22 ಫೆಬ್ರವರಿ 2023, ಮಂಗಳೂರು: ಯಕ್ಷಗಾನ ಕಲಾವಿದರ ಕಲಾ ಪ್ರೀತಿ ಅನನ್ಯ- ಗಣೇಶ್ ಕಾಮತ್
ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಸರಣಿ ಕಾರ್ಯಕ್ರಮ ಫೆಬ್ರವರಿ 19ರಂದು ಮಂಗಳೂರಿನ ಶ್ರೀ ಕುಡ್ತೇರಿ ಮಹಾಮಾಯಾ ದೇವಸ್ಥಾನದ ಆವರಣದಲ್ಲಿ ಇತ್ತೀಚಿಗೆ ಜರಗಿತು.ವಾಲ್ಪಾಡಿ ಮುರಳಿ ಭಟ್ ಇವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ನಡೆದ ಸಂಮಾನ ಕಾರ್ಯಕ್ರಮದಲ್ಲಿ ಮಾರುತಿ ನ್ಯೂಸ್ ಏಜೆನ್ಸಿಯ ಗಣೇಶ್ ಕಾಮತ್ ಅಧ್ಯಕ್ಷರಾಗಿದ್ದರು. ಸುಮಾರು ಐವತ್ತು ವರುಷಗಳ ಹಿಂದೆ ಅತೀ ಕಡಿಮೆ ಸಂಭಾವನೆ ಪಡೆದೂ, ಕಷ್ಟಕರ ಜೀವನ ನಡೆಸಿಯೂ ಕಲೆಯ ಮೇಲಿನ ಪ್ರೀತಿಯಿಂದ ದುಡಿದ ಕಲಾವಿದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತನ್ನ ತಂದೆಯವರು ಮೇಳದ ಆಟಗಳನ್ನು ಆಡಿಸುತ್ತಿದ್ದುದು ತನಗೂ ಯಕ್ಷಗಾನದ ಮೇಲೆ ಆಸಕ್ತಿ ಹುಟ್ಟಲು ಕಾರಣವಾಯಿತೆಂದರು. ಯಕ್ಷಗಾನ ಅರ್ಥಧಾರಿ, ವೇಷಧಾರಿ ಸಂಘಟಕ ಮುರಳಿ ಭಟ್ ವಾಲ್ಪಾಡಿ ಯವರನ್ನು ಸಂಘಟಕ ಬಿ. ಟಿ. ಕುಲಾಲ್ ಅಭಿನಂದಿಸಿದರು. ಭಾರತೀಯ ವಿದ್ಯಾಭವನದಲ್ಲಿ ಯಕ್ಷಗಾನ ಕಲಿತ ಬಳಿಕ ನಮ್ಮ ಸಂಘದಲ್ಲಿ ಅರ್ಥ ಹೇಳುತ್ತಾ, ವೇಷ ಮಾಡುತ್ತಾ ಕಲಾ ಸೇವೆಯನ್ನು ಮಾಡುತ್ತಾ ಬಂದವರೆಂದು ಕುಲಾಲ್ ನುಡಿದರು. ಸಂಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಮುರಳಿ ಭಟ್ ಶತಮಾನೋತ್ಸವ ಅಚರಿಸುತ್ತಿರುವ ಈ ಸಂಘದಲ್ಲಿ ತನಗೆ ಸಿಕ್ಕ ಸಂಮಾನ ತನ್ನ ಭಾಗ್ಯ ವಿಶೇಷ ಎಂದರು. ಸಂಮಾನ ಪತ್ರದ ವಾಚನವನ್ನು ಸಂಘದ ಸಂಘಟನಾ ಕಾರ್ಯದರ್ಶಿ ಅಶೋಕ್ ಬೋಳೂರು ಗೈದರು. ಅಗಲಿದ ಬಲಿಪ ನಾರಾಯಣ ಭಾಗವತರ ಸದ್ಗತಿಗಾಗಿ ಮೌನ ಪ್ರಾರ್ಥನೆ ಗೈಯಲಾಯಿತು.
ಕೀರ್ತಿಶೇಷ ತೆಕ್ಕಟ್ಟೆ ಆನಂದ ಮಾಸ್ತರ್ ರಿಗೆ ಕಾರ್ಯಕ್ರಮ ನಿರೂಪಕ, ಕೋಶಾಧಿಕಾರಿ ಶಿವಪ್ರಸಾದ್ ಪ್ರಭು ನುಡಿ ನಮನ ಸಲ್ಲಿಸಿದರು. ಸಂಘದ ಗೌರವಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ ಯಕ್ಷಗಾನ ನಮ್ಮ ಜೀವನದಲ್ಲಿ ಉತ್ತಮ ಸಂಸ್ಕಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇಂತಹ ಕಲೆಯ ಪ್ರಸಾರ ಮಾಡುತ್ತಿರುವ ಈ ಸಂಘ ಮಹಾಮಾಯೆಯ ಅನುಗ್ರಹದಿಂದ ಇನ್ನಷ್ಟು ಕಾಲ ಉಳಿಯಲೆಂದು ಹಾರೈಸಿದರು. ನಮ್ಮ ಸಂಘದ ಪ್ರಥಮ ಬಯಲಾಟ 1983 ರಲ್ಲಿ ನಡೆದಾಗ ದೇವಿ ಮಹಾತ್ಮೆ ಪ್ರಸಂಗ ಪ್ರತಿಯನ್ನು ಸ್ವಹಸ್ತದಿಂದ ಅಂದವಾಗಿ ಬರೆದು ಕೊಟ್ಟ ಶಾಂತಿ ಎನ್. ಬಾಳಿಗರು ಮುಖ್ಯ ಅತಿಥಿಯಾಗಿದ್ದರು. ತಮ್ಮ ಮನದಾಳದ ಮಾತಿನಲ್ಲಿ ಸಂಘಕ್ಕೆ ಶುಭವನ್ನು ಹಾರೈಸಿದರು.
ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಉಪಾಧ್ಯಕ್ಷೆ ಪ್ರಫುಲ್ಲಾ ನಾಯಕ್,ಹವ್ಯಾಸಿ ಬಳಗ ಕದ್ರಿ (ರಿ ) ಇದರ ಸಂಚಾಲಕ ಶರತ್ ಕುಮಾರ್,ಕದ್ರಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಕುಶ ಲವರ ಕಾಳಗ ತಾಳಮದ್ದಳೆ ಸಂಘದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಜರಗಿತು.
Subscribe to Updates
Get the latest creative news from FooBar about art, design and business.