ತೆಕ್ಕಟ್ಟೆ: ಯಶಸ್ವಿ ಕಲಾವೃಂದದ ‘ಸಿನ್ಸ್ 1999 ಶ್ವೇತಯಾನ-44’ರ ಕಾರ್ಯಕ್ರಮದ ಅಂಗವಾಗಿ ಧಮನಿ ಟ್ರಸ್ಟ್ ನೇತೃತ್ವದಲ್ಲಿನ 25 ದಿನಗಳ ಮಕ್ಕಳ ನಾಟಕ ಕಾರ್ಯಗಾರದ ಸಮಾರೋಪ ಸಮಾರಂಭವು ದಿನಾಂಕ 17-07-2024 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಸಾಹಿತಿ ಸುಧಾ ಆಡುಕಳ ಮಾತನಾಡಿ “ಮಕ್ಕಳ ಕಣ್ಣಿಗೆ ಎಲ್ಲಾ ವಿಧದ ಕಲೆಯನ್ನು ಆಸ್ವಾದಿಸುವಂತಹ ದೃಶ್ಯಗಳನ್ನು ಕಟ್ಟಿಕೊಡದೇ ಹೋದರೆ ಮೊಬೈಲಿನಿಂದ ಹೊರಬರುವುದಕ್ಕೆ ಸಾಧ್ಯ ಆಗುವುದಿಲ್ಲ. ಪರಿಸರವನ್ನು ಆರ್ಟ್ ಮೂಲಕ ಸುಂದರಗೊಳಿಸುವ, ಒಂದಷ್ಟು ಮನಸ್ಸುಗಳನ್ನು ಕಲೆಯ ಮೂಲಕ ಮೃದುಗೊಳಿಸುವ ಹಾಗೂ ಭಾಷೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಕಾರ್ಯಗಳು ಬಹಳ ಮುಖ್ಯವಾಗುತ್ತದೆ. ಮಕ್ಕಳು ಕಲೆಯಿಂದ ಸಮಾಜವನ್ನು ಬೆಳಗಿಸುವ ಕಾರ್ಯ ಆಗಲೇಬೇಕಿದೆ. ಭುವಿಯಲ್ಲಿ ನಾವೆಲ್ಲ ನಾಟಕ ಮಾಡುವಂತಹ ಶಾಪಗ್ರಸ್ತರಾಗಿದ್ದೇವೆ. ಯಾಕೆಂದರೆ ಮಕ್ಕಳನ್ನು ರಂಗ ಕ್ರಿಯೆಯಲ್ಲಿ ತೊಡಗಿಸುವ ಕೆಲಸ ಕ್ಲಿಷ್ಟಕರವಾದದ್ದು. ಶಾಪವು ವರವಾಗಬೇಕಾದರೆ ಸಮುದಾಯದವರು ಇಂತಹ ಕಾರ್ಯದಲ್ಲಿ ನೆರವು ನೀಡುವುದರ ಮೂಲಕ ಕೈಗೂಡಿಸಬೇಕಾಗುತ್ತದೆ. ರಂಗಭೂಮಿಯನ್ನು ಬಲಗೊಳಿಸಲು ಆರ್ಥಿಕ ಭದ್ರತೆ ಬೇಕಾಗುತ್ತದೆ. ಆ ನಿಟ್ಟಿನಲ್ಲಿ ಕಲಾಸಕ್ತರು ಮನಮಾಡಬೇಕು.” ಎಂದರು.
‘ಸಿನ್ಸ್ 1999 ಶ್ವೇತಯಾನ’ದ ಕಾರ್ಯಾಧ್ಯಕ್ಷರಾದ ಸುಜಯ್ ಕುಮಾರ್ ಶೆಟ್ಟಿ, ಕೊಮೆ ಗೋಪಾಲ ಪೂಜಾರಿ, ಶಿವರಾಮ ಶೆಟ್ಟಿ ಮಲ್ಯಾಡಿ, ರೊ. ಗಣಪತಿ ಟಿ. ಶ್ರೀಯಾನ್, ಅಭಿಲಾಷ ಎಸ್., ವಿಜಿತ್, ಶ್ರೀಶ ತೆಕ್ಕಟ್ಟೆ, ರಂಜಿತ್ ಶೆಟ್ಟಿ ಕುಕ್ಕುಡೆ ಉಪಸ್ಥಿತರಿದ್ದರು. ಸಚಿನ್ ಅಂಕೋಲ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ರಂಜಿತ್ ಶೆಟ್ಟಿ ಕುಕ್ಕುಡೆ ನಿರ್ದೇಶನದಲ್ಲಿ ವೈದೇಹಿಯವರ ನಾಟಕ ‘ಸೂರ್ಯ ಬಂದ’ ರಂಗ ಪ್ರಸ್ತುತಿಗೊಂಡಿತು.