7 ಮಾರ್ಚ್ 2023, ಮಂಗಳೂರು: ಕೇವಲ ಮಾತಿನಲ್ಲೇ ಪೌರಾಣಿಕ ಲೋಕವನ್ನು ಸೃಷ್ಟಿಸುವ ಕಲೆ ತಾಳಮದ್ದಳೆ – ವಿಶ್ವನಾಥ ಪೈ
ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ ಸರಣಿ ಕಾರ್ಯಕ್ರಮ ಶ್ರೀ ಮಹಾಮಾಯಾ ದೇವಸ್ಥಾನದ ಆವರಣದಲ್ಲಿ ದಿನಾಂಕ 05-03-2023ರಂದು ಜರಗಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ವಿಶ್ವನಾಥ ಪೈ, ಸೀನಿಯರ್ ಪ್ರೋಗ್ರಾಮ್ ಮ್ಯಾನೇಜರ್, ಎ. ಪಿ. ಜೆ., ತಾಳಮದ್ದಳೆ ಧರ್ಮ, ಸಂಸ್ಕೃತಿಗಳನ್ನು ಪ್ರಚಾರ ಮಾಡುವ ಅದ್ಭುತ ಕಲೆ ಎಂದು ನುಡಿದರು. ಡಾ. ದಿನಕರ ಎಸ್. ಪಚ್ಚನಾಡಿ ಮತ್ತು ಮಿತ್ತಬೈಲು ಗಿರಿಧರ್ ನಾಯಕ್ ಇವರನ್ನು ಸಂಮಾನಿಸಲಾಯಿತು. ಪ್ರಸಂಗ ಕರ್ತ, ಅರ್ಥಧಾರಿ, ವೇಷಧಾರಿ, ಸಂಘಟಕ ಡಾ. ದಿನಕರ ಪಚ್ಚನಾಡಿಯವರನ್ನು ಸಂಘದ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಅಭಿನಂದಿಸಿದರು.
ಛಂದೋಬ್ರಹ್ಮ ಡಾ. ಸೀಮಂತೂರು ನಾರಾಯಣ ಶೆಟ್ಟರಲ್ಲಿ ಯಕ್ಷಗಾನ ಛಂದಸ್ಸಿನ ಆಳವಾದ ಅಧ್ಯಯನ ಮಾಡಿ 25ಕ್ಕೂ ಹೆಚ್ಚು ಜನಪ್ರಿಯ ಯಕ್ಷಗಾನ ಪ್ರಸಂಗಗಳನ್ನು ರಚಿಸಿದವರು ದಿನಕರರು. ಅರ್ಥಧಾರಿಯಾಗಿ, ವೇಷಧಾರಿಯಾಗಿ, ಹಲವು ಯಕ್ಷಗಾನ ಸಂಘಗಳನ್ನು ಹುಟ್ಟುಹಾಕಿ ಸಮರ್ಥವಾಗಿ ಮುನ್ನಡೆಸುತ್ತಿರುವವರು ದಿನಕರರು ಎಂದು ನವನೀತರು ನುಡಿದರು.
ಸಂಮಾನ ಪತ್ರವನ್ನು ಸಂಘಟನಾ ಕಾರ್ಯದರ್ಶಿ ಅಶೋಕ್ ಬೋಳೂರು ವಾಚಿಸಿದರು. ಮಿತ್ತಬೈಲು ಗಿರಿಧರ್ ನಾಯಕ್ ಅವರ ಅಭಿನಂದನೆಯನ್ನು ಸಂಘದ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಐತಾಳ್ ಗೈದರು.
ದೂರದ ದುಬೈಯಲ್ಲಿಯೂ ಯಕ್ಷಗಾನ ಕಲೆಯನ್ನು ಅಲ್ಲಿನವರೂ ಅಸ್ವಾದಿಸುವಂತೆ ಮಾಡಿದ ವೇಷಧಾರಿ, ಅರ್ಥಧಾರಿ, ನಾಟಕಗಳ ಹಿನ್ನೆಲೆ ಗಾಯಕ ಗಿರಿಧರ್ ನಾಯಕ ರ ಕಲಾ ಸೇವೆ ಅನನ್ಯ ಎಂದು ನುಡಿದರು. ಗಿರಿಧರ್ ನಾಯಕರ ಸಂಮಾನ ಪತ್ರವನ್ನು ಸಂಘದ ಕೋಶಾಧಿಕಾರಿ ಶಿವಪ್ರಸಾದ್ ಪ್ರಭು ವಾಚಿಸಿದರು. ಕೀರ್ತಿಶೇಷ ಆನಂದರ ಸಂಸ್ಮರಣೆಯನ್ನು ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಗೈದರು. ಚೆಂಡೆ ವಾದಕರಾಗಿ ಪ್ರಸಿದ್ಧರಾಗಿದ್ದ ಆನಂದರು ಸಂಘದಲ್ಲಿ ಸಲ್ಲಿಸಿದ ಕಲಾ ಸೇವೆಗಾಗಿ ನುಡಿ ನಮನ ಸಲ್ಲಿಸಲಾಯಿತು.
ಮುಖ್ಯ ಅತಿಥಿಗಳಾಗಿ, ಪ್ರಾಯೋಜಕರೂ ಆಗಿದ್ದ ಉಪೇಂದ್ರ ಟ್ರೇಡಿಂಗ್ ಕಂಪನಿ, ಬಂದರ್ ನ ಎಂ. ವರದರಾಜ ಶೆಣೈ, ಸಂಘದ ನೂರು ವರ್ಷಗಳ ಕಲಾ ಸೇವೆಯನ್ನು ಮುಕ್ತ ಕಂಠದಿಂದ ಹೊಗಳಿದರು. ಪ್ರಾಯೋಜಕ ಸುಜೀರ್ ವಾಸುದೇವ ನಾಯಕ್, ಈ ಸಂಘದಿಂಸ ಇನ್ನಷ್ಟು ಕಲಾವಿದರು ಸಂಮಾನಿತರಾಗಿ ಕಲೆಯ ಬೆಳವಣಿಗೆಗೆ ಕಾರಣವಾಗಲಿ ಎಂದು ಹಾರೈಸಿದರು.
ಇನ್ನೋರ್ವ ಪ್ರಾಯೋಜಕ ಹಾಗೂ ಅತಿಥಿಯಾಗಿದ್ದ ಲೆಕ್ಕ ಪರಿಶೋಧಕ ಸಿಎ.. ಕೆ.ಎಸ್. ಕಾಮತ್, ತಾನು ಯಕ್ಷಗಾನದಲ್ಲಿ ವೇಷ ಮಾಡಿದ್ದನ್ನು ಸ್ಮರಿಸಿ ಆ ಮೂಲಕ ಈ ಕಲೆಯ ಸ್ವಲ್ಪ ತಿರುಳನ್ನು ಅರಿಯುವಂತಾಯಿತೆಂದು ನುಡಿದರು.
ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಿ.ಎಸ್. ಭಂಡಾರಿ, ಉಪಾಧ್ಯಕ್ಷೆ ಪ್ರಫುಲ್ಲಾ ನಾಯಕ್, ಶಾಂತಾರಾಮ ಕುಡ್ವ ಮುಡಬಿದ್ರೆ, ಎಂ.ಆರ್. ಕಾಮತ್, ಶ್ರೀಮತಿ ಪೂರ್ಣಿಮಾ ಕಾಮತ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ರಾಮ ಪರಂಧಾಮ ತಾಳಮದ್ದಳೆ ಸಂಘದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಜರಗಿತು.

