ಸುರತ್ಕಲ್ : ಶ್ರೀ ಶಾರದಾ ನಾಟ್ಯಾಲಯದ 30ನೇ ವರ್ಷದ ‘ತ್ರಿದಶ ನಾಟ್ಯ ಕಲೋತ್ಸವ’ದ ಸಮಾರೋಪ ಸಮಾರಂಭವು ದಿನಾಂಕ 26 ಅಕ್ಟೋಬರ್ 2025ರಂದು ಸುರತ್ಕಲ್ಲಿನ ವಿದ್ಯಾದಾಯಿನೀ ಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.
ಸಂಸ್ಥೆಯ ನಿರ್ದೇಶಕಿ ವಿದುಷಿ ಶ್ರೀಮತಿ ಭಾರತಿ ಸುರೇಶ್ ಇವರ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ವಿದುಷಿ ಶ್ರೀಮತಿ ಭಾರತಿ ಸುರೇಶ್ ಹಾಗೂ ಅವರ ಹಿರಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಭರತನಾಟ್ಯ ನಡೆಯಿತು. ಅದೇ ಸಮಯದಲ್ಲಿ ‘ನೃತ್ಯ ಕುಂಚ’ ಕಾರ್ಯಕ್ರಮದಲ್ಲಿ ಶ್ರೀಮತಿ ಅಪೂರ್ವ ಆರ್. ತಂತ್ರಿಯವರು ಶ್ರೀ ಕೃಷ್ಣನ ಚಿತ್ರವನ್ನು ಅನಾಯಾಸವಾಗಿ ಬಿಡಿಸಿ ಜನರ ಚಪ್ಪಾಳೆಯನ್ನು ತಮ್ಮದಾಗಿಸಿಕೊಂಡರು.




ಮುಂದಿನ ಕಾರ್ಯಕ್ರಮವಾಗಿ ಚಕ್ರಪಾಣಿ ನೃತ್ಯ ಕಲಾ ಕೇಂದ್ರ (ರಿ.) ಅತ್ತಾವರ ಮಂಗಳೂರು, ಇದರ ನೃತ್ಯ ಗುರುಗಳಾದ ನಾಟ್ಯ ಕಲಾ ರತ್ನ ವಿದ್ವಾನ್ ಶ್ರೀ ಸುರೇಶ್ ಅತ್ತಾವರ್ ಅವರ ಶಿಷ್ಯ ವೃಂದದವರಿಂದ ‘ಮಣಿಕಂಠ ಜನನ’ ನೃತ್ಯ ರೂಪಕ ಜನರ ಮೆಚ್ಚುಗೆಗೆ ಪಾತ್ರವಾಯಿತು. ‘ನೃತ್ಯ ಸಂಯೋಗ’ ಕಾರ್ಯಕ್ರಮದಲ್ಲಿ ಕರ್ನಾಟಕ ಕರಾವಳಿಯ ಖ್ಯಾತ ನೃತ್ಯ ಗುರುಗಳಾದ ವಿದುಷಿ ಶ್ರೀಮತಿ ಶಾಲಿನಿ ಆತ್ಮಭೂಷಣ್, ವಿದುಷಿ ಶ್ರೀಮತಿ ವಿದ್ಯಾ ಮನೋಜ್, ವಿದ್ವಾನ್ ಶ್ರೀ ದೀಪಕ್ ಕುಮಾರ್ ಪುತ್ತೂರು, ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಹಾಗೂ ವಿದುಷಿ ಶ್ರೀಮತಿ ಲತಾ ನಾಗರಾಜ್, ವಿದ್ವಾನ್ ಶ್ರೀ ಸುಧೀರ್ ಕೊಡವೂರು, ವಿದುಷಿ ಶ್ರೀಮತಿ ಯಶಾ ರಾಮಕೃಷ್ಣ, ವಿದುಷಿ ಶ್ರೀಮತಿ ಲಕ್ಷ್ಮೀ ಗುರುರಾಜ್ ಮತ್ತು ವಿದುಷಿ ಶ್ರೀಮತಿ ರಾಜಶ್ರೀ ಉಳ್ಳಾಲ್ ಇವರುಗಳ ನಿರ್ದೇಶನದಲ್ಲಿ ಸಮೂಹ ನೃತ್ಯ ಪ್ರದರ್ಶನ ನಡೆಯಿತು. ಒಂದಕ್ಕಿಂತ ಒಂದು ತಂಡ ಅತ್ಯದ್ಭುತವಾದ ನೃತ್ಯವನ್ನು ಪ್ರದರ್ಶಿಸಿ ಜನರನ್ನು ಮಂತ್ರ ಮುಗ್ಧರನ್ನಾಗಿಸಿತು.



ಮಧ್ಯಾಹ್ನದ ಕಾರ್ಯಕ್ರಮವಾದಂತಹ ‘ನೃತ್ಯೈಕ್ಯಂ’ನಲ್ಲಿ ನಾಟ್ಯ ನಿಲಯಂ, ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಇವರ ಮಗಳು ಹಾಗೂ ಶಿಷ್ಯರಿಂದ ಭರತನಾಟ್ಯ- ಕೂಚಿಪುಡಿ – ಮೋಹಿನಿಯಾಟ್ಟಂ ಜುಗಲಬಂಧಿ ನಡೆಯಿತು. ಅತ್ಯಂತ ಸುಂದರವಾಗಿ ಮೂಡಿ ಬಂದಂತಹ ಈ ಪ್ರಸ್ತುತಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ನೆಲೆಸಿತು. ಮುಂದೆ ‘ಯಕ್ಷ ವೈಭವ’ದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಪೂರ್ಣಿಮ ಯತೀಶ್ ರೈ ಇವರ ನಿರ್ದೇಶನದಲ್ಲಿ ‘ನರಕಾಸುರ ಮೋಕ್ಷ’ ಯಶಸ್ವಿಯಾಗಿ ಮೂಡಿ ಬಂತು.
