ಮಂಗಳೂರು : ಶ್ರೀರಾಮ್ ಕಲಾವೇದಿಕೆ ಕೈಕಂಬ ಇದರ ಆಶ್ರಯದಲ್ಲಿ ಆಯೋಜಿಸಿದ್ದ ‘ಮಕ್ಕಳ ಸಪ್ತದಿನ ಯಕ್ಷೋತ್ಸವ ವೈಭವ’ ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 25-05-2024ರಂದು ಕೈಕಂಬದ ಶ್ರೀರಾಮ್ ಸಭಾಂಗಣದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಆಶೀರ್ವಚನ ನೀಡಿ ಶುಭಹಾರೈಸಿದ ವೇ.ಮೂ. ಶ್ರೀ ಅನಂತ ಪದ್ಮನಾಭ ಉಪಾಧ್ಯಾಯರವರು “ಮಕ್ಕಳ ಅಭಿರುಚಿಯನ್ನು ಹೆಚ್ಚಿಸಿ ಪ್ರೋತ್ಸಾಹ ನೀಡುತಾ ಯಕ್ಷಕಲಾ ಸೇವೆಯನ್ನು ಅತ್ಯಂತ ವೈಭವವಾಗಿ ನಡೆಸಿಕೊಂಡು ಬರುತ್ತಿರುವ ಶ್ರೀರಾಮ್ ಕಲಾವೇದಿಕೆಯ ಕಾರ್ಯ ಅತ್ಯಂತ ಸ್ತುತ್ಯರ್ಹ, ಯಕ್ಷಗಾನದಲ್ಲಿ ಮಕ್ಕಳು ಅಭಿನಯಿಸುವುದು ಮಾತ್ರವಲ್ಲ ಎಲ್ಲಾ ಕಲಾವಿದರ ಪಾತ್ರಗಳನ್ನು ನೋಡಿ ಆನಂದಿಸಿ ತಮ್ಮ ಅನುಭವವನ್ನು ಹೆಚ್ಚಿಸಿಕೊಳ್ಳಬೇಕು. ಹೀಗೆ ಮಾಡಿದಲ್ಲಿ ಎಲ್ಲರಿಗೂ ಪೌರಾಣಿಕ ಕಥಾ ಅನುಭವ, ನಾಟ್ಯ ಮತ್ತು ಮಾತುಗಾರಿಕೆಯ ಸೊಗಸನ್ನು ಇನ್ನಷ್ಟು ಮನೋಜ್ಞವಾಗಿ ಪ್ರದರ್ಶಿಸಬಹುದು” ಎಂದು ಹೇಳಿದರು.
ಉಳಾಯಿಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲಾ ಶಿಕ್ಷಕರಾದ ಶ್ರೀ ಜಯಕರ ಶೆಟ್ಟಿ “ನಮ್ಮ ದೇಶದ ಪುರಾಣ ಇತಿಹಾಸಗಳ ಜ್ಞಾನ ವಿಕಾಸವಾಗಬೇಕಾದರೆ ಯಕ್ಷಗಾನದಂತಹ ಸಮೃದ್ಧ ಕಲೆಯನ್ನು ಪರಿಪೂರ್ಣವಾಗಿ ರಸಾಸ್ವಾದ ಮಾಡಬೇಕು. ಮಕ್ಕಳ ವ್ಯಕ್ತಿತ್ವ ವಿಕಸನವಾಗಲು ಹಾಗೂ ಪೌರಾಣಿಕ ಕಥಾ ಪ್ರಪಂಚದ ಅರಿವು ಮೂಡಲು ಯಕ್ಷಗಾನ ಅತ್ಯಂತ ಸಹಕಾರಿ” ಎಂಬುದಾಗಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ರಕ್ಷಿತ್ ಶೆಟ್ಟಿ ಪಡ್ರೆ ಮಾತನಾಡಿ ಕಾರ್ಯಕ್ರಮವನ್ನು ಸಂಘಟಿಸಿದ ಶ್ರೀ ಪ್ರಸನ್ನ ರಾವ್, ಶ್ರೀ ಹರಿ ರಾವ್ ಇವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ ಶಾರದಾ ಪ.ಪೂ. ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶ್ರೀ ರಮೇಶ ಆಚಾರ್ಯ ನಾರಳ ಮಾತನಾಡಿ “ಈ ಹಿಂದಿನ ಅಪೂರ್ವ ಯಕ್ಷಗಾನ ಕಲಾವಿದರ ತ್ಯಾಗ ಸೇವೆಗಳಿಂದ ಇವತ್ತು ಯಕ್ಷಗಾನ ಶ್ರೀಮಂತ ಕಲೆಯಾಗಿದೆ. ಏಳು ದಿನಗಳಲ್ಲಿ ಪ್ರದರ್ಶನಗೊಂಡ ಮಕ್ಕಳ ಯಕ್ಷಗಾನ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿವೆ. ಮಕ್ಕಳ ಪ್ರತಿಭೆಗಾಗಿ ವೇದಿಕೆ ಕಲ್ಪಿಸಿಕೊಟ್ಟ ಶ್ರೀರಾಮ್ ಕಲಾವೇದಿಕೆ ನಿಜಕ್ಕೂ ಅಭಿನಂದನಾರ್ಹ, ಇಂತಹ ಕಾರ್ಯಕ್ರಮ ಸರ್ವರಿಗೂ ಸ್ಫೂರ್ತಿಯಾಗಿದೆ” ಎಂದರು.
ಶ್ರೀರಾಮ ಕಲಾವೇದಿಕೆಯ ಅಧ್ಯಕ್ಷರಾದ ಶ್ರೀ ಎಂ. ಹರಿರಾವ್ ಹಾಗೂ ಕಾರ್ಯದರ್ಶಿ ಶ್ರೀ ಪ್ರಸನ್ನ ರಾವ್ ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು. ಶ್ರೀಮತಿ ಸರೋಜಾ ರಾವ್ ಹಾಗೂ ಶ್ರೀಮತಿ ಗೀತಾ ರಾವ್ ಉಪಸ್ಥಿತರಿದ್ದರು. ಶ್ರೀ ಗಜಾನನ ಭಟ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸರ್ವರ ಸಹಕಾರದೊಂದಿಗೆ ಶ್ರೀರಾಮಾಯಣದ ಕಥಾನಕದ ಪ್ರಸಂಗಗಳು ಏಳು ದಿನಗಳಲ್ಲಿ ಪ್ರದರ್ಶನಗೊಂಡವು. ಸಮಾರೋಪ ಸಮಾರಂಭದಂದು ‘ಪಾದ ಪ್ರತೀಕ್ಷಾ’ ಮತ್ತು ‘ರಾವಣವಧೆ’ ಎನ್ನುವ ಪ್ರಸಂಗ ಪ್ರದರ್ಶನಗೊಂಡಿತು.