ಕಾಸರಗೋಡು : ಗಡಿನಾಡು ಕಾಸರಗೋಡಿನ ಸಿರಿಬಾಗಿಲಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ ನಾಲ್ಕು ದಿನಗಳ ಸಾಂಸ್ಕೃತಿಕ ಉತ್ಸವ ‘ಸಿರಿಬಾಗಿಲು ಯಕ್ಷವೈಭವ’ವು ದಿನಾಂಕ 20 ಜುಲೈ 2024ರಂದು ಸಂಪನ್ನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಮತ್ತು ಉಪ್ಪಳ ಕೊಂಡೆಯೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಯಶಸ್ವಿಯಾಗಿ ನಡೆಯಿತು.
“ಸಿರಿಬಾಗಿಲಿನಲ್ಲಿ ನಡೆದ ‘ಸಿರಿಬಾಗಿಲು ಯಕ್ಷವೈಭವ’ ಯಕ್ಷಲೋಕವೇ ಅಚ್ಚರಿಗೊಳ್ಳುವಂತೆ 25 ತಂಡಗಳು ಭಾಗವಹಿಸಿದ್ದು, ಕಾಸರಗೋಡಿನ ಚರಿತ್ರೆಯಲ್ಲಿ ಪ್ರಥಮ. ಈ ಹಿಂದೆ ಹಲವು ಕಡೆಗಳಲ್ಲಿ ಸೀಮಿತ ತಂಡಗಳ ಯಕ್ಷಗಾನ ಸ್ಪರ್ಧೆ ನಡೆದಿರುತ್ತದೆ. ಆದರೆ ಇದು ಸ್ಪರ್ಧೆಯಲ್ಲ. ಅಲ್ಲದೆ ಹವ್ಯಾಸಿ ವಲಯದ ಕಲಾವಿದರು, ಯಕ್ಷಗಾನ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿದ ಪ್ರತಿಷ್ಠಾನದ ಯೋಜನೆ, ನಿಜವಾಗಿ ಮೆಚ್ಚುವಂಥದ್ದು, ಈ ಪ್ರತಿಷ್ಠಾನ ಇನ್ನೂ ಮುಂದೆ ಇಂತಹ ಚಟುವಟಿಕೆ ನಡೆಸಿ ಯಕ್ಷಗಾನ ಬೆಳೆದು ಲೋಕ ಪ್ರಸಿದ್ಧಿ ಪಡೆದು ಮುಂದಿನ ಪೀಳಿಗೆಗೆ ಹಸ್ತಾಂತರವಾಗಲಿ” ಎಂದು ಎಡನೀರು ಶ್ರೀಗಳು ಆಶೀರ್ವದಿಸಿದರು.
“ಗ್ರಾಮೀಣ ಪ್ರದೇಶವಾದ ಸಿರಿಬಾಗಿಲಿನಲ್ಲಿ ಇಂತಹ ಯೋಜನೆ ಕಲ್ಪಿಸಿದ ಪ್ರತಿಷ್ಠಾನ ಹಾಗೂ ಅಧ್ಯಕ್ಷರಾದ ಯಕ್ಷಗಾನ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಮತ್ತು ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು” ಎಂದು ಕೊಂಡೆಯೂರು ಶ್ರೀಗಳು ನುಡಿದರು. ಅಧ್ಯಕ್ಷತೆಯನ್ನು ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಕಾರ್ಯದರ್ಶಿಗಳಾದ ಶ್ರೀ ರಾಜಶೇಖರ ಹೆಬ್ಬಾರರು ವಹಿಸಿದರು. ಇದೇ ಸಮಯದಲ್ಲಿ ಪ್ರತಿಷ್ಠಾನದ ಸದಸ್ಯತ್ವ ನೋಂದಾವಣೆಯ ಅಭಿಯಾನದ ದ್ವಿತೀಯ ಮಹಾಪೋಷಕರು ಸದಸ್ಯತ್ವವನ್ನು ಬೆಂಗಳೂರಿನ ಶ್ರೀ ಟಿ.ಎಂ. ಸತೀಶ್ ಇವರಿಗೆ ನೀಡಿ ಗೌರವಿಸಲಾಯಿತು. ಅತಿಥಿಗಳಾಗಿ ಮಾಂಡೋವಿ ಮೋಟಾರ್ಸ್ ಇದರ ಮ್ಯಾನೇಜರ್ ಶ್ರೀ ಶಶಿಧರ ಕಾರಂತ, ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡು ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತೋಡಿ, ಕರ್ನಾಟಕ ಬ್ಯಾಂಕಿನ ಶ್ರೀ ಸುಜಿತ್ ,ಶೀನ ಶೆಟ್ಟಿ ಕಜೆ, ಸಿರಿಬಾಗಿಲು ವೆಂಕಪ್ಪಯ್ಯನವರ ಹಿರಿಯ ಪುತ್ರಿ ಶ್ರೀಮತಿ ಮಂಗಳ ಗೌರಿ ಕುದ್ರೆಪ್ಪಾಡಿ ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ಗಡಿನಾಡ ಸಂಗೀತ ವಿದ್ವಾಂಸೆಯಾದ ಶ್ರೀಮತಿ ಶಕುಂತಲಾ ಕೆ. ಭಟ್ ಕುಂಚಿನಡ್ಕ ಇವರಿಗೆ “ಸಿರಿಬಾಗಲು ವೆಂಕಪ್ಪಯ್ಯ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಪ್ರತಿಷ್ಠಾನಕ್ಕೆ ಹಲವು ವಿಧದಲ್ಲಿ ಸಹಕರಿಸಿದ ಇಂಜಿನಿಯರ್ ಶಿವಶಂಕರ ಜಿ.ಎನ್., ರಾಘವೇಂದ್ರ ಉಡುಪ, ಡಾ. ಸತ್ಯನಾರಾಯಣ, ಶ್ರುತ ಕೀರ್ತಿರಾಜ್ ಮುಂತಾದವರನ್ನು ಗೌರವಿಸಲಾಯಿತು. ಕನ್ನಡ ಅಭಿಮಾನಿಗಳಾದ ದೂರದ ಮಂಡ್ಯ ಬೆಂಗಳೂರಿನಿಂದ ಬಂದ ಸುಲ್ತಾನ್ ಗೌಡ ಮತ್ತು ಷಣ್ಮುಖಂ ಇವರು ಪ್ರತಿಷ್ಠಾನದ ಚಟುವಟಿಕೆಗಳನ್ನು ಗಮನಿಸಿ ಅಧ್ಯಕ್ಷರಾದ ರಾಮಕೃಷ್ಣಯ್ಯ ಅವರನ್ನು ಗೌರವಿಸಿದರು.
ಅದಕ್ಕೂ ಮೊದಲು ಪ್ರತಿಷ್ಠಾನ ಪ್ರಕಟಿಸಿದ ಏಳು ಕೃತಿಗಳ ಬಗ್ಗೆ ವಿಚಾರ ಸಂಕಿರಣ ನಡೆಯಿತು. ವಿಚಾರ ಸಂಕಿರಣದಲ್ಲಿ ರಾಧಾಕೃಷ್ಣ ಕಲ್ಚಾರ್ ವಿಟ್ಲ, ಡಾ. ನಾಗವೇಣಿ ಮಂಚಿ, ಉದಯವಾಣಿ ಪತ್ರಿಕೆಯ ಲಕ್ಷ್ಮೀ ಮಚ್ಚಿನ. ರಾಘವೇಂದ್ರ ಉಡುಪ ನೇರಳೆಕಟ್ಟೆ, ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಮುಂತಾದವರು ಭಾಗವಹಿಸಿದರು. ಹವ್ಯಾಸಿ ತಂಡಗಳಲ್ಲಿ 22 ತೆಂಕುತಿಟ್ಟಿನ ತಂಡಗಳು ಹಾಗೂ ಪ್ರಥಮವಾಗಿ ಮೂರು ಬಡಗುತಿಟ್ಟಿನ ತಂಡಗಳು ಭಾಗವಹಿಸಿರುತ್ತದೆ. ಪಾರ್ತಿಸುಬ್ಬನ ಜನ್ಮನಾಡಾದ ಕಾಸರಗೋಡು ಭಾಗದಲ್ಲಿ ಬಡಗು ತಿಟ್ಟಿನ ಪ್ರದರ್ಶನಗಳು ಅತಿ ವಿರಳ. ಉತ್ತಮ ಪ್ರದರ್ಶನ ನೀಡಿ ತಂಡಗಳು ಜನ ಮೆಚ್ಚುಗೆಗೆ ಪಾತ್ರರಾದವು. ಹೆಚ್ಚಿನ ಎಲ್ಲಾ ತಂಡಗಳು ವೃತ್ತಿ ಮೇಳಕ್ಕೆ ತಾವು ಸರಿ ಸಮಾನವೆಂದು ಮೆರೆದವು. ಡಾ. ಶ್ರುತ ಕೀರ್ತಿರಾಜ್ ಉಜಿರೆ ನಿರೂಪಿಸಿ, ಪ್ರಸನ್ನ ಕಾರಂತ ದೇಶಮಂಗಲ ಧನ್ಯವಾದವಿತ್ತರು.