯರ ಮೂಲಕ ದಾಖಲೀಕರಣ ನಡೆದಿರುವುದು ಅಭಿನಂದನೀಯ” ಎಂದರು.
ನಾಟ್ಯ ಹಾಗೂ ಯಕ್ಷಾರಾಧನಾ ಕಲಾಕೇಂದ್ರದ ವಿದುಷಿ ಸುಮಂಗಲಾ ರತ್ನಾಕರ್ ಮತ್ತು ಯಕ್ಷಗಾನ ಚಿಂತಕ ರಾಜಗೋಪಾಲ್ ಕನ್ಯಾನ ಉಪಸ್ಥಿತರಿದ್ದರು.