ಬಸ್ರೂರು: ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಸಂಯೋಜನೆಯೊಂದಿಗೆ ‘ಸಿನ್ಸ್ 1999 ಶ್ವೇತಯಾನ-62’ ಕಾರ್ಯಕ್ರಮದಡಿಯಲ್ಲಿ ಆಯೋಜನೆಗೊಂಡ ‘ಸ್ಕೂಲ್ಸ್ ಇನ್ ಒಡ್ಡೋಲಗ’ ಕಾರ್ಯಕ್ರಮದ ಸಮಾರೋಪ ಸಮಾರಂಭ 18 ಸೆಪ್ಟೆಂಬರ್ 2024ರಂದು ಸರಕಾರಿ ಪ್ರೌಢ ಶಾಲೆ ಬಸ್ರೂರಿನಲ್ಲಿ ನಡೆಯಿತು.
ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಕಾಂತ್ ಮಾತನಾಡಿ “ಯಕ್ಷಗಾನ ಕಲೆಯನ್ನು ಉಳಿಸಬೇಕು, ಬೆಳೆಸಬೇಕು ಎನ್ನುವ ದೃಷ್ಟಿಯಿಂದ ಮಕ್ಕಳಿಂದ ಮಕ್ಕಳಿಗಾಗಿ ಯಕ್ಷಗಾನ ಒಡ್ಡೋಲಗ ಕಾರ್ಯಕ್ರಮ ಹೆಚ್ಚು ಪ್ರಸ್ತುತ. ಕಲೆಯಲ್ಲಿ ಪರಂಪರೆಯ ನಡೆಗಳು ಉಳಿಯುವುದಕ್ಕೆ ಸರ್ವರೂ ಶ್ರಮಿಸಬೇಕು. ಪೂರ್ವರಂಗವು ಯಕ್ಷಗಾನದ ಕಥೆಗಳ ಆಸ್ವಾದನೆಗೆ ಒಳ್ಳೆಯ ವಾತಾವರಣ ಕಲ್ಪಿಸಿಕೊಡುತ್ತದೆ. ಆದರೆ ಇತ್ತೀಚೆಗೆ ರಂಗದಲ್ಲಿ ಚೌಕಿ ಪೂಜೆಯ ಬಳಿಕ ಗಣಪತಿ ಸ್ತುತಿ ಮಾಡಿ ನೇರವಾಗಿ ಪ್ರಸಂಗ ಪ್ರದರ್ಶನ ಕಾಣುತ್ತೇವೆ. ಆದರೆ ಪ್ರಸಂಗದ ಪ್ರಸ್ತುತಿಗೆ ಮೊದಲು ಪೂರ್ವರಂಗದ ಹೂರಣವಿದ್ದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಇದನ್ನು ಅಲ್ಲಲ್ಲಿ ಶಾಲೆಗಳಲ್ಲಿ ನೆನಪಿಸುವುದಕ್ಕೆ ಹೊರಟ ಸಂಸ್ಥೆಗೆ ಯಶಸ್ಸಾಗಲಿ.” ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಬಸ್ರೂರು ಮಾತನಾಡಿ “ತೆಕ್ಕಟ್ಟೆ ಭಾಗದಲ್ಲಿ ಮನೆ ಮಾತಾದ ಯಶಸ್ವೀ ಕಲಾವೃಂದ ತಪಸ್ಸಿನಂತೆ ಹಲವಾರು ವರ್ಷಗಳಿಂದ ಬಹಳಷ್ಟು ಕಲಾವಿದರನ್ನು ಪ್ರಪಂಚಕ್ಕೆ ಕೊಟ್ಟಿದೆ. ನಿರಂತರ ಕಲೆಯನ್ನು ಕಲಾಸಕ್ತರಿಗೆ ಉಣಿಸುವುದರಲ್ಲೆ 25 ವರ್ಷ ಕಳೆದಿದೆ. ಮಕ್ಕಳಿಗೆ ಓದುವಿನ ಜೊತೆಗೆ ಕಲೆಯನ್ನು ಕಲಿಸಿ. ಯಕ್ಷಗಾನದಲ್ಲಿ ಎಲ್ಲಾ ವಿಭಾಗವನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ.” ಎಂದರು.
ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಕಾರ್ಯಕ್ರಮದ ಅಧ್ಯಕ್ಷರಾದ ಮುಖ್ಯ ಶಿಕ್ಷಕಿ ರೇಖಾ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಪ್ಯೂಸ್ ಡಿಸೋಜ ಕಾರ್ಯಕ್ರಮ ನಿರೂಪಿಸದರು. ಸಭಾಕಾರ್ಯಕ್ರಮದ ಬಳಿಕ ಯಶಸ್ವೀ ಕಲಾವೃಂದದ ಕಲಾವಿದರಿಂದ ‘ಒಡ್ಡೋಲಗ ಇನ್ ಸ್ಕೂಲ್ಸ್’ ಯಕ್ಷಗಾನದ ಕೆಲವು ಒಡ್ಡೋಲಗಗಳ ಪ್ರದರ್ಶನ ರಂಗದಲ್ಲಿ ರಂಗೇರಿತು.