21 ಮಾರ್ಚ್ 2023, ಮಂಗಳೂರು: ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಸಮಾರಂಭದ ಸಮಾರೋಪದ ಉದ್ಘಾಟನೆ ಶ್ರೀ ಮಹಾಮಾಯಿ ದೇವಸ್ಥಾನದ ಆವರಣದಲ್ಲಿ ದಿನಾಂಕ 19-03-2023 ಆದಿತ್ಯವಾರ ಬೆಳಿಗ್ಗೆ 9 ಘಂಟೆಗೆ ಜರಗಿತು.ಶ್ರೀ ಮಹಮ್ಮಾಯಿ ದೇವಸ್ಥಾನದ ಅರ್ಚಕ ವೃಂದದಿಂದ ದೀಪ ಬೆಳಗಿಸಲಾಯಿತು.ಸಂಘದ ಕಾರ್ಯಾಧಕ್ಷ ನಾಗೇಶ್ ಪ್ರಭುಗಳ ಅಧ್ಯಕ್ಷತೆಯಲ್ಲಿ ಮಕ್ಕಳ, ಮಹಿಳೆ ಮತ್ತು ಪುರುಷರ 3 ವಿಭಾಗಗಳಲ್ಲಿ ಪೀಠಿಕಾ ಸ್ಪರ್ಧೆಯ ಉದ್ಘಾಟನೆಯನ್ನು ಇಸ್ಕಾನ್ ಮಂಗಳೂರು ವಿಭಾಗದ ಕಾರ್ಯದರ್ಶಿ ಸನಂದನ ದಾಸ ನೆರವೇರಿಸಿದರು.ತಮ್ಮ ಅನುಗ್ರಹ ಸಂದೇಶದಲ್ಲಿ ಯಕ್ಷಗಾನ ಕಲೆಯ ಔನ್ನತ್ಯವನ್ನು ವಿವರಿಸುತ್ತ ಈ ಕಲೆಯತ್ತ ಎಳೆಯ ಮಕ್ಕಳು ಇನ್ನಷ್ಟು ಆಕರ್ಷಿತಾರಾಗಬೇಕೆಂದು ಕರೆ ಇತ್ತರು.ಯಾವ ರೀತಿ ಔಷದಗಳಿಗೆ ಸಿಹಿಯ ಲೇಪನ ಮಾಡಿದಾಗ ಸೇವಿಸುವುದಕ್ಕೆಆಹ್ಲಾದವಾಗುತ್ತದೋ, ಹಾಗೆಯೇ ಯಕ್ಷಗಾನವು ಮನರಂಜನೆಯೊಂದಿಗೆ ಮಧುರವಾದ ಸಂಗೀತ, ಪಾಂಡಿತ್ಯಪೂರ್ಣ ಪುರಾಣ ಜ್ಞಾನ ನೀಡುವ ಕಲೆ. ಈ ಕಲೆಯ ಪ್ರಚಾರ ಮಾಡುತ್ತಿರುವ ಇಂತಹ ಸಂಘಗಳು ಇನ್ನಷ್ಟು ಕಾಲ ಉಳಿಯಬೇಕೆಂದು ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ನಾಗೇಶ್ ಪ್ರಭು ಯಕ್ಷಗಾನ ಜ್ಞಾನ ಪ್ರಸಾರಕ್ಕೆ ಅತ್ಯಂತ ಸಹಕಾರಿ ಎಂದರು. 4 ದಶಕಗಳ ತನ್ನ ಈ ಸಂಘದ ಒಡನಾಟದಲ್ಲಿ ಮಹಾಮಾಯೆಯ ಅನುಗ್ರಹದ ಮಹಿಮೆಯನ್ನು ಮನಬಿಚ್ಚಿ ವಿವರಿಸಿದರು.ಕಾರ್ಯಕ್ರಮದಲ್ಲಿ ಇಸ್ಕಾನ್ ನ ರಾಧಾ ವಲ್ಲಭ ದಾಸ, ಜನಾರ್ದನ ಹಂದೆ, ಸರ್ಪಂಗಳ ಈಶ್ವರ ಭಟ್, ದೇವಸ್ಥಾನದ ಅರ್ಚಕರು, ಸಿ.ಎಸ್. ಭಂಡಾರಿ, ಶ್ರೀನಾಥ್ ಪ್ರಭು ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮೂರು ವಿಭಾಗಗಳಲ್ಲಿ ನಡೆದ ಪೀಠಿಕಾ ಸ್ಪರ್ಧೆಯಲ್ಲಿ 25 ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಸಂಜೆ 4.30 ಘಂಟೆಯವಗೆ ನಡೆದ ಸ್ಪರ್ಧೆಯ ಬಳಿಕ ಶತಮಾನೋತ್ಸವ ಸಮಾರೋಪ ಸಮಾರಂಭ ಗೌರವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ಡಾ. ಪ್ರಭಾಕರ ಎಂ. ಜೋಶಿ, ಸಿ.ಎ. ಶ್ರೀನಿವಾಸ ಕಾಮತ್, ಭಾಸ್ಕರ್ ರೈ ಕುಕ್ಕುವಳ್ಳಿ, ಎಂ. ನಾರಾಯಣ ಚಂಬಲ್ತಿಮಾರ್ ಭಾಗವಹಿಸಿದ್ದರು. 1937ರಲ್ಲಿ ಸ್ಥಾಪನೆಗೊಂಡ ಶ್ರೀ ಶಾರದಾ ಯಕ್ಷಗಾನ ಮಂಡಳಿ (ರಿ.), ಪೆರ್ಮುದೆಗೆ ಶ್ರೀ ವಾಗೀಶ್ವರೀ ಶತಮಾನೋತ್ಸವ ವಿಶೇಷ ಸಂಮಾನವನ್ನು ಗೈಯಲಾಯಿತು.ಈ ಸಂಘದ ಬಗ್ಗೆ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿಯವರು ವಿವರಣೆಯನ್ನು ನೀಡಿ ಅಭಿನಂದಿಸಿದರು. ಸಂಮಾನ ಪತ್ರದ ವಾಚನವನ್ನು ಕೋಶಾಧಿಕಾರಿ ಶಿವಪ್ರಸಾದ್ ಪ್ರಭು ಗೈದರು.
ಶಾರದಾ ಯಕ್ಷಗಾನ ಮಂಡಳಿಯ ಅಧ್ಯಕ್ಷ ಶೇಖರ್ ಶೆಟ್ಟಿಯವರು ತಮ್ಮ ಸಂಘಕ್ಕೆ ನೀಡಿದ ಸಂಮಾನಕ್ಕೆ ಕೃತಜ್ಞತೆಗಳನ್ನು ಅರ್ಪಿಸಿದರು. ಸಿ.ಎ. ಶ್ರೀನಿವಾಸ್ ಕಾಮತ್ ಶ್ರೀ ವಾಗಿಶ್ವರೀ ಯಕ್ಷಗಾನ ಕಲಾವರ್ಧಕ ಸಂಘ ನೂರು ವರ್ಷಗಳನ್ನು ಈ ದೇವಸ್ಥಾನದ ಆವರಣದಲ್ಲೇ ಇದ್ದುಕೊಂಡು ಪೂರೈಸಿರುವುದು ಶ್ರೀ ಮಹಮ್ಮಾಯಾ ದೇವಸ್ಥಾನಕ್ಕೂ ದೊಡ್ಡ ಹೆಸರು ಎಂದರು. ನೂರು ವರ್ಷಗಳಿಂದ ಜನರಿಗೆ ಜ್ಞಾನ ಪ್ರಸಾರ ಮಾಡುತ್ತಿದ್ದ ಈ ಸಂಘದ ಈಗಿನ ಕಾರ್ಯಕರ್ತರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಇನ್ನೋರ್ವ ಅತಿಥಿ ಎಂ. ನಾರಾಯಣ ಚಂಬಲ್ತಿಮಾರ್ ಹಿಂದೆ ಇಡೀ ರಾತ್ರಿ ನಡೆಯುತ್ತಿದ್ದ ತಾಳಮದ್ದಳೆಗಳನ್ನು ನೆನಪಿಸಿದರು. ಆ ಕೂಟಗಳಲ್ಲಿ ಅರ್ಥ ಹೇಳುತ್ತಾ ಬೆಳೆದ ಕಲಾವಿದರು ಉನ್ನತ ಮಟ್ಟದಲ್ಲಿ ಮಿಂಚಿದ್ದಾರೆ. ಅದೇ ರೀತಿ ಅಂದಿನ ಪ್ರೇಕ್ಷಕರೂ ಉತ್ತಮ ಸಂಸ್ಕಾರವನ್ನು ಯಕ್ಷಗಾನ ತಾಳಮದ್ದಳೆಯ ಮೂಲಕ ಪಡೆಯುತ್ತಿದ್ದರು. ಅಂತಹ ಪ್ರೇಕ್ಷಕರನ್ನು ಹುಟ್ಟು ಹಾಕುವಲ್ಲಿ ವಾಗೀಶ್ವರಿ ಸಂಘದ ಕೊಡುಗೆಯೂ ಅಪಾರ ಎಂದರು. ಇಂತಹ ಸಂಘಗಳ ಮೂಲಕ ನಾಡು ನುಡಿಯ, ಪುರಾಣ ಜ್ಞಾನದ ಅರಿವು ಜನತೆಯಲ್ಲಿ ಅಚ್ಚಳಿಯದೆ ಉಳಿಯುತ್ತಿತ್ತು. ಇಂತಹ ಕೆಲಸಗಳು ಇನ್ನೂ ಮುಂದುವರೆಯಲಿ ಎಂದು ಹಾರೈಸಿದರು.
ಭಾಸ್ಕರ್ ರೈ ಕುಕ್ಕುವಳ್ಳಿ ತನ್ನ ಹಾಗೂ ವಾಗೀಶ್ವರೀ ಸಂಘದ ಒಡನಾಟವನ್ನು ನೆನಪಿಸಿಕೊಂಡರು. ಸುಧೀರ್ಘವಾದ ಯಕ್ಷ ಪಯಣದಲ್ಲಿ ಮುಂದುವರೆದ ಈ ಸಂಘ ವಾಚ್ಯ ವಿಭಾಗದಲ್ಲಿ ಪೀಠಿಕಾ ಸ್ಪರ್ಧೆಯನ್ನು ಏರ್ಪಡಿಸಿರುವುದು ಔಚಿತ್ಯಪೂರ್ಣವೂ, ಶ್ಲಾಘನೀಯವೂ ಆಗಿದೆ ಎಂದರು. ಮುಖ್ಯ ಅತಿಥಿ ಡಾ.ಪ್ರಭಾಕರ ಜೋಶಿಯವರು ಮಾತನಾಡಿ ಯಕ್ಷಗಾನವು ಒಂದು ಸಾಂಪ್ರದಾಯಿಕ ಕಲೆ. ಇಲ್ಲಿ ಕಲಾವಿದ ರೂಪುಗೊಳ್ಳಲು, ಜನರೊಂದಿಗೆ ಸಮರ್ಥವಾಗಿ ಸಂವಹನ ನಡೆಸಲು ಶೃದ್ಧಾಪೂರ್ವಕ ಅಧ್ಯಯನ ಮಾಡಬೇಕು. ತಪಸ್ಸಿನ ರೀತಿಯಲ್ಲಿ ಪರಿಶ್ರಮ ಪಟ್ಟಾಗ ಆತ ಪರಿಪೂರ್ನ ಯಕ್ಷಗಾನ ಕಲಾವಿದನಾಗುತ್ತಾನೆ. ಅವಸರದಲ್ಲಿ ಅಥವಾ ತತ್ ಕ್ಷಣದಲ್ಲಿ ತಾನೊಬ್ಬ ಹೆಸರುವಾಸಿಯಾಗಬೇಕೆಂದು ಬಯಸುವವರಿಗೆ ಈ ಕ್ಷೇತ್ರ ಹೇಳಿಸಿದ್ದಲ್ಲ ಎಂದರು.
ಸಂಘದ ಗೌರವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಯಕ್ಷಗಾನದ ಪಾರಂಪರಿಕ ಮೌಲ್ಯಗಳ ಬಗ್ಗೆ ಗಮನ ಸೆಳೆದರು. ಹಿಂದೆ ಅಲ್ಲಲ್ಲಿ ಈ ರೀತಿಯ ಯಕ್ಷಗಾನ ಸಂಘಗಳು ಕಲಾ ಸೇವೆಯನ್ನು ಮಾಡುತ್ತಿದ್ದವು. ಆ ಮೂಲಕ ಧಾರ್ಮಿಕ, ಪೌರಾಣಿಕ ಸಂದೇಶಗಳನ್ನು ಜನತೆಗೆ ನೀಡುತ್ತಿದ್ದವು. ಈ ಮಣ್ಣಿನ ಜನತೆ ಸಂಸ್ಕಾರಯುತರಾಗುವುದಕ್ಕೆ ಇಂತಹ ಸಂಘಗಳು ಸಹಕಾರಿಗಳಾಗಿದ್ದವು. ಆಧುನಿಕ ಜೀವನ ಪದ್ಧತಿಯಲ್ಲಿ ನಾವು ಸಂಸ್ಕೃತಿಯಿಂದ ವಿಕೃತಿಯತ್ತ ಸಾಗುತ್ತಿದ್ದೇವೆ. ಆದರೂ ಈ ನೆಲದಲ್ಲಿ ಧರ್ಮ ಇನ್ನೂ ಉಳಿದಿರುವುದು ಇಂತಹ ಸಂಘಗಳ ಮೂಲಕ ಎಂದರು. ಮಹಾಮಾಯೆಯ ಅನುಗ್ರಹದ ಮೂಲಕ ಇನ್ನಷ್ಟು ಈ ಸಂಘ ಬೆಳೆಯಲಿ ಜ್ಞಾನಾರ್ಜನೆಯ ಮೃಷ್ಟಾನ್ನವನ್ನು ಉಣ ಬಡಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ನಡೆದ ಯಕ್ಷಗಾನ ಪೀಠಿಕಾ ಸ್ಪರ್ಧೆಯ ವಿಜೇತರು :
ಮಕ್ಕಳ ವಿಭಾಗ – ಪ್ರಥಮ: ಶಾರ್ವರಿ ಎನ್., ದ್ವಿತೀಯ: ಬ್ರಾಹ್ಮೀ ಮಯ್ಯ, ತೃತೀಯ: ಸಾತ್ವಿಕ್ ನಾವಡ
ಮಹಿಳಾ ವಿಭಾಗ – ಪ್ರಥಮ: ಸರಸ್ವತಿ ಹೊಳ್ಳ, ದ್ವಿತೀಯ: ಪ್ರೀತಿಕಾ ಶೆಟ್ಟಿ, ತೃತೀಯ: ಶ್ರೀಲತಾ ನಾವಡ
ಪುರುಷರ ವಿಭಾಗ – ಪ್ರಥಮ: ಸುಬ್ರಹ್ಮಣ್ಯ ಬೈಪಡಿತ್ತಾಯ, ದ್ವಿತೀಯ: ಜಯರಾಮ ದೇವಸ್ಯ, ತೃತೀಯ: ಸುದರ್ಶನ ದಂಬೇಲ್
ವಿಜೇತರಾದವರಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ, ನೆನಪಿನ ಕಾಣಿಕೆಯನ್ನು ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ, ಸ್ಮರಣಿಕೆ, ನೆನಪಿನ ಕಾಣಿಕೆಯನ್ನು ಸಂಘದ ಅಧ್ಯಕ್ಷ ಶ್ರೀನಾಥ್ ಎನ್. ಪ್ರಭು ಪ್ರಾಯೋಜಿಸಿ ವಿತರಿಸಿದರು. ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಿ.ಎಸ್. ಭಂಡಾರಿ, ಉಪಾಧ್ಯಕ್ಷೆ ಪ್ರಫುಲ್ಲಾ ನಾಯಕ್, ಅಶೋಕ್ ಬೋಳೂರ್, ಪ್ರಭಾಕರ ಕಾಮತ್, ಶಿವಾನಂದ ಪೆರ್ಲಗುರಿ, ಶೋಭಾ ಐತಾಳ್, ಸುದರ್ಶನ ದಂಬೇಲ್, ಮಧುಸೂದನ ಅಲೆವೂರಾಯ, ರಮೇಶ್ ಆಚಾರ್ಯ, ಪ್ರೀತಮ್ ಭಟ್, ಜಯರಾಮ ಅಂಚನ್, ವಿಫ್ನೇಶ್ ಶೆಟ್ಟಿ, ಸುಮುಖ ಕಲ್ಲೂರಾಯ ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ “ಶ್ರೀ ರಾಮಚರಿತಾಮೃತ” ಪೀಠಿಕಾ ವೈಭವ ಪಟ್ಲ ಸತೀಶ ಶೆಟ್ಟರ ಭಾಗವತಿಕೆಯಲ್ಲಿ ಜರಗಿತು. ಪ್ರಾರಂಭದ ಒಂದು ಹಾಡನ್ನು ಪೊಲ್ಯ ಲಕ್ಕ್ಷ್ಮೀನಾರಾಯಣ ಶೆಟ್ಟರು ಹಾಡಿದರು. ಹಿಮ್ಮೇಳದಲ್ಲಿ ವಿದ್ವಾನ್ ನಂದಳಿಕೆ ಕೃಷ್ಣರಾಜ ಭಟ್, ಪೆರ್ಲ ಗಣಪತಿ ಭಟ್, ಮಯೂರ ನಾಯ್ಗ ಮಾಡೂರು, ವಿಫ್ನೇಶ್ ಶೆಟ್ಟಿ ಸಹಕರಿಸಿದರು. ಅರ್ಥಧಾರಿಗಳಾಗಿ ಡಾ. ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ ಭಟ್, ಕದ್ರಿ ನವನೀತ ಶೆಟ್ಟಿ, ಡಾ. ದಿನಕರ ಎಸ್. ಪಚ್ಚನಾಡಿ, ರಮೇಶ್ ಆಚಾರ್ಯ, ಎಂ.ಎಂ.ಸಿ. ರೈ, ಸಂಜಯ ಕುಮಾರ್ ರಾವ್, ಜಿ.ಕೆ. ಭಟ್ ಸೇರಾಜೆ, ರವಿ ಅಲೆವೂರಾಯ, ಸುಬ್ರಹ್ಮಣ್ಯ ಬೈಪಡಿತ್ತಾಯ ಭಾಗವಹಿಸಿದ್ದರು. ಮುಂಜಾನೆ ನಡೆದ ಪೀಠಿಕಾ ಸ್ಪರ್ಧೆಯಲ್ಲಿ ಭಾಗವತರಾಗಿ ಅಶೋಕ ಬೋಳೂರು, ವಿಫ್ನೇಶ ಶೆಟ್ಟಿ, ಹಿಮ್ಮೇಳದಲ್ಲಿ ವಿದ್ವಾನ್ ಕೃಷ್ಣರಾಜ ಭಟ್ ಮತ್ತು ಪೆರ್ಲ ಗಣಪತಿ ಭಟ್ ಸಹಕರಿಸಿದರು.