ಸುರತ್ಕಲ್ : ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್ ಸುರತ್ಕಲ್ ಇದರ ‘ದಶಮಾನ ವರ್ಷ ಸಂಭ್ರಮಾಚರಣೆ’ಯ ಸಮಾರೋಪ ಸಮಾರಂಭ ಹಾಗೂ ಸಮ್ಮಾನ ಕಾರ್ಯಕ್ರಮವು ದಿನಾಂಕ 31 ಡಿಸೆಂಬರ್ 2025ರಂದು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೆರವೇರಿತು.
ಚಿತ್ರಾಪುರ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ ಇವರು ಆಶೀರ್ವಚನ ನೀಡಿ, “ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯು ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಪರಿಪೂರ್ಣ ತಂಡವಾಗಿ ಬೆಳೆದು ನಿಂತಿದೆ. ಯಕ್ಷ ಗುರು ವಾಸುದೇವ ರಾವ್ ಹಾಗೂ ಅವರ ತಂಡ ಸಾಧನೆಯ ಮೇರು ಶಿಖರವನ್ನು ತಲುಪಿದೆ. ಇಳಿ ವಯಸ್ಸಿನಲ್ಲೂ ಯಕ್ಷಕಲಾ ಸೇವೆಯನ್ನ ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ” ಎಂದರು.


ತಂಡದ ಸ್ಥಾಪಕ ಸದಸ್ಯೆ ಅನು ರಾಘವೇಂದ್ರ ರಾವ್, ಯಕ್ಷಗಾನ ಕಲಾಪೋಷಕರಾದ ಶಕುಂತಲಾ ರಮಾನಂದ ಭಟ್ ಇವರನ್ನು ಕಲಾ ಕ್ಷೇತ್ರಕ್ಕೆ ನೀಡಿದ ಸೇವೆಗಾಗಿ ಸಮ್ಮಾನಿಸಲಾಯಿತು. ಯಕ್ಷ ಗುರು ಎಸ್. ವಾಸುದೇವ ರಾವ್, ಮಂಡಳಿಯ ಅಧ್ಯಕ್ಷೆ ಸುಲೋಚನಾ ವಿ. ರಾವ್ ಇವರಿಗೆ ಮಂಡಳಿಯ ಸದಸ್ಯರು ಗುರುವಂದನೆ ಸಲ್ಲಿಸಿದರು. ಇಡ್ಯಾ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ರಮಾನಂದ ಭಟ್, ಪ್ರೊ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಹಿಳಾ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ರಾಜ್ಯ ಯಕ್ಷಗಾನ ಅಕಾಡೆಮಿಯ ಸದಸ್ಯ ರಾಜೇಶ್ ಕುಳಾಯಿ, ಸೀತಾರಾಮ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ವೃಂದಾ ಕೊನ್ನಾರ್, ಸುಮಿತ್ರಾ ಕಲ್ಲೂರಾಯ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲು ಸುರತ್ಕಲ್ ಇವರಿಂದ ‘ಭರತಾಗಮನ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಕಾವ್ಯಶ್ರೀ ಗುರುಪ್ರಸಾದ್, ಅಜೇರು ಶ್ರೀಪತಿ ನಾಯಕ್, ವೇಣುಗೋಪಾಲ ಭಟ್ ಮಾಂಬಾಡಿ, ಮುಮ್ಮೇಳದಲ್ಲಿ ಸುಮಿತ್ರ ಶಶಿಕಾಂತ ಕಲ್ಲೂರಾಯ, ವೃಂದಾ ಕೊನ್ನಾರ್, ಉಮಾ ದಿವಾಕರ್, ಸುಮತಿ ಕೆ.ಎನ್., ಸತ್ಯಭಾಮಾ ಕಾರಂತ ಭಾಗವಹಿಸಿದ್ದರು.

