ತೆಕ್ಕಟ್ಟೆ: ‘ಶ್ವೇತಸಂಜೆ-26’, ಯಶಸ್ವೀ ಕಲಾವೃಂದ ರಿ. ಕೊಮೆ-ತೆಕ್ಕಟ್ಟೆ, ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ದಿಮ್ಸಾಲ್ ಫಿಲ್ಮ್ಸ್ ಆಯೋಜಿಸಿಕೊಂಡಿರುವ ‘ರಜಾರಂಗು-24’ ಶಿಬಿರದ ಮುಕ್ತಾಯದಲ್ಲಿ ನಡೆದ “ತ್ರಿವಳಿ ನಾಟಕೋತ್ಸವ”ದ ಸಮಾರೋಪ ಸಮಾರಂಭವು ದಿನಾಂಕ 08-05-2024 ರಂದು ತೆಕ್ಕಟ್ಟೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ರಂಗ ನಿರ್ದೇಶಕರಾದ ಶ್ರೀಷ ತೆಕ್ಕಟ್ಟೆ ಹಾಗೂ ಅಶೋಕ್ ಮೈಸೂರು ಇವರನ್ನು ಅಭಿವಂದಿಸಿ ಮಾತನಾಡಿ “ಮಕ್ಕಳ ಮನಸ್ಸುಗಳು ಕಾಲಿ ಪುಟದ ಹಾಗೆ. ನಿರ್ಮಲ ಮನಸ್ಸುಗಳಲ್ಲಿ ಸಫಲತೆಯ ಬೀಜ ಬಿತ್ತಬೇಕು. ಅದು ಮೊಳಕೆ ಒಡೆದು ಭವಿಷ್ಯದಲ್ಲಿ ಹೆಮ್ಮರವಾಗಿ ಸಮಾಜವನ್ನು ಬೆಳಗಬೇಕಾದರೆ ಇಂತಹ ಶಿಬಿರದಿಂದ ಸಾಧ್ಯ. ರಜಾರಂಗು ಶಿಬಿರ ಹಲವು ವರ್ಷಗಳಿಂದ ಪರಿಸರದ ಮಧ್ಯದಲ್ಲಿ ನೆರವೇರಿಸಿಕೊಂಡು ಬಂದಿದೆ. ನೀನಾಸಂ, ಸಾಣೆಹಳ್ಳಿ, ರಂಗಾಯಣದಲ್ಲಿನ ನುರಿತ ರಂಗ ನಿರ್ದೇಶಕರಿಂದ ಈ ಶಿಬಿರ ಸಂಪನ್ನಗೊಂಡಿರುವುದು ಸಣ್ಣ ವಿಷಯವಲ್ಲ. ಇಂತಹ ದೊಡ್ಡ ಮಟ್ಟದ ಶಿಬಿರವನ್ನು ಏರ್ಪಡಿಸಿಕೊಂಡು ಸುಧೀರ್ಘ ಕಾಲ ನಡೆಸುವ ಸಂಸ್ಥೆಯನ್ನು ಶ್ಲಾಘಿಸಲೇ ಬೇಕು. ಸಮಾಜಕ್ಕೆ ದೊಡ್ಡ ಕೊಡುಗೆಯಾದ ಯಶಸ್ವೀ ಕಲಾವೃಂದ ಇನ್ನಷ್ಟು ಎತ್ತರಕ್ಕೆ ಏರಲಿ.” ಎಂದು ಹಾರೈಸಿದರು.
ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ. ಕುಂದರ್ ಇತ್ತೀಚೆಗೆ ಕರ್ನಾಟಕ ಯಕ್ಷಗಾನ ಅಕಾಡಮಿ ಅಧ್ಯಕ್ಷರಾಗಿ ಆಯ್ಕೆಯಾದ ತಲ್ಲೂರು ಶಿವರಾಮ ಶೆಟ್ಟಿಯವರನ್ನು ಅಭಿನಂದಿಸಿ ಮಾತನಾಡಿ “ರಂಗ ಚಟುವಟಿಕೆಯಿಂದ ಕರಾವಳಿ ಭಾಗದಲ್ಲಿ ಜೀವಂತವಾಗಿರುವ ಸಂಸ್ಥೆ ಯಶಸ್ವಿ ಕಲಾವೃಂದ. ಹೊಸ ಹೊಸ ರಂಗ ಸಂಯೋಜನೆಯೊಂದಿಗೆ ರಂಗವನ್ನು ಹಸಿರಾಗಿಸಿಕೊಂಡು, ತನ್ನದೇ ಛಾಪಿನೊಂದಿಗೆ ಸಮಾಜಮುಖಿಯಾಗಿ ಕಾಣಿಸಿಕೊಂಡು, ಒಂದಿಷ್ಟು ಮಕ್ಕಳನ್ನು ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆಯಾಗಿಸಿದ ಇತ್ತೀಚಿನ ಮುನ್ನಡೆಯ ಸಂಸ್ಥೆ ಯಶಸ್ವೀ ಕಲಾವೃಂದ.” ಎಂದರು.
ಗೆಳೆಯರ ಬಳಗ ಕಾರ್ಕಡದ ತಾರಾನಾಥ ಹೊಳ್ಳ, ಸದಾಶಿವ ರಾವ್ ಅರೆಹೊಳೆ, ನರೇಂದ್ರ ಕುಮಾರ್ ಕೋಟ, ಸಚಿನ್ ಅಂಕೋಲ, ಕಾರ್ಯಾಧ್ಯಕ್ಷರಾದ ಗೋಪಾಲ ಪೂಜಾರಿ, ಸಂಸ್ಥೆಯ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬಿ. ವಿ. ಕಾರಂತ್ ರಚನೆಯ ನಾಟಕ “ಹೆಡ್ಡಾಯಣ” ಅಶೋಕ್ ಶೆಟ್ಟಿ ಮೈಸೂರು ಇವರ ನಿರ್ದೇಶನದಲ್ಲಿ ಅದ್ಭುತವಾಗಿ ರಂಗ ಪ್ರಸ್ತುತಿಗೊಂಡಿತು.

