ಸುಳ್ಯ : ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ನಡೆದ ಡಾ. ಜೀವನ್ ರಾಂ ಸುಳ್ಯ ನಿರ್ದೇಶನದ 34 ನೇ ವರ್ಷದ ರಾಜ್ಯಮಟ್ಟದ ಅಭಿನಯ ಪ್ರಧಾನ ಚಿಣ್ಣರಮೇಳದ ಸಮಾರೋಪ ಸಮಾರಂಭ ದಿನಾಂಕ 19 ಏಪ್ರಿಲ್ 2025ರಂದು ಸುಳ್ಯದ ರಂಗಮನೆಯಲ್ಲಿ ನಡೆಯಿತು.
ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುವ ಎಂ. ಕೃಷ್ಣಪ್ಪ ಮಕ್ಕಳ ಏಳೂ ನಾಟಕಗಳನ್ನು ವೀಕ್ಷಿಸಿ ಮಾತನಾಡಿ ” ಅಭಿನಯ ಕಲೆ ಪ್ರತಿಯೊಬ್ಬರ ಬದುಕಿನಲ್ಲೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಯಾವುದೇ ಸಂದರ್ಭದಲ್ಲೂ ಸಂವಹನಕ್ಕೆ ಪ್ರತಿಯೊಬ್ಬರಲ್ಲೂ ಅಭಿನಯ ಬೇಕೇ ಬೇಕು. ಇದು ಶೈಕ್ಷಣಿಕವಾಗಿಯೂ ಪೂರಕ. ರಂಗಮನೆಯ ಸಾಂಸ್ಕೃತಿಕ ಕಲಾ ವಾತಾವರಣ ಬೇರೆಲ್ಲೂ ನೋಡ ಸಿಗದು. ಮನೆಯೇ ರಂಗಮಂದಿರವಾದ ರೀತಿ ನಿಜಕ್ಕೂ ಆಶ್ಚರ್ಯ , ಜೀವನ್ ರಾಂ ಅಪರೂಪದ ರಂಗ ಸಾಧಕ ” ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಯೋಗ, ಯಕ್ಷಗಾನ, ನಾಟಕ, ಸಂಗೀತ, ಚಿತ್ರಕಲೆ ಇತ್ಯಾದಿಗಳಲ್ಲಿ ಸಾಧನೆಗೈಯ್ಯುತ್ತಿರುವ ಬಹುಮುಖ ಪ್ರತಿಭೆಯಾದ ಹಾರ್ದಿಕ ಕೆರೆಕ್ಕೋಡಿ ಇವಳಿಗೆ 2025ನೇ ಸಾಲಿನ ರಂಗಮನೆಯ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ರಂಗಮನೆ ಅಧ್ಯಕ್ಷ ಡಾ. ಜೀವನ್ ರಾಂ ಸುಳ್ಯ ಸ್ವಾಗತಿಸಿ, ಸಮೂಹ ಸಂಪನ್ಮೂಲ ವ್ಯಕ್ತಿ ಮಮತಾ ಕೆ. ಹಾರ್ದಿಕಳನ್ನು ಪರಿಚಯಿಸಿ, ಶಿಬಿರದ ಸಂಚಾಲಕ ಪ್ರಸನ್ನ ಐವರ್ನಾಡು ಕಾರ್ಯಕ್ರಮ ನಿರೂಪಿಸಿ, ರವೀಶ್ ಪಡ್ಡಂಬೈಲು ವಂದಿಸಿದರು. ವೇದಿಕೆಯಲ್ಲಿ ರಂಗಮನೆ ಪದಾಧಿಕಾರಿಗಳಾದ ಡಾ. ವಿದ್ಯಾಶಾರದ, ಲತಾ ಮಧುಸೂದನ್, ವಾಮನ ಕೊಯಿಂಗಾಜೆ, ಶ್ರೀಹರಿ ಪೈಂದೋಡಿ ಮತ್ತು ಶಿಬಿರದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತಿರಿದ್ದರು. ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರ ನೀಡಲಾಯಿತು.
ರಂಗೇರಿದ ಮಕ್ಕಳ ನಾಟಕೋತ್ಸವ
ಭಯಬಿಟ್ಟು ಅಭಿನಯಿಸಿದ 140 ಮಕ್ಕಳು
ರಂಗಮನೆ ಚಿಣ್ಣರಮೇಳದಲ್ಲಿ ಸಿದ್ಧಗೊಂಡ ಏಳು ನಾಟಕಗಳ ಪ್ರದರ್ಶನ ನೋಡುಗರ ಪ್ರಶಂಸೆಗೆ ಪಾತ್ರವಾಯಿತು. ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ 140 ಮಕ್ಕಳೂ ಭಯಬಿಟ್ಟು ರಂಗದಲ್ಲಿ ಲೀಲಾಜಾಲವಾಗಿ ಓಡಾಡುತ್ತಾ ಪ್ರದರ್ಶಿಸಿದ ನಾಟಕಗಳು ಒಂದಕ್ಕಿಂತ ಒಂದು ಭಿನ್ನವಾಗಿತ್ತು.
‘ಆಪರೇಶನ್ ಕುಕ್ಕುಟ’, ‘ಮೂರ್ಖ ಶಿಷ್ಯರು’, ‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’,’ ದಿ ಫಾರೆಸ್ಟ್ ಫ್ರೆಂಡ್ ಶಿಪ್’, ‘ಕೊಬ್ಬು ಕತ್ತೆ’ , ‘ಡೆವಿಲ್ ಜೋಕರ್ಸ್’ ಹಾಗೂ ‘ಕಪ್ಪೆರಾಯ’ ನಾಟಕಗಳು ಪ್ರದರ್ಶನಗೊಂಡವು. ಮಧುಸೂಧನ ಮೈಸೂರು, ರಾಜೇಂದ್ರ ಪ್ರಸಾದ್ ಮಂಡ್ಯ, ಮಮತಾ ಕಲ್ಮಕಾರು, ಭಾವನಾ ಕೆರೆಮಠ, ಹಾರಂಬಿ ಯತಿನ್ ವೆಂಕಪ್ಪ , ಮನುಜ ನೇಹಿಗ, ಪ್ರೀತಮ್ ಎಸ್. ಹಾಸನ ಇವರು ನಾಟಕಗಳನ್ನು ನಿರ್ದೇಶಿಸಿದ್ದರು.
ವಿಜಯ್ ಹಕ್ಕಿ ಬೆಳಗಾಂ, ಕೃಪಾ ನಾಯಕ್ ತುಮಕೂರು, ತೇಜಸ್ವಿನಿ ತರೀಕೆರೆ ಮತ್ತು ನಿಶ್ಮಿತಾ ಬೆಂಗಳೂರು ಇವರು ಸಹ ನಿರ್ದೇಶನ ನೀಡಿದ್ದರು. ಶಿವಗಿರಿ ಕಲ್ಲಡ್ಕ, ಮನುಜ ನೇಹಿಗ, ಮಮತಾ ಕಲ್ಮಕಾರು ಏಳೂ ನಾಟಕಗಳಿಗೆ ಸಂಗೀತ ನೀಡಿದರು. ಹಾರ್ಧಿಕಾ ಕೆರೆಕ್ಕೋಡಿ ಇವಳಿಂದ ಯೋಗ ಮತ್ತು ರಂಗಮನೆಯ ಮನುಜ ನೇಹಿಗ ಇವರಿಂದ ಮಣಿಪುರಿ ಸ್ಟಿಕ್ ಡ್ಯಾನ್ಸ್ ಪ್ರದರ್ಶನ ನಡೆಯಿತು. ಕಾರ್ಯಕ್ರಮ ವೀಕ್ಷಣೆಗೆ ರಂಗಮನೆಯ ಪ್ರೇಕ್ಷಾಂಗಣ ಹೆತ್ತವರು ಮತ್ತು ಪೋಷಕರಿಂದ ತುಂಬಿ ತುಳುಕಿತ್ತು.
ಶಿಬಿರದ ಮಧ್ಯೆ ಸುಳ್ಯ ಅಗ್ನಿಶಾಮಕ ಇಲಾಖೆಯಿಂದ ಅಗ್ನಿ ಶಮನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ಠಾಣಾಧಿಕಾರಿ ಸೋಮನಾಥರ ನೇತೃತ್ವದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿದ್ದ ನಾಗರಾಜ್ ಪೂಜಾರಿ ಕೋಟ ಇವರು ಅಗ್ನಿ ಜಲ ಆಪತ್ತು- ಪ್ರಾಣರಕ್ಷಣೆಯ ಬಗ್ಗೆ ಉಪನ್ಯಾಸ ನೀಡಿದರು. ಸುಳ್ಯ ವರ್ತಕರ ಸಂಘದ ಅಧ್ಯಕ್ಷರಾದ ಪಿ.ಬಿ.ಸುಧಾಕರ ರೈ ಯವರು ಮಕ್ಕಳಿಗೆ ರಕ್ತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ರಂಗಕಲಾವಿದೆ ವಸಂತ ಲಕ್ಷ್ಮೀ ಪುತ್ತೂರು ಅಭಿನಯದ ಬಗೆಗಿನ ತನ್ನ ಅನುಭವವನ್ನು ಹಂಚಿಕೊಂಡರು. ಸುಳ್ಯ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಮಮತಾ ಕೆ. ಇವರು ಶಿಕ್ಷಣ- ಅಭಿನಯದ ವಿಷಯ ಹಾಡು ಕುಣಿತಗಳ ಮೂಲಕ ಮಕ್ಕಳ ಆಸಕ್ತಿ ಮೂಡಿಸಿದರು.
ಶಿಬಿರಾರ್ಥಿಗಳ ಹಾಗೂ ಪೋಷಕರ ಅನಿಸಿಕೆಗಳು :
“ಆರಂಭದಲ್ಲಿ ಇಷ್ಟು ದೂರ ನನ್ನ ಮಗಳು ಲಹರಿಯನ್ನು ಕಳಿಸಲು ಹೆದರಿದ್ದೆ. ಆದ್ರೆ ಈಗ ಸಾರ್ಥಕ ಅನಿಸ್ತದೆ . ಮಗಳನ್ನು ಒಳ್ಳೆಯ ನೃತ್ಯಗಾತಿಯನ್ನಾಗಿ ಮಾಡುವ ನನ್ನಾಸೆಗೆ ಈ ಅಭಿನಯ ಶಿಬಿರ ಪೂರಕವಾಯ್ತು. ರಂಗದ ಪ್ರತಿಯೊಂದು ಸೂಕ್ಷ್ಮತೆಗಳನ್ನು ಅತ್ಯಂತ ಸರಳವಾಗಿ ಕಲಿಸುವ ಶಾಲೆ ಇದು. ಅವಳಿಗೆ ಆಸಕ್ತಿ ಇರುವ ತನಕ ಪ್ರತಿವರ್ಷ ರಂಗಮನೆಗೆ ಕಳಿಸ್ತೇನೆ”.
— ವಿದುಷಿ ಅಕ್ಷತಾ ಭಟ್ ಉಡುಪಿ
” ಶಿಬಿರಕ್ಕೆ ಬಂದ ನನ್ನ ಮಗ ದರ್ಶ್ ನಲ್ಲಿ ತುಂಬ ಬದಲಾವಣೆ ಕಂಡಿದ್ದೇನೆ. ಈ ಕಲಾ ವಾತಾವರಣ, ಇಲ್ಲಿನ ಸಂಪನ್ಮೂಲ ವ್ಯಕ್ತಿಗಳ ಸಜ್ಜನಿಕೆ, ಪ್ರೀತಿ ಬೇರೆಲ್ಲೂ ಕಾಣಸಿಗದು. ಜೀವನ್ ಸರ್ ಒಬ್ಬ ಶ್ರೇಷ್ಠ ಗುರು”
— ಶ್ರೀಮತಿ ಗಾಯತ್ರಿ ಪೈ ಮಂಗಳೂರು
” ಹೊಸ ಅನುಭವ ನೀಡಿದ ಶಿಬಿರ ಇದು.
ಭಾಷಣ ಸಾಹಿತ್ಯದಲ್ಲಿ ನನಗೆ ವಿಶೇಷ ಆಸಕ್ತಿ.ಅದಕ್ಕೆ ಪೂರಕವಾಗಿ ಅಭಿನಯ ಕಲೆಯ ಪ್ರಾಮುಖ್ಯತೆಯನ್ನು ಇಲ್ಲಿ ಅರಿತಿದ್ದೇನೆ. ಬದುಕು ಕಲಿಸುವ ಚಿಣ್ಣರಮೇಳ ಇದು. ರಂಗಮನೆಯಲ್ಲಿ ಪ್ರತಿಯೊಂದು ಮಗುವನ್ನೂ ವಿಶೇಷವಾಗಿ ಗಮನಿಸ್ತಾರೆ. ನಮ್ಮದೇ ಮನೆ ಅನಿಸಿದೆ.”
—- ಅನುಷಾ ಕೆ. ನಾಯಕ್ 9 ನೇ ತರಗತಿ ಸುಳ್ಯ
” ರಂಗಮನೆಗೆ ನಾನು ಬರ್ತಿರೋದು ನಾಲ್ಕನೇ ವರ್ಷ. ಇಲ್ಲಿ ಕಲಿತ ಎಲ್ಲಾ ಹಾಡು, ಅಭಿನಯ, ನಾಟಕ, ಕ್ರಾಫ್ಟ್ ವಿಷಯಗಳು ನನ್ನ ಶಾಲೆಯಲ್ಲಿ ಬಹಳ ಪ್ರಯೋಜನಕ್ಕೆ ಬರುತ್ತಿದೆ. ತುಂಬ ಜನ ಫ್ರೆಂಡ್ಸ್ ಸಿಕ್ಕಿದ್ದಾರೆ ನನಗೆ “.
—– ಅನಯಾ ವಿನಯ್ ರಾವ್ 5 ನೇ ತರಗತಿ ಬೆಂಗಳೂರು