ಸುರತ್ಕಲ್ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಕರ್ನಾಟಕ ಗಮಕ ಕಲಾ ಪರಿಷತ್ತು ದ.ಕ. ಜಿಲ್ಲೆ, ಕರ್ನಾಟಕ ಗಮಕ ಕಲಾ ಪರಿಷತ್ತು ಮಂಗಳೂರು ಮತ್ತು ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ 9ನೇ ದಕ್ಷಿಣ ಕನ್ನಡ ಜಿಲ್ಲಾ ಗಮಕ ಸಮ್ಮೇಳನದ ಸಮಾರೋಪ ಸಮಾರಂಭವು ದಿನಾಂಕ 13-07-2024ರಂದು ಸುರತ್ಕಲ್ ಇಲ್ಲಿನ ಗೋವಿಂದ ದಾಸ ಕಾಲೇಜಿನ ಆವರಣದಲ್ಲಿ ನಡೆಯಿತು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ ಇದರ ಮಾಜಿ ಅಧ್ಯಕ್ಷ ಹಾಗೂ ಧರ್ಮದರ್ಶಿಯಾದ ಹರಿಕೃಷ್ಣ ಪುನರೂರು ಮಾತನಾಡಿ “ಗಮಕ ಕಲೆಯ ಮೂಲಕ ಭಾರತೀಯ ಪುರಾಣ ಪರಂಪರೆಯನ್ನು ತಿಳಿದುಕೊಂಡು ಅದರಲ್ಲಿರುವ ಉನ್ನತ ಅಂಶಗಳನ್ನು ಮತ್ತು ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿದೆ. ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಗಮಕ ಕಲೆಯನ್ನು ಸರ್ವರೂ ಪ್ರೋತ್ಸಾಹಿಸಿ ಮುಂದಿನ ಜನಾಂಗಕ್ಕೆ ಧಾರೆಯೆರೆಯಬೇಕು.” ಎಂದು ನುಡಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ “ಗಮಕಿಗಳು ತಮ್ಮ ಗಮಕ ವಾಚನಗಳ ಮೂಲಕ ಆಧ್ಯಾತ್ಮ ಚಿಂತನೆಯತ್ತ ಜನರ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.” ಎಂದರು. ಗಮಕಿ ಹಾಗೂ ಸಮ್ಮೇಳನಾಧ್ಯಕ್ಷರಾದ ಹೆಚ್. ಯಜ್ಞೇಶಾಚಾರ್ಯ ಮಾತನಾಡಿ “ಗಮಕ ಕಲಾ ಸಮ್ಮೇಳನವು ಯಶಸ್ವಿಯಾಗಿ ನಡೆದಿದ್ದು ಹಿರಿಯ ಗಮಕಿಗಳೊಂದಿಗೆ ಕಿರಿಯ ಹಾಗೂ ಯುವ ತಲೆಮಾರಿನ ಗಮಕ ಕಲಾವಿದರ ಪ್ರತಿಭಾ ಅನಾವರಣಕ್ಕೆ ವೇದಿಕೆ ದೊರಕಿದೆ.” ಎಂದರು.
ಕಲ್ಕೂರ ಪ್ರತಿಷ್ಠಾನ ಪ್ರವರ್ತಿಸಿರುವ ಪಾವಂಜೆ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಪ್ರಶಸ್ತಿಯನ್ನು ಮಂಜುಳಾ ಜಿ. ರಾವ್ ಇರಾ, ವಿದ್ವಾನ್ ಡಾ. ಬಂದಗದ್ದೆ ನಾಗರಾಜ್, ಪ್ರೊ. ಮಧೂರು ಮೋಹನ ಕಲ್ಲೂರಾಯ, ಎಸ್. ಪಿ. ಗುರುದಾಸ್, ಭಾಸ್ಕರ್ ರೈ ಕುಕ್ಕುವಳ್ಳಿ, ಸೇರಾಜೆ ಸೀತಾರಾಮ ಭಟ್ ಇವರಿಗೆ ನೀಡಿ ಪುರಸ್ಕರಿಸಲಾಯಿತು. ಡಾ. ಎಸ್.ಪಿ. ಗುರುದಾಸ್ ಸಮ್ಮಾನಿತರ ಪರವಾಗಿ ಮಾತನಾಡಿದರು.
ಕಾರ್ಯಾಧ್ಯಕ್ಷ ಪ್ರೊ. ಕೃಷ್ಣಮೂರ್ತಿ ಪಿ., ಗೋವಿಂದ ದಾಸ ಪ. ಪೂ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ., ಕಲಾವಿದ ಜನಾರ್ದನ ಹಂದೆ, ಗಮಕ ಕಲಾ ಪರಿಷತ್ತು ಮಂಗಳೂರು ತಾಲೂಕಿನ ಅಧ್ಯಕ್ಷ ಸುರೇಶ್ ರಾವ್ ಅತ್ತೂರು ಹಾಗೂ ಕಾರ್ಯದರ್ಶಿ ಶುಭಕರ ಕೆ. ಉಪಸ್ಥಿತರಿದ್ದರು. ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ವೆಂಕಟ್ರಮಣ ಪೈ ಸ್ವಾಗತಿಸಿ, ಸುಧಾಕರ್ ರಾವ್ ಪೇಜಾವರ ನಿರೂಪಿಸಿ, ತೋನ್ಸೆ ಪುಷ್ಕಳ್ ಕುಮಾರ್ ವಂದಿಸಿದರು.
ಗಮಕ ವಿದ್ವಾನ್ ದಿ. ಪಿ. ಸಿ. ವಾಸುದೇವ ರಾವ್ ಸಂಸ್ಮರಣಾ ದತ್ತಿನಿಧಿ ಕಾರ್ಯಕ್ರಮವಾದ ‘ಕಾವ್ಯ ತರಂಗ’ದಲ್ಲಿ ರನ್ನನ ‘ಗದಾಯುದ್ಧ’ದಿಂದ ಆಯ್ದ ಭಾಗವನ್ನು ಸಮ್ಮೇಳನಾಧ್ಯಕ್ಷ ಹೆಚ್. ಯಜ್ಞೇಶಾಚಾರ್ಯ ವಾಚಿಸಿದರು. ಕರ್ನಾಟಕ ಗಮಕ ಕಲಾ ಪರಿಷತ್‌ನ ಅಧ್ಯಕ್ಷ ಎ. ವಿ. ಪ್ರಸನ್ನ ವ್ಯಾಖ್ಯಾನಿಸಿದರು. ಮಂಗಳೂರಿನ ಶಾರದ ಪದವಿಪೂರ್ವ ಕಾಲೇಜು ಇಲ್ಲಿನ ಉಪನ್ಯಾಸಕಿ ಯಶೋದಾ ಕುಮಾರಿ ಸ್ವಾಗತಿಸಿ, ಗೋವಿಂದ ದಾಸ ಕಾಲೇಜು ಸುರತ್ಕಲ್ ಇಲ್ಲಿನ ಉಪನ್ಯಾಸಕ ಡಾ. ಸಂತೋಷ್ ಆಳ್ವ ನಿರೂಪಿಸಿ, ವಿದ್ಯಾದಾಯಿನೀ ಪ್ರೌಢಶಾಲೆಯ ಶಿಕ್ಷಕಿ ಉಮಾವತಿ ವಂದಿಸಿದರು.
ಗಮಕ ವಿದ್ವಾನ್ ಪಿ. ಎಚ್. ಸೇತುರಾವ್ ಹಾಗೂ ಶಾಂತಾಬಾಯಿ ಧತ್ತಿನಿದಿ ಕಾರ್ಯಕ್ರಮವಾದ ‘ಭಾವತರಂಗ’ದಲ್ಲಿ ಪದವಿಪೂರ್ವ ಕಾಲೇಜು ವಿಭಾಗದ ಪಠ್ಯಾಧಾರಿತ ಭಾಗ ‘ಹಲುಬಿದಳ್ ಕಲ್ಮರಂ ಕರಗುವಂತೆ’ ಎಂಬ ಭಾಗವನ್ನು ಕರ್ನಾಟಕ ಗಮಕ ಕಲಾ ಪರಿಷತ್ ಇದರ ಮಾಜಿ ಅಧ್ಯಕ್ಷೆ ಗಮಕಿ ಗಂಗಮ್ಮ ಕೇಶವಮೂರ್ತಿ ವಾಚಿಸಿದರು. ನಿವೃತ್ತ ಕನ್ನಡ ಉಪನ್ಯಾಸಕ ಗಮಕಿ ವಿನಾಯಕ್ ಎಂ. ಎಸ್. ಶಿವಮೊಗ್ಗ ವ್ಯಾಖ್ಯಾನಿಸಿದರು. ಗೋವಿಂದ ದಾಸ ಕಾಲೇಜಿನ ಉಪನ್ಯಾಸಕಿ ಜ್ಯೋತಿ ಕಾಮತ್ ಸ್ವಾಗತಿಸಿ, ಉಪನ್ಯಾಸಕಿ ಅಕ್ಷತಾ ವಿ. ನಿರೂಪಿಸಿ, ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಕೃತಿ ವಂದಿಸಿದರು.
‘ತ್ರಿಭಾಷಾ ಪಠ್ಯ ತರಂಗ’ ಕಾರ್ಯಕ್ರಮದಲ್ಲಿ ಸಂಸ್ಕೃತ ಕಾವ್ಯಭಾಗವನ್ನು ಶಾರದ ವಿದ್ಯಾನಿಕೇತನ ತಲಪಾಡಿಯ ಶಿಕ್ಷಕಿ ಸ್ಮಿತಾ ಜಿ, ಕನ್ನಡ ಕಾವ್ಯಭಾಗವನ್ನು ಗಮಕ ಕಲಾ ಪರಿಷತ್ ಬೆಳ್ತಂಗಡಿಯ ಕಾರ್ಯದರ್ಶಿ ಮೇಧಾ ಕೆ., ತುಳು ಕಾವ್ಯಭಾಗವನ್ನು ಭಾಗವತ ರಾಜಾರಾಂ ಕೈರಂಗಳ ವಾಚನ ಮಾಡಿದರು. ಗೋವಿಂದ ದಾಸ ಕಾಲೇಜಿನ ಉಪನ್ಯಾಸಕಿ ಶರ್ಮಿತಾ ಯು. ಸ್ವಾಗತಿಸಿ, ಶಾರದಾ ಪ. ಪೂ. ಕಾಲೇಜು ಮಂಗಳೂರಿನ ಉಪನ್ಯಾಸಕ ರಮೇಶ್ ಆಚಾರ್ಯ ನಿರೂಪಿಸಿ, ಗೋವಿಂದ ದಾಸ ಕಾಲೇಜಿನ ಉಪನ್ಯಾಸಕಿ ರಮಿತಾ ವಂದಿಸಿದರು.
‘ಯುವ ತರಂಗ’ ಕಾರ್ಯಕ್ರಮದಲ್ಲಿ ಎಸ್. ಡಿ. ಪಿ. ಟಿ. ಪ್ರೌಢಶಾಲೆ ಕಟೀಲಿನ ವಿದ್ಯಾರ್ಥಿ ಅಚಿಂತ್ಯ ಎಸ್. ರಾವ್ ಕಾವ್ಯ ವಾಚನ ನಡೆಸಿದರು. ಬೆಳ್ತಂಗಡಿಯ ಜಯಶ್ರೀ ದೇವರನಾಮ ಹಾಡಿದರು. ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿನಿ ಅನನ್ಯ ಮತ್ತು ಶಾರದ ವಿದ್ಯಾಲಯ ಮಂಗಳೂರಿನ ವಿದ್ಯಾರ್ಥಿನಿ ಪ್ರಣತಿ ಜನಪದಗೀತೆಯನ್ನು ಹಾಡಿದರು. ಎಂ. ಎಸ್. ಎ. ಮೈಸೂರಿನ ವಿದ್ಯಾರ್ಥಿ ಆದಿತ್ಯ ಎಸ್. ರಾವ್ ಭಾವಗೀತೆ ಹಾಡಿದರು. ಮಧೂರು ರಾಂಪ್ರಕಾಶ್ ಕಲ್ಲೂರಾಯ ವಚನವನ್ನು ವಾಚಿಸಿದರು. ವೆಂಕಟ್ರಮಣ ಭಟ್ ಸ್ವಾಗತಿಸಿ, ಗಮಕ ಕಲಾ ಪರಿಷತ್ ಮಂಗಳೂರಿನ ಕೋಶಾಧಿಕಾರಿ ಚಂದ್ರಿಕಾ ಸುರೇಶ್ ನಿರೂಪಿಸಿ, ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತಿನ ಕೋಶಾಧಿಕಾರಿ ಸುವರ್ಣ ಕುಮಾರಿ ಕೆ.ಆರ್. ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾದ ‘ಗಮಕ ಯಕ್ಷ ತರಂಗ’ದಲ್ಲಿ ಲಕ್ಷ್ಮೀಶ ಕವಿ ವಿರಚಿತ ಜೈಮಿನಿ ಭಾರತದ ‘ಸೀತಾ ಪರಿತ್ಯಾಗ’ವನ್ನು ಪ್ರದರ್ಶಿಸಲಾಯಿತು. ಭಾಗವತರಾಗಿ ಶ್ರೀ ಕೃಷ್ಣಭಟ್ ಸುಣ್ಣಂಗುಳಿ, ಚಂಡೆ ಹಾಗೂ ಮದ್ದಳೆಯಲ್ಲಿ ವಿದ್ವಾನ್ ರಘುಪತಿ ಭಟ್ ಸಸಿಹಿತ್ಲು, ಶುಭಕರ್ ಕೆ. ಹಾಗೂ ಗೌತಮ್ ಮಜಿಬೈಲು, ಪಾತ್ರಧಾರಿಗಳಾಗಿ ಈಶ್ವರ ಭಟ್ ಸರ್ಪಂಗಳ, ಆನಂದ ಭಟ್ ಕೆಕ್ಕಾರು, ಶಶಿಕಿರಣ್ ಭಟ್ ಸುಣ್ಣಂಗುಳಿ, ವಿನಯ ಆಚಾರ್ಯ ಹೊಸಬೆಟ್ಟು ಭಾಗವಹಿಸಿದ್ದರು.