ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ (ರಿ.) ಧಾರವಾಡ ಮತ್ತು ಡಾ. ಜಿ.ಎಸ್. ಆಮೂರ ಜನ್ಮ ಶತಮಾನೋತ್ಸವ ಸಮಿತಿ ಹಾಗೂ ಡಾ. ಅಣ್ಣಾಜಿರಾವ ಸಿರೂರ ರಂಗಮಂದಿರ ಪ್ರತಿಷ್ಠಾನ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ‘ಡಾ. ಜಿ.ಎಸ್. ಆಮೂರ ಜನ್ಮಶತಮಾನೋತ್ಸವ ಸಮರೋಪ ಸಮಾರಂಭವನ್ನು ಧಾರವಾಡದ ಕರ್ನಾಟಕ ಕಾಲೇಜ್ ಆವರಣ ಸೃಜನಾ ಡಾ. ಅಣ್ಣಾಜಿರಾವ ಸಿರೂರ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಉದ್ಘಾಟನೆಯನ್ನು ಲಕ್ಷ್ಮೀಶ ತೋಳ್ಪಾಡಿ ಇವರು ಮಾಡಲಿದ್ದು, ಇದೇ ಸಂದರ್ಭದಲ್ಲಿ ‘ಜಿ.ಎಸ್. ಆಮೂರ ಅವರ ಸಮಗ್ರ ಬೇಂದ್ರೆ ವಿಮರ್ಶೆ’ ಮತ್ತು ‘ಬೆಳಕಿನ ಬೆಳೆ’ ಎಂಬ ಕೃತಿಗಳು ಬಿಡುಗಡೆಗೊಳ್ಳಲಿದೆ. ಮಧ್ಯಾಹ್ನ 12-30 ಗಂಟೆಗೆ ನಡೆಯುವ ಗೋಷ್ಠಿ 01ರಲ್ಲಿ ಗಣೇಶ ದೇವಿ ಮಟ್ಟಿ ಮಾಜುನಾಥ ಹಿರೇಮಠ ಭಾಗವಹಿಸಲಿರುವರು. ಗೋಷ್ಠಿ 02ರಲ್ಲಿ ‘ಜಿ.ಎಸ್. ಆಮೂರ ಮತ್ತು ಕನ್ನಡ ಸಾಹಿತ್ಯ ವಿಮರ್ಶೆ’ ಎಂಬ ವಿಷಯದ ಸಂವಾದವನ್ನು ಗೀತಾ ವಸಂತ, ಶ್ರೀಧರ ಬಳಗಾರ ಮತ್ತು ಶ್ಯಾಮಸುಂದರ ಬಿದರಕುಂದಿ ಇವರು ನಡೆಸಿಕೊಡಲಿದ್ದಾರೆ. ಗೋಷ್ಠಿ 03ರಲ್ಲಿ ‘ಜಿ.ಎಸ್. ಆಮೂರ ಬಾಂಧವ್ಯ’ ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ಪ್ರಸ್ತುತಗೊಳ್ಳಲಿದೆ. ಸಂಜೆ 4-00 ಗಂಟೆಗೆ ನಡೆಯಲಿರುವ ಸಮಾರೋಪದಲ್ಲಿ ಜಯಂತ ಕಾಯ್ಕಿಣಿ ಸಮಾರೋಪ ಭಾಷಣ ಮಾಡಲಿದ್ದಾರೆ.
1961ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ, ಅಮೇರಿಕದ ಕ್ಯಾಲಿಫೋರ್ನಿಯಾ ಮತ್ತು ಯೇಲ್ ವಿಶ್ವವಿದ್ಯಾಲಯಗಳಲ್ಲಿ ಟಿ.ಎಸ್. ಎಲಿಯಟ್ ಕುರಿತು ಸಂಶೋಧನೆ ನಡೆಸಿದ ಡಾ. ಜಿ.ಎಸ್. ಆಮೂರ ಅವರು, ಕುಮಟಾ, ಗದಗ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಔರಂಗಾಬಾದದ ಮರಾಠವಾಡಾ ವಿಶ್ವವಿದ್ಯಾಲಯಗಳಲ್ಲಿ, ಸುಮಾರು ಇಪ್ಪತ್ತೆಂಟು ವರ್ಷಗಳ ಕಾಲ ಇಂಗ್ಲೀಷ್ ಭಾಷಾ ಅಧ್ಯಾಪನ ನಡೆಸಿದವರು. ಭಾರತದ ಹಲವು ವಿಶ್ವವಿದ್ಯಾಲಯಗಳ ಇಂಗ್ಲೀಷ್ ಭಾಷಾ ಬೋಧನೆಯನ್ನು ಕುರಿತ ಶೈಕ್ಷಣಿಕ ವ್ಯವಸ್ಥೆ ನಿರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಡಾ. ಜಿ.ಎಸ್. ಆಮೂರ ಅವರು, ವಿಶ್ವವಿದ್ಯಾಲಯಗಳಲ್ಲಿ ‘ಇಂಡಿಯನ್ ಇಂಗ್ಲೀಷ್ ಲಿಟರೇಚರ್’ ಅಧ್ಯಯನಕ್ಕೆ ಪ್ರಾಧಾನ್ಯ ಸಿಗುವಂತೆ ಮಾಡಿದವರು. 1985ರಲ್ಲಿ ಮರಾಠವಾಡಾ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದ ಪ್ರೊಫೆಸರ್ ಜಿ.ಎಸ್. ಆಮೂರ ಅವರು ಧಾರವಾಡಕ್ಕೆ ಬಂದು ನೆಲೆಸಿದಂದಿನಿಂದ ತಮ್ಮನ್ನು ಸಂಪೂರ್ಣವಾಗಿ ಕನ್ನಡ ವಾಙ್ಮಯ ಲೋಕಕ್ಕೆ ಸಮರ್ಪಿಸಿಕೊಂಡರು. ದೆಹಲಿಯ ಪ್ರತಿಷ್ಠಿತ ಜವಾಹರಲಾಲ ನೆಹರು ವಿಶ್ವವಿದ್ಯಾಲಯದ ಪ್ರೊಫೆಸರ್ ಆಫ್ ಎಮಿರಿಟಸ್ ಮತ್ತು ಕರ್ನಾಟಕದಲ್ಲಿನ ವಿಶ್ವವಿದ್ಯಾಲಯವೊಂದರ ಕುಲಪತಿ ಹುದ್ದೆ, ಇವರನ್ನು ಅರಸಿಕೊಂಡು, ಇವರ ಮನೆ ಬಾಗಿಲಿಗೆ ಬಂದರೂ, ಅವುಗಳನ್ನು ನಿರಾಕರಿಸಿ, ತಮ್ಮನ್ನು ಕನ್ನಡ ವಾಙ್ಮಯದ ಸೇವೆಗಾಗಿ ಮುಡುಪಿಟ್ಟುಕೊಂಡರು.
ಆಧುನಿಕ ಮತ್ತು ಆಧುನಿಕೋತ್ತರ ಕನ್ನಡ ಸಾಹಿತ್ಯದ ಪ್ರಾತಿನಿಧಿಕ ವಿಮರ್ಶಕರಾಗಿ ಡಾ. ಜಿ.ಎಸ್ ಆಮೂರರು ಬಹು ಮೌಲ್ಯಯುತ ಕಾಣಿಕೆ ನೀಡಿದ್ದಾರೆ. ಸಂಸ್ಕೃತ, ಇಂಗ್ಲೀಷ್ ಮತ್ತು ಕನ್ನಡ ಭಾಷಾ ಸಾಹಿತ್ಯಗಳ ಆಳವಾದ ಅಧ್ಯಯನ ಹೊಂದಿದ್ದ ಆಮೂರರ ವಿಮರ್ಶೆಯು ಈ ಎಲ್ಲ ಮೂಲಗಳ ಸತ್ವಗಳನ್ನು ಹೀರಿಕೊಂಡು ರೂಪುಗೊಂಡದ್ದು ಆಗಿದ್ದಿತು. ಭಾರತೀಯ ಕಾವ್ಯ ಮೀಮಾಂಸೆಯು ರಸಿಕನಿಗೆ ನೀಡುವ ತರಬೇತಿಯ ಘಟ್ಟಗಳನ್ನು ಮತ್ತು ಪಾಶ್ಚಾತ್ಯ ವಿಮರ್ಶೆಯು ರೂಪಿಸಿದ ರಸಾಸ್ವಾದನೆಯ ರೀತಿಗಳನ್ನು ಸಂಯೋಜಿಸಿಕೊಂಡು ಸಿದ್ಧವಾದ ಡಾ. ಜಿ.ಎಸ್. ಆಮೂರರ ವಿಮರ್ಶಾ ಪ್ರಸ್ಥಾನವು ಸಾಹಿತ್ಯ ಕೃತಿಗಳನ್ನು ಆಳವಾಗಿ ಅನುಭವಿಸುವಂತಹದ್ದಾಗಿತ್ತು. ಆಮೂರರಿಗೆ ಸಾಹಿತ್ಯ ವಿಮರ್ಶೆ ಎನ್ನುವುದು ಯಾವತ್ತಿಗೂ ಸ್ಥಗಿತವಾದ ಯಾಂತ್ರಿಕ ಕ್ರಿಯೆಯಾಗಿರಲಿಲ್ಲ. ‘ಸಂದರ್ಭಗಳು ಬದಲಾಗುತ್ತಲೇ ಇರುವುದರಿಂದ ವಿಮರ್ಶೆಗೆ ಸ್ಥಾವರ ಸ್ಥಿತಿಯೆಂಬುದು ಉಳಿಯುವುದಿಲ್ಲ. ಅದೂ ಕೂಡ ಬದಲಾಗುತ್ತಲೇ ಇರಬೇಕಾಗುತ್ತದೆ’ ಎನ್ನುವ ಮಾತು ಹೇಳುತ್ತಾರವರು. ಅಂತೆಯೇ ‘ವಸಾಹತುಪೂರ್ವದ ವೈಚಾರಿಕ ಕ್ರಮಗಳನ್ನು ಹಾಗೂ ಭಾವರಚನೆಗಳನ್ನು ಗುರುತಿಸುವುದು ಇಂದು ನಡೆಯಬೇಕಾದ ಅಗತ್ಯದ ಕಾರ್ಯ. ಇದು ಪಠ್ಯಗಳ ಮೂಲಕವೇ ಜರುಗಬೇಕಾದ ಕ್ರಿಯೆ. ಆದರೆ ಇದು ರೂಪುಗೊಳ್ಳಬೇಕಾದರೆ ಹಳೆಯ ಪಠ್ಯಗಳನ್ನು ಹೊಸ ದೃಷ್ಟಿಯಿಂದ ನೋಡಬೇಕಾಗುತ್ತದೆ. ನಮಗೆ ಇಂದು ರಕ್ತಗತವಾಗಿರುವ ಕೆಲವೊಂದು ಗ್ರಹಿಕೆಗಳನ್ನು ಬಿಟ್ಟುಕೊಟ್ಟು ಚಿಂತನೆಗೆ ತೊಡಗಬೇಕಾಗುತ್ತದೆ’ ಎಂದು ಹೇಳುವ ಆಮೂರರು ಕನ್ನಡದ ಸಾಂಸ್ಕೃತಿಕ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ವಿಮರ್ಶೆಯು ಸಾಗಬೇಕಾಗಿರುವ ದಾರಿಯನ್ನು ಸೂಚಿಸುತ್ತಾರೆ.
ಹೀಗೆ, ಸುಮಾರು ಅರ್ಧಶತಕದ ಕಾಲ ಕನ್ನಡ ವಾಙ್ಮಯ ಲೋಕದಲ್ಲಿ ಮಹತ್ವದ ಪಾತ್ರವಹಿಸಿದ ಡಾ. ಜಿ.ಎಸ್. ಆಮೂರ ಅವರು ಜನಿಸಿದ್ದು ಅವಿಭಜಿತ ಧಾರವಾಡ ಜಿಲ್ಲೆಯ ಹಾನಗಲ್ಲು ತಾಲೂಕಿನ ಬೊಮ್ಮನಹಳ್ಳಿ ಎಂಬ ಪುಟ್ಟ ಗ್ರಾಮವೊಂದರಲ್ಲಿ, 1925ನೇ ಸಾಲಿನ ಮೇ 8ರಂದು. ಕೊನೆಯವರೆಗೂ ಅತ್ಯಂತ ಕ್ರಿಯಾಶೀಲರಾಗಿದ್ದ ಡಾ. ಜಿ.ಎಸ್. ಆಮೂರ ಅವರ ಜನ್ಮಶತಮಾನೋತ್ಸವದ ವರ್ಷವಿದು. ಅವರ ಜೀವನ ಸಾಧನೆಗಳ ಮಹತ್ವವನ್ನು ಅರಿತ ಅವರ ಶಿಷ್ಯ ಮತ್ತು ಅಭಿಮಾನಿಗಳು, ಅವರ ಜನ್ಮಶತಮಾನೋತ್ಸವ ಸಮಿತಿಯೊಂದನ್ನು ರಚಿಸಿಕೊಂಡು, ಈಗಾಗಲೇ ಧಾರವಾಡ, ಗದಗ, ಬೆಂಗಳೂರು ಮತ್ತು ವಿಜಯಪುರಗಳಲ್ಲಿ ಅವರ ಸಾಹಿತ್ಯದ ಮಹತ್ವವನ್ನು ಬಿಂಬಿಸುವಂತಹ ಸಮಾರಂಭಗಳನ್ನು ನಡೆಸಿದ್ದಾರೆ. ಈ ಸಮಾರಂಭ ಸರಣಿಯ ಸಮಾರೋಪ ಕಾರ್ಯಕ್ರಮವನ್ನು ದಿನಾಂಕ 08 ಮೇ 2025ರಂದು, ಇಡೀ ದಿನದ ಕಾರ್ಯಕ್ರಮವಾಗಿ, ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಡೆಸಲು ಉದ್ದೇಶಿಸಲಾಗಿದೆ.