ಬಂಟ್ವಾಳ : ಬಿ .ವಿ. ಕಾರಂತ ರಂಗಭೂಮಿಕಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ಬಿ. ವಿ. ಕಾರಂತ ನೆನಪಿನ ‘ಮಂಚಿ ನಾಟಕೋತ್ಸವ’ದ ಸಮಾರೋಪ ಸಮಾರಂಭ ದಿನಾಂಕ 19-05-2024ರ ಭಾನುವಾರದಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ ನ್ಯಾಯವಾದಿ, ನೋಟರಿ ಹಾಗೂ ವಕೀಲರ ಸಂಘ ಬಂಟ್ವಾಳದ ಮಾಜಿ ಅಧ್ಯಕ್ಷರಾದ ಎಂ. ಅಶ್ವನಿ ಕುಮಾರ್ ರೈ ಮಾತನಾಡಿ “ಚರಿತ್ರೆಯ ಕುರಿತ ಅರಿವು ನಮಗಿರಬೇಕು. ಬಿ. ವಿ. ಕಾರಂತರ ನೆನಪನ್ನು ಹುಟ್ಟೂರಿನವರು ನೆನಪಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ನಾಟಕೋತ್ಸವ ಏರ್ಪಡಿಸುವ ಮೂಲಕ ಅವರ ಕೆಲಸ ಕಾರ್ಯಗಳನ್ನು ನೆನಪಿಸುವ ಕಾರ್ಯ ನಡೆಯುತ್ತಿದೆ.” ಎಂದರು. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಶಿವಮೊಗ್ಗದ ಕಮಲಾ ನೆಹರೂ ಸ್ಮಾರಕ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಗಭೂಷಣ ಎಚ್. ಎಸ್. ಮಾತನಾಡಿ “ಮಕ್ಕಳನ್ನು ರಂಗಚಟುವಟಿಕೆಗಳಿಂದ ವಿಮುಖರನ್ನಾಗಿಸಿ, ಯಾಂತ್ರಿಕವಾಗಿ ಇಂದು ಟ್ಯೂಷನ್‌ಗಳಿಗೆ ಕಳುಹಿಸಲಾಗುತ್ತಿದೆ. ಆದರೆ ನಾಟಕಾಭ್ಯಾಸ ಮಾಡಿದ ಮಕ್ಕಳು ಏಕಾಗ್ರತೆಯನ್ನು ಸಾಧಿಸುತ್ತಾರೆ ಹಾಗೂ ಕುಶಾಗ್ರಮತಿಗಳಾಗುತ್ತಾರೆ. ಬಿ. ವಿ. ಕಾರಂತರು ವಿಶ್ವಕ್ಕೆ ಅಚ್ಚರಿಯನ್ನುಂಟುಮಾಡಿದ ಕಲಾವಿದರು. ರಂಗ ಸಂಗೀತದಲ್ಲಿ ಕಾರಂತರು ಕ್ರಾಂತಿ ಮಾಡಿದ್ದು, ಸಿದ್ಧ ಸೂತ್ರಗಳಿಂದ ಭಿನ್ನವಾಗಿ ತನ್ನದೇ ಆದ ಶೈಲಿಯನ್ನು ರೂಪಿಸಿದರು.” ಎಂದರು.
ಟ್ರಸ್ಟ್ ಕಾರ್ಯಚಟುವಟಿಕೆಗಳ ಹಾಗೂ ನಾಟಕೋತ್ಸವ ಕುರಿತು ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಟ್ರಸ್ಟ್ ಉಪಾಧ್ಯಕ್ಷ ಕೆ. ಗಣೇಶ ಐತಾಳ್ ಸ್ವಾಗತಿಸಿ, ಜತೆ ಕಾರ್ಯದರ್ಶಿಗಳಾದ ರಮಾನಂದ ನೂಜಿಪ್ಪಾಡಿ ಹಾಗೂ ಮೇರಾವು ಉಮಾನಾಥ ರೈ ಕಾರ್ಯಕ್ರಮ ನಿರ್ವಹಿಸಿ, ಕಾರ್ಯದರ್ಶಿ ಕೆ. ಬಾಲ ಕೃಷ್ಣ ಶೆಟ್ಟಿ ವಂದಿಸಿದರು.