ಸುಳ್ಯ : ಸುಳ್ಯದ ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿಯನ್ನು ಉದ್ದೀಪನಗೊಳಿಸುವ ಸಲುವಾಗಿ ದಿನಾಂಕ 25-09-2023ರಂದು ‘ವಾಚನಾಭಿರುಚಿ ಮತ್ತು ಬರಹ ಕಲೆ’ ಅನ್ನುವ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯುವ ಸಾಹಿತಿ ಉದಯಭಾಸ್ಕರ್ ಸುಳ್ಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನಡೆಸಿಕೊಟ್ಟರು.
“ಕೇವಲ ಕೃತಿ ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಅರ್ಪಣೆ ಮಾಡುವುದು ಮಾತ್ರವೇ ಸಾಹಿತ್ಯ ಲೋಕಕ್ಕೆ ಕೊಡಬಹುದಾದ ಕಾಣಿಕೆ ಅಲ್ಲ, ಬರಹದ ಕಲೆ ಇಲ್ಲದವರು ಕೂಡಾ ಗುಣಮಟ್ಟದ ಓದುಗರಾಗುವ ಮೂಲಕ ಮತ್ತು ಗುಣಮಟ್ಟದ ಓದುಗರನ್ನು ಸೃಷ್ಟಿಸುವ ಮೂಲಕವೂ ಸಾಹಿತ್ಯ ಲೋಕಕ್ಕೆ ಕಾಣಿಕೆಯನ್ನು ಕೊಡಬಹುದು. ಮನಸ್ಸನ್ನು ವಿಕಾರಗೊಳಿಸುವಂತಹ ಅಥವಾ ಸಮಾಜಘಾತುಕ ಶಕ್ತಿಗಳಿಗೂ ಪ್ರೇರಣೆ ಕೊಡುವಂತಹ ಅನೇಕ ಸಾಹಿತ್ಯಗಳಿವೆ, ಆದರೆ ಮನಸ್ಸನ್ನು ಅರಳಿಸುವಂತಹ ಮತ್ತು ನಮ್ಮನ್ನು ಸಮಾಜಮುಖಿಯಾಗಿ ಬದಲಿಸಬಹುದಾದ ಸಾಹಿತ್ಯಗಳನ್ನು ನಾವು ಆಯ್ಕೆ ಮಾಡಿಕೊಳ್ಳುವುದರಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು” ಎಂದು ಉದಯಭಾಸ್ಕರ್ ಸುಳ್ಯ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರಾದ ಆಜ್ಞಾ, ಪವಿತ್ರಾ , ಭೂಮಿಕಾ ಆಶಯ ಗೀತೆ ಹಾಡಿದ ನಂತರ ಕನ್ನಡ ಉಪನ್ಯಾಸಕಿ ಹಾಗೂ ಕಾರ್ಯಕ್ರಮ ಸಂಯೋಜಕಿ ಬೇಬಿ ವಿದ್ಯಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಾಯತ್ರಿ ಸ್ವಾಗತಿಸಿ, ವಿದ್ಯಾರ್ಥಿಯಾದ ಕೃತಸ್ವರ ದೀಪ್ತ ಸಂಪನ್ಮೂಲ ವ್ಯಕ್ತಿ ಉದಯಭಾಸ್ಕರರನ್ನು ಪರಿಚಯಿಸಿ, ಮಂಜು ವಂದಿಸಿದರು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಸಾವಿತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.