ನವಿಮುಂಬಯಿ : ಜೂಹಿನಗರ, ಪ್ಲಾಟ್ ನಂಬರ್ 42 ಸೆಕ್ಟರ್ 24 ಇಲ್ಲಿನ ಬಂಟ್ಸ್ ಸೆಂಟರ್ ನ ದಿ. ಮನೋಹರ್ ಹೆಗ್ಡೆ ಸಂಸ್ಮರಣ ವೇದಿಕೆಯಲ್ಲಿ ದಿನಾಂಕ 22 ಸೆಪ್ಟೆಂಬರ್ 2024ರಂದು ತುಳು ನಾಟಕ ರಂಗೋತ್ಸವದ ಸಮಾರೋಪ ಸಮಾರಂಭ ಜರಗಿತು.
ಈ ಸಮಾರಂಭದಲ್ಲಿ ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಪಾಲ್ಗೊಂಡ ಕಾಂತಾರ ಚಿತ್ರ ಕಲಾವಿದ, ಸಿನಿಮಾ, ನಾಟಕ ನಿರ್ದೇಶಕ ಬಾಸುಮ ಕೊಡಗು ಎಲ್ಲಾ ಕಲಾವಿದರನ್ನು ಉದ್ದೇಶಿಸಿ ಮಾತನಾಡಿ “ರಂಗಭೂಮಿ ಫೈನ್ ಆರ್ಟ್ಸ್ ಸಂಸ್ಥೆಯು ತುಂಬಾ ಅಚ್ಚುಕಟ್ಟಾಗಿ ನಾಟಕ ಸ್ಪರ್ಧೆಯನ್ನು ಏರ್ಪಡಿಸಿದ್ದು, ಅನೇಕ ಯುವ ಪ್ರತಿಭೆಗಳಿಗೆ ರಂಗವೇದಿಕೆಯಲ್ಲಿ ಅಭಿನಯಿಸುವ ಅವಕಾಶ ಒದಗಿದೆ. ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ನಾಟಕಗಳು ಸ್ಪರ್ಧೆಯಲ್ಲಿ ಪ್ರದರ್ಶನಗೊಂಡಿದ್ದು, ಅನೇಕ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸುವ ಅವಕಾಶ ಕೂಡಾ ಇದರಿಂದ ಸಿಕ್ಕಿದೆ. ಅನೇಕ ಪ್ರತಿಭಾವಂತ ಕಲಾವಿದರು ಈ ಸ್ಪರ್ಧೆಯಿಂದ ಬೆಳಕಿಗೆ ಬಂದಿದ್ದಾರೆ. ಭವಿಷ್ಯದಲ್ಲಿ ಈ ಕಲಾವಿದರು ಕಲಾ ಕ್ಷೇತ್ರಕ್ಕೆ ದೊಡ್ಡ ಆಸ್ತಿಯಾಗಬಲ್ಲರು. ಮುಂಬಯಿ ಮಹಾನಗರದಲ್ಲಿ ನೀವೆಲ್ಲರೂ ಸೇರಿ ರಂಗಭೂಮಿಯನ್ನು ಉಳಿಸಿ ಬೆಳೆಸುವ ಮಹತ್ಕಾರ್ಯವನ್ನು ಮಾಡುತ್ತಿದ್ದೀರಿ. ಈ ರಂಗಭೂಮಿ ಎಂಬುದು ಸಮಾಜವನ್ನು ಒಗ್ಗೂಡಿಸುವ ಕಾಯಕವನ್ನು ಮಾಡುತ್ತದೆ. ಸಮಾಜ ಕಟ್ಟುವ ರಂಗಭೂಮಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ.
ನಾಟಕದಲ್ಲಿ ಅಭಿನಯವೇ ಪ್ರಧಾನ ಎಂಬುದು ನಮ್ಮ ನಂಬಿಕೆ. ಅಭಿನಯಕ್ಕೆ ಪೂರಕವಾದ ಕಥಾವಸ್ತು, ಬೆಳಕು, ರಂಗ ವಿನ್ಯಾಸ, ರಂಗ ಸಂಗೀತ, ಇವೆಲ್ಲವನ್ನು ತೀರ್ಪಿನಲ್ಲಿ ಪರಿಗಣಿಸಲಾಗುತ್ತದೆ. ಕಲಾವಿದರು ನಟಿಸುವ ನಾಟಕದಲ್ಲಿ ಅವರ ಪಾತ್ರವೇನು ? ಆ ಪಾತ್ರದಲ್ಲಿ ಅವರಿಗೆ ಅಭಿನಯಕ್ಕೆ ಎಷ್ಟು ಅವಕಾಶ ಇದೆ ಎಂಬುದನ್ನು ಗಮನಿಸಬೇಕು. ಈ ಸ್ಪರ್ಧೆಯಲ್ಲಿ ಕಲಾವಿದರು ನಟಿಸಿದ ನಾಟಕದಲ್ಲಿ ಅವರ ಕೊಡುಗೆ ಏನಿತ್ತು ಎಂಬುದನ್ನು ಗಮನಿಸಿದ್ದೇವೆ. ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಪೂರ್ವ ತಯಾರಿ ಅಗತ್ಯ. ಇಡೀ ನಾಟಕದ ಗೆಲುವಿನಲ್ಲಿ ತನ್ನ ಅಭಿನಯ ಎಷ್ಟು ಪೂರಕವಾಗಿದೆ ಎಂದು ಅರಿತು ಅಭಿನಯ ಮಾಡುವವರು ನಿಜವಾದ ಕಲಾವಿದರು.” ರಂಗಭೂಮಿ ಫೈನ್ ಆರ್ಟ್ಸ್ ಸಂಸ್ಥೆಯನ್ನು ಅಭಿನಂದಿಸುತ್ತಾ, ಈ ಸಂಸ್ಥೆಯು ಆಯೋಜಿಸಿದ ಯಶಸ್ವೀ ನಾಟಕ ಸ್ಪರ್ಧೆ ಇದಾಗಿದೆ ಮತ್ತು ನಾಟಕ ಸ್ಪರ್ಧೆಯಲ್ಲಿ 10 ತಂಡದವರೂ ಕೂಡ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ ಎಂದು ತಂಡಗಳಿಗೆ ಕಿವಿಮಾತು ಹೇಳಿದರು.
ಈ ತುಳು ನಾಟಕ ಸ್ಪರ್ಧೆಯಲ್ಲಿ ಅಭಿನಯ ಮಂಟಪ – ಪ್ರಥಮ, ಖಾರ್ಘರ್ ಕರ್ನಾಟಕ ಸಂಘ – ದ್ವಿತೀಯ, ಕೊಡ್ಯಡ್ಕ ಕ್ರಿಯೇಷನ್ಸ್ ತೃತೀಯ ಸ್ಥಾನವನ್ನು ಪಡೆದವು.