ಮಂಗಳೂರು : ಅಂಬುರುಹ ಯಕ್ಷಸದನ ಪ್ರತಿಷ್ಠಾನ(ರಿ) ಬೊಟ್ಟಿಕೆರೆ ಹಾಗೂ ಮಂಗಳೂರು ವಿ. ವಿ. ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆದ ಐದು ದಿನಗಳ ‘ ಯಕ್ಷಶಿಕ್ಷಣ ಶಿಬಿರ- 2025’ ಇದರ ಸಮಾರೋಪ ಸಮಾರಂಭ ದಿನಾಂಕ 15 ಏಪ್ರಿಲ್ 2025ರ ಮಂಗಳವಾರದಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಯಕ್ಷಗಾನ ಕಲೆಯನ್ನು ಅರಿತುಕೊಂಡು ನೈಜವಾಗಿ ಆಸ್ವಾದಿಸುವವರ ಸಂಖ್ಯೆ ಕಡಿಮೆಯಾಗಿದೆ. ಯಕ್ಷಗಾನದ ಹೆಜ್ಜೆಗಾರಿಕೆಯ ಸೌಂದರ್ಯ, ಮುದ್ರೆಗಳು, ಪ್ರಸಂಗ ಸಾಹಿತ್ಯದ ಧ್ವನಿ, ಅರ್ಥಗಾರಿಕೆಯ ಭಾಷಿಕ ಸೊಗಸು ಮೊದಲಾದವುಗಳನ್ನು ತಿಳಿದುಕೊಂಡು ಆಸ್ವಾದಿಸಿದರೆ ಸಿಗುವ ರಸಾನುಭವವೇ ವಿಶೇಷವಾದುದು. ಇಂತಹ ಕಲಾಸಕ್ತಿಯನ್ನು ಬೆಳೆಸುವ ಯಕ್ಷಶಿಕ್ಷಣ ಬೇಕಾಗಿದೆ. ಯಕ್ಷಶಿಕ್ಷಣ ಶಿಬಿರಗಳು ಈ ದೃಷ್ಟಿಯಿಂದ ಉಪಯುಕ್ತ. ಯಕ್ಷಗಾನವು ರಸಾನುಭವದ ನೆಲೆ. ಸೃಜನಶೀಲ ನೆಲೆ, ಸಂಸ್ಕೃತಿ ನಿಷ್ಠೆ ಎಂಬ ಈ ಮೂರು ನೆಲೆಗಳಲ್ಲಿ ಜೋಡಿಕೊಂಡಿಸಿರುವ ಕಲೆಯಾಗಿದೆ. ಯಕ್ಷಗಾನವನ್ನು ಶೈಕ್ಷಣಿಕವಾಗಿ ಕಲಿಯುವುದಕ್ಕೆ ಅನೇಕ ಆಯಾಮಗಳಿವೆ, ಆವರಣಗಳಿವೆ. ಇಂತಹ ಆವರಣಗಳನ್ನು ಅರಿತು ಕಲಾಸಕ್ತಿಯನ್ನು ಬೆಳೆಸಿ ಉತ್ತಮ ಕಲಾವಿದರನ್ನಾಗಿ ರೂಪಿಸುವುದಕ್ಕೆ ಇಂತಹ ಶಿಬಿರಗಳು ಪೂರಕವಾಗಿದೆ. ಯಕ್ಷಗಾನ ಕಲೆಗೆ ಪೂಂಜರ ಕೊಡುಗೆ ಅಪಾರವಾಗಿದ್ದು ಮಂಗಳೂರು ವಿ. ವಿ. ಯ ಯಕ್ಷಗಾನ ಅಧ್ಯಯನ ಕೇಂದ್ರದದೊಂದಿಗೆ ಒಡನಾಟವನ್ನು ಇಟ್ಟುಕೊಂಡು ಮಾರ್ಗದರ್ಶನ ನೀಡುತ್ತಿದ್ದವರು. ಅವರ ಕನಸಿನಂತೆಯೇ ಅಂಬುರುಹ ಪ್ರತಿಷ್ಠಾನದ ಮೂಲಕ ಯಕ್ಷಗಾನದ ಅನೇಕ ಚಟುವಟಿಕೆಗಳು ನಡೆಯುತ್ತಿರುವುದು ಶ್ಲಾಘನೀಯವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಅಂಬುರುಹ ಯಕ್ಷಸದನ ಪ್ರತಿಷ್ಠಾನದ ಅಧ್ಯಕ್ಷರಾದ ಶೋಭಾ ಪುರುಷೋತ್ತಮ ಪೂಂಜ, ಉಪಾಧ್ಯಕ್ಷರಾದ ರಾಜಾರಾಮ ಹೊಳ್ಳ ಮೊದಲಾದವರು ಭಾಗವಹಿಸಿದ್ದರು. ಅಂಬುರುಹ ಪ್ರತಿಷ್ಠಾನದ ದೀವಿತ್ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನ ಶಿಬಿರದಲ್ಲಿ ಭಾಗವಹಿಸಿದ ಯಕ್ಷಮಂಗಳ ತಂಡದ ವಿದ್ಯಾರ್ಥಿಗಳು ಶಿಬಿರದ ಅನುಭವವನ್ನು ಹಂಚಿಕೊಂಡರು.