ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆಯ ಬೆಳ್ಳಿ ಹಬ್ಬದ ‘ಸಿನ್ಸ್ 1999 ಶ್ವೇತಯಾನ’ದ ಸಮಾಪನ “ಮಧ್ಯಮಾವತಿ” ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 19 ಏಪ್ರಿಲ್ 2025ರಂದು ತೆಕ್ಕಟ್ಟೆಯ ಪಿ. ಎಂ. ಶ್ರೀ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು.
ಮಲ್ಯಾಡಿ ಸೀತಾರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಗೀತಾನಂದ ಫೌಂಡೇಶನ್ ಇದರ ಆನಂದ ಸಿ. ಕುಂದರ್ ಮಾತನಾಡಿ “ಯಶಸ್ವೀ ಕಲಾವೃಂದ ಕರಾವಳಿ ಭಾಗದ ಹೆಮ್ಮೆಯ ಸಂಸ್ಥೆ. ಮರೆಯಾದ ಯಕ್ಷಗಾನದ ಎಲ್ಲಾ ಆಯಾಮಗಳನ್ನು ಮತ್ತೆ ನೆನಪಿಸಿ, ಜೀವಂತ ಉಳಿಸಿದ ಸಂಸ್ಥೆ ಇದು. ಕೇವಲ ಯಕ್ಷಗಾನವಲ್ಲದೆ ಎಲ್ಲಾ ಲಲಿತಕಲಾ ವಿಭಾಗದಲ್ಲಿ ಅನೇಕ ಕಲಾವಿದರನ್ನು ಸಮಾಜಕ್ಕೆ ಕೊಟ್ಟ ಸಂಸ್ಥೆಯ ಬೆಳ್ಳಿ ಹಬ್ಬದ ಸಡಗರದಲ್ಲಿ ಭಾಗಿಯಾಗುವ ಅವಕಾಶಕ್ಕೆ ಎಲ್ಲರೂ ಕೃತಜ್ಙತೆ ಸಲ್ಲಿಸಲೇಬೇಕು” ಎಂದರು .
ಶ್ವೇತಯಾನ ಸಮಾಪನ ‘ಮಧ್ಯಮಾವತಿ’ ಕಾರ್ಯಕ್ರಮದಲ್ಲಿ ಗುರುವಂದನೆ ಸಲ್ಲಸಿಕೊಂಡು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ “ಕಲೆಯಲ್ಲಿ ಆಸಕ್ತಿ ಇಲ್ಲದೇ ಹೋದರೆ ಸಾಮಾನ್ಯ ಮನುಷ್ಯನಾಗಲು ಸಾಧ್ಯವಿಲ್ಲ. ಮಕ್ಕಳಲ್ಲಿ ಹುಟ್ಟಿನಿಂದಲೇ ಅಡಕವಾಗಿರುವ ಕಲೆಯನ್ನು ಹೊರತರುವ ಕೆಲಸವನ್ನು ಕಲಾ ಶಿಕ್ಷಕರು ಇತ್ತೀಚೆಗೆ ಹಲವು ಕಡೆಗಳಲ್ಲಿ ಮಾಡುತ್ತಿರುವುದು ಸ್ತುತ್ಯರ್ಹ. ಮನಸ್ಸಿನ ಕೊರತೆಗಳನ್ನು ನೀಗಿಸಬಲ್ಲ ಕಲೆಯನ್ನು ಮಕ್ಕಳಲ್ಲಿ ತುಂಬಿಸುವ ಕಾರ್ಯ ನಡೆಸುತ್ತಿರುವ ಯಶಸ್ವಿ ಕಲಾವೃಂದದ ಗುರು ಸೀತಾರಾಮ ಶೆಟ್ಟಿಯವರು ಜೀವನ ಪರ್ಯಂತ ಮಕ್ಕಳ ನಡುವೆಯೇ ಬೆಳೆದು ಸಾರ್ಥಕ್ಯ ಕಂಡುಕೊಂಡು ಸಂಸ್ಥೆಯನ್ನು ಬೆಳೆಸಿದವರು. ಹೀಗೆ ಸಾಂಸ್ಕೃತಿಕವಾಗಿ ಬೆಳೆದ ಸಂಸ್ಥೆಗೆ ಆರ್ಥಿಕ ಸಹಕಾರವೂ ಸಿಕ್ಕಿದರೆ ಕಲಿತ ಮಕ್ಕಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಸಾಧ್ಯ” ಎಂದರು.
ಕಾರ್ಯಕ್ರಮದಲ್ಲಿ ಗುರುವಂದನೆ ಸಲ್ಲಿಸಿಕೊಂಡ ಗುರು ಸೀತಾರಾಮ ಶೆಟ್ಟಿ ಕೊಯ್ಕೂರು ಮಾತನಾಡಿ “ಯಶಸ್ವೀ ಯಾನ ಸುಲಭವಾಗಿರಲಿಲ್ಲ. ಕಲ್ಲು ಮುಳ್ಳಿನ ಹಾಸಿಗೆಯಾಗಿದ್ದ ಸಂಸ್ಥೆ ಬಹಳ ಕಷ್ಠ ಪಟ್ಟು ಇಪ್ಪತೈದು ವರ್ಷ ಕಳೆದಿದೆ. ಹೃದಯ ತುಂಬಿ ಬಂದಿದೆ” ಎಂದರು.
ಎಂದು ಡಾ. ಜಗದೀಶ್ ಶೆಟ್ಟಿ ಮಾತನಾಡಿ “ಯಶಸ್ವೀ ಕಲಾವೃಂದದ ಸಂಕಲ್ಪದಲ್ಲಿ ಯಶಸ್ಸು ಇದೆ. ಸಂಸ್ಥೆಯನ್ನು ಬೆಳೆಸುವ ಕಾರ್ಯ ಬಹಳ ಕಷ್ಟಕರ. ಸಂಸ್ಥೆಯು ರಾಜ್ಯ ರಾಜಧಾನಿಗೂ ಹೂವಿನಕೋಲು ಕೊಂಡು ಹೋಗಿ ಯಶಸ್ಸು ಕಂಡುಕೊಂಡಿದೆ” ಎಂದರು. ಡಾ. ಕೆ. ಸಿ. ಬಲ್ಲಾಳ್ ಬೆಂಗಳೂರು ಮಾತನಾಡಿ “ಹುಟ್ಟೂರ ಅಭಿನಂದನೆ ಸಲ್ಲಿಸಿದ ಸಾಧಕ ಸಂಸ್ಥೆಗೆ ಚಿರಋಣಿ” ಎಂದರು.
ಉಡುಪಿ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ “ಸಂಘಟನೆಯ ಸಂಕಷ್ಟ ಅರಿತವನು ನಾನು. ಸಂಘಟನೆಗೆ ಪ್ರಾಮಾಣಿಕ ಕಾರ್ಯಕರ್ತ ಅತೀ ಅವಶ್ಯ. ಮೊಬೈಲ್ ಪ್ರೇಕ್ಷಕರು ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದಾರೆ. ಈ ಕಾಲಘಟ್ಟದಲ್ಲಿ ಸಂಘಟನೆ ಅತೀ ಕಷ್ಟ” ಎಂದರು.
ಶ್ವೇತಯಾನ ಸ್ಮರಣೆ ಸಂಚಿಕೆ ಮುಖಪುಟದ ಅನಾವರಣ ಮಾಡಿದ ಸಾಹಿತಿ ಸುಧಾ ಆಡುಕುಳ ಮಾತನಾಡಿ “ಹಲವು ಬಣ್ಣಗಳನ್ನು ತನ್ನೊಳಗೆ ಇರಿಸಿಕೊಂಡ ಶ್ವೇತವರ್ಣದ ಪುಸ್ತಕ ಉತ್ತಮವಾಗಿ ಮೂಡಿ ಬರಲಿ” ಎಂದು ಹಾರೈಸಿ ಆಶಯ ನುಡಿಗಳನ್ನಾಡಿದರು.
ಮಲ್ಯಾಡಿ ಶಿವರಾಮ ಶೆಟ್ಟಿ ಶುಭ ನುಡಿದರು. ಕಾರ್ಯಾಧ್ಯಕ್ಷ ಸುಜಯ್ ಶೆಟ್ಟಿ ಸ್ವಾಗತಿಸಿ, ಗುಲಾಬಿ ಪ್ರಾರ್ಥಿಸಿ, ರೇಖಾ ಕುಲಾಲ್ ನಿರೂಪಿಸಿ, ಗೋಪಾಲ್ ಪೂಜಾರಿ ಕೊಮೆ ವಂದಿಸಿದರು. ಶ್ವೇತಯಾನ ‘ಮಧ್ಯಮಾವತಿ’ ರಂಗದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಗಾನ ವೈಭವ, ಮಾನಸಿ ಸುಧೀರ್ ಬಳಗದ ನೃತ್ಯೋಪಾಸನೆ, ಅತಿಥಿ ಕಲಾವಿದರ ಕೂಡುವಿಕೆಯಲ್ಲಿ 150 ವೇಷಧಾರಿಗಳನ್ನೊಳಗೊಂಡ ಯಕ್ಷಗಾನ ಚಕ್ರವ್ಯೂಹ ಪ್ರಸ್ತುತಿಗೊಂಡು ಕಾರ್ಯಕ್ರಮ ಸಂಪನ್ನಗೊಂಡಿತು.