ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಇದರ ಸಹಯೋಗದಲ್ಲಿ ‘ಭೀಷ್ಮ ಭಾರತ’ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭವು ದಿನಾಂಕ 31 ಜುಲೈ 2025ರಂದು ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಳದಲ್ಲಿ ಜರುಗಿತು.
ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ ಸಪ್ತಾಹದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಆಂಜನೇಯ ಯಕ್ಷಗಾನ ಕಲಾ ಸಂಘದ ಕಾರ್ಯಕ್ರಮಗಳು ಉನ್ನತ ಮಟ್ಟದಲ್ಲಿ ನಡೆಯುತ್ತಿವೆ. 56 ವಸಂತಗಳನ್ನು ಕಂಡ ಸಂಘ, ಶತಮಾನಗಳನ್ನು ಪೂರೈಸಲಿ ಎಂದು ಶುಭ ಕೋರಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಹಾಗೂ ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಮೇಗಿನಗುತ್ತು ಇನ್ನು ಮುಂದೆಯೂ ದೇವಳದಲ್ಲಿ ಆಂಜನೇಯ ಸಂಘದ ತಾಳಮದ್ದಳೆಗಳು ನಡೆದಾಗ ತಮ್ಮ ಸರ್ವ ಸಹಕಾರ ನೀಡುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಸಂಘದ ಗೌರವ ಕಾರ್ಯದರ್ಶಿ ರಂಗನಾಥ್ ರಾವ್, ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಪ್ರೇಮಲತಾ ರಾವ್ ಉಪಸ್ಥಿತರಿದ್ದರು.
ದೇವಳದ ಅರ್ಚಕ ಶ್ರೀ ರಾಮ ಕಲ್ಲೂರಾಯ ಇವರನ್ನು ಆಂಜನೇಯ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಿಶೋರಿ ದುಗ್ಗಪ್ಪ ನಡುಗಲ್ಲು ಸನ್ಮಾನ ಪತ್ರ ವಾಚಿಸಿದರು. ಸಂಘದ ಸದಸ್ಯರು ಅತಿಥಿಗಳಿಗೆ ಶಾಲು ಹೊದಿಸಿ, ಗೌರವಿಸಿದರು. ಸಂಘದ ಹಿರಿಯ ಕಲಾವಿದ ಗುಡ್ಡಪ್ಪ ಬಲ್ಯ ಸ್ವಾಗತಿಸಿ, ಭಾಗವತ ಎಲ್.ಎನ್. ಭಟ್ ಬಟ್ಯಮೂಲೆ ಯಕ್ಷಗಾನೀಯ ಶೈಲಿಯಲ್ಲಿ ಪ್ರಾರ್ಥಿಸಿದರು. ವೇದಿಕೆಯಲ್ಲಿ ಮಹಿಳಾ ಯಕ್ಷಗಾನ ಸಂಘದ ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ ವಂದಿಸಿ, ಆಂಜನೇಯ ಯಕ್ಷಗಾನ ಕಲಾ ಸಂಘದ ಕೋಶಾಧಿಕಾರಿ ದುಗ್ಗಪ್ಪ ನಡುಗಲ್ಲು ಕಾರ್ಯಕ್ರಮ ನಿರೂಪಿಸಿದರು. ಸಂಘದ ವತಿಯಿಂದ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ಶಾಲು ಹೊದಿಸಿ ಗೌರವಿಸಲಾಯಿತು. ದೇವಳದ ವತಿಯಿಂದ ಸಪ್ತಾಹದಲ್ಲಿ ಭಾಗವಹಿಸಿದ ಕಲಾವಿದರೆಲ್ಲರಿಗೂ ಶಾಲು ಹೊದಿಸಿ ಗೌರವಿಸಲಾಯಿತು. ಆ ಬಳಿಕ ‘ಭೀಷ್ಮ ಭಾರತಿ’ ಸಪ್ತಾಹದ ಕೊನೆಯ ಪ್ರಸಂಗ ಕರ್ಮ ಬಂಧ/ಭೀಷ್ಮ ಪರ್ವ ಎಂಬ ತಾಳಮದ್ದಳೆ ಜರಗಿತು.