ಕೊಕ್ಕಡ : ಧರ್ಮಸ್ಥಳ ಸಮೀಪದ ನಿಡ್ಲೆ ಕರುಂಬಿತ್ತಿಲು ಮನೆಯಂಗಳದಲ್ಲಿ 24ನೇ ವರ್ಷದ 5 ದಿನಗಳ ಕಾಲ ನಡೆದ ಸಂಗೀತ ಶಿಬಿರದ ಸಮಾರಂಭವು ದಿನಾಂಕ 19-05-2024ರ ಭಾನುವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ “ಸಂಗೀತದಿಂದ ಸಂಸ್ಕೃತಿ, ಸಂಸ್ಕಾರ ಉದ್ದೀಪನಗೊಳ್ಳುವುದರೊಂದಿಗೆ ಚಂಚಲ ಮನಸ್ಸು ಮತ್ತು ಇಂದ್ರಿಯಗಳನ್ನು ನಿಗ್ರಹಿಸುವುದು. ನಾವು ಎಲ್ಲಾ ಮರೆತು ಸಂಗೀತದ ಆನಂದ ಅನುಭವಿಸಬೇಕು.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ “ಮನೆಗಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕರುಂಬಿತ್ತಿಲು ಸಂಗೀತ ಶಿಬಿರದಂತಹ ಸನಿವಾಸ ಶಿಬಿರಗಳು ವಿದ್ಯೆಯ ಜತೆಗೆ ಸಂಸ್ಕಾರವನ್ನು ಹೇಳಿಕೊಡುತ್ತವೆ. ಶಿಬಿರಾರ್ಥಿಗಳು ಸಂಗೀತದ ರಾಯಭಾರಿಗಳಾಗಿ ಸಮಾಜಕ್ಕೆ ಕೀರ್ತಿ ತರಬೇಕು.” ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಠಲ ರಾಮಮೂರ್ತಿ “10 ಮಕ್ಕಳೊಂದಿಗೆ ಮನೆಯಲ್ಲಿ ಪ್ರಾರಂಭಿಸಿದ ಸಂಗೀತ ಶಿಬಿರದ ಈ 24ನೇ ವರ್ಷದಲ್ಲಿ 300ಕ್ಕೂ ಹೆಚ್ಚು ಸಂಗೀತಾಸಕ್ತ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ನಾಡಿನ ಶ್ರೇಷ್ಠ ಕಲಾವಿದರನ್ನು ಕರೆಸಿ ಸಂಗೀತಾಸಕ್ತರಿಗೆ ತರಬೇತಿ, ಮಾರ್ಗದರ್ಶನ ನೀಡಲಾಗುತ್ತಿದೆ. ಮುಂದಿನ ವರ್ಷ ರಜತ ಮಹೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಯೋಜನೆಯಿದ್ದು, ಶ್ರೀಗಳ ಅಪೇಕ್ಷೆಯಂತೆ ಒಂದು ದಿನ ಎಡನೀರು ಮಠದಲ್ಲೂ ಒಂದು ದಿನ ವಿಶಾಖಪಟ್ಟಣದಲ್ಲೂ ಸಂಗೀತ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದೇವೆ.” ಎಂದರು.
ಬೆಳಗ್ಗೆ ಖ್ಯಾತ ವೀಣಾವಾದಕ ರಮಣ ಬಾಲಚಂದ್ರನ್ ಅವರಿಂದ ವೀಣಾವಾದನ ಕಛೇರಿ ನಡೆಯಿತು. ಇವರಿಗೆ ವಿ. ವಿ. ರಮಣಮೂರ್ತಿ ಮೃದಂಗದಲ್ಲಿ ಸಾಥ್ ನೀಡಿದರು. ಧರ್ಮಸ್ಥಳದ ಸೀತಾರಾಮ ತೋಳಡಿತ್ತಾಯ ಭಾಗವಹಿಸಿದ್ದರು.
ಸಂಗೀತ ಶಿಬಿರವನ್ನು 15-05-024 ರಂದು ಉಡುಪಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಉದ್ಘಾಟಿಸಿದ್ದರು. ಅಂದು ಖ್ಯಾತ ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ತಂಡದವರಿಂದ ಯಕ್ಷಗಾನವೈಭವ ನಡೆದಿತ್ತು. ಶಿಬಿರದಲ್ಲಿ ಖ್ಯಾತ ಸಂಗೀತ ದಿಗ್ಗಜರಾದ ಟಿ. ವಿ. ರಾಮಪ್ರಸಾದ್, ವಿಠಲ್ ರಂಗನ್, ಎಂ. ಎಸ್. ವರದನ್, ಪಯ್ಯನೂರು ಗೋವಿಂದ ಪ್ರಸಾದ್, ವೈ. ಜಿ. ಶ್ರೀಲತಾ, ನಿಕ್ಷಿತ್ ಪೂತ್ತೂರ್, ಅಭಿಷೇಕ್ ರಘುರಾಂ, ಸುಂದರ ಕುಮಾರ್, ಎಚ್. ಎನ್. ಭಾಸ್ಕರ್, ಹನುಮಂತಪುರಂ ಭೂವರಾಹಂ, ವಿ. ವಿ. ರಮಣಮೂರ್ತಿ ಮತ್ತಿತರ ಕಲಾವಿದರು ತಮ್ಮ ಸಂಗೀತ ಕಾರ್ಯಕ್ರಮದ ಮೂಲಕ ಶಿಬಿರಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.