ಕಾಸರಗೋಡು : ಬದಿಯಡ್ಕದ ವೀಣಾವಾದಿನಿ ಸಂಗೀತ ಹಾಗೂ ವೈದಿಕ-ತಾಂತ್ರಿಕ ವಿದ್ಯಾಪೀಠದ ವತಿಯಿಂದ ‘ನಾದ ಮಾಧುರಿ’ ಮೂರು ದಿನಗಳ ಸಂಗೀತ ಹಾಗೂ ಮೃದಂಗ ಕಾರ್ಯಾಗಾರವು ದಿನಾಂಕ 09ರಿಂದ 11 ಮೇ 2025ರವರೆಗೆ ಬಳ್ಳಪದವು ನಾರಾಯಣೀಯಂ ಕ್ಯಾಂಪಸ್ ನಲ್ಲಿ ನಡೆಯಿತು.
ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಕ, ವೀಣಾವಾದಿನಿಯ ನಿರ್ದೇಶಕ ಹಾಗೂ ಗುರು ಯೋಗೀಶ ಶರ್ಮ ಬಳ್ಳಪದವು ಇವರು ಗಾಯನದಲ್ಲಿ ಮಾರ್ಗದರ್ಶನ ನೀಡಿದರು. ಮೃದಂಗ ವಿಭಾಗದಲ್ಲಿ ಕಲಾವಿದರಾದ ಕೃಷ್ಣಕುಮಾರ್ ಚೇರ್ತಲ ಮತ್ತು ಕಲ್ಲೆಕುಳಂಗರ ಉಣ್ಣಿಕೃಷ್ಣನ್ ಇವರ ತಾಳಸಾಧನೆ ಮತ್ತಿತರ ಕೌಶಲ್ಯಗಳಲ್ಲಿ ಮಾರ್ಗದರ್ಶನ ನೀಡಿದರು. ಮುಸ್ಸಂಜೆಯ ಸಂಗೀತಾಭ್ಯಾಸ ತರಗತಿಗಳು, ಮುಂಜಾನೆಯ ಸಾಧನಾ ತರಗತಿಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದ್ದವು. ಬೆಂಗಳೂರಿನ ಡಾ. ಪದ್ಮಶ್ರೀ ಇವರು ಮುಂಜಾನೆ ಯೋಗಾಭ್ಯಾಸ ಹೇಳಿಕೊಟ್ಟರು.
ಸಮಾರೋಪದಲ್ಲಿ ಕಲ್ಲೆಕುಳಂಗರ ಉಣ್ಣಿಕೃಷ್ಣನ್, ವಯಲಿನ್ ವಿದ್ವಾಂಸ ಪ್ರಭಾಕರ ಕುಂಜಾರು, ಮೂಡುಬಿದಿರೆ ರಮಿತ್ ಕುಮಾರ್, ಅರಿಹಂತ್ ಇಂಡಸ್ಟ್ರೀಸ್‌ನ ವಿಶ್ವಾಸ್ ಪದ್ಯಾರಬೆಟ್ಟು, ಯೋಗೀಶ ಶರ್ಮಾ ಉಪಸ್ಥಿತರಿದ್ದರು. ಇದಕ್ಕೂ ಮೊದಲು ವೀಣಾವಾದಿನಿಯಲ್ಲಿ ಕಳೆದ ಒಂದು ತಿಂಗಳಿಂದ ತಂತ್ರಪೂಜಾ ಪಾಠಗಳು ಸಹ ಆರಂಭವಾಗಿವೆ. ಈ ತರಗತಿಗಳು ಬ್ರಹ್ಮಶ್ರೀ ಅನಂತ ಭಟ್ ಚೂರಿಕ್ಕೋಡು, ಬ್ರಹ್ಮಶ್ರೀ ಆದಿತ್ಯ ಹಾಗೂ ಬ್ರಹ್ಮಶ್ರೀ ರಾಧಾಕೃಷ್ಣ ಭಟ್ ಆಲಂಗಾರು ಅವರ ಮಾರ್ಗದರ್ಶನದಲ್ಲಿ ನಡೆಸಲ್ಪಡುತ್ತಿವೆ.