ಸುಳ್ಯ : ಸುಳ್ಯದ ರಂಗ ಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ನಡೆದ ‘ರಂಗ ಸಂಭ್ರಮ-2024’ದ ಸಮಾರೋಪದ ಸಮಾರಂಭವು ದಿನಾಂಕ 04-02-2024 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಎಸ್. ಅಂಗಾರ “ನಿರಂತರ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ರಂಗ ಮನೆಯು ಸದಭಿರುಚಿಯ ಉತ್ತಮ ಪ್ರೇಕ್ಷಕ ಬಳಗವನ್ನು ಸೃಷ್ಟಿಸಿದೆ. ಇದರ ಸ್ಥಾಪಕ ಜೀವನ್ ರಾಂ ಸುಳ್ಯ ಅವರು ಇದಕ್ಕಾಗಿ ಅಭಿನಂದನಾರ್ಹರು. ಅವರೆಂದೂ ಪ್ರಶಸ್ತಿಗಾಗಿ ಶಿಫಾರಸ್ಸು ಕೇಳಲು ಬಂದವರಲ್ಲ. ಸುಳ್ಯದಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಒಂದು ಕಲಾ ಗ್ರಾಮವನ್ನೇ ನಿರ್ಮಾಣ ಮಾಡಬೇಕೆನ್ನುವ ಯೋಜನೆ ನಮ್ಮಲ್ಲಿದೆ.” ಎಂದು ಹೇಳಿದರು.
ಸಮಾರೋಪ ಭಾಷಣಗೈದ ಉಜಿರೆ ಎಸ್. ಡಿ. ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ “ಸೋಶಿಯಲ್ ಮೀಡಿಯಾದ ಅತಿ ಬಳಕೆ ಮಕ್ಕಳ ಶೈಕ್ಷಣಿಕ ಬದುಕಿಗೆ ಮಾರಕವಾಗಿದೆ. ಅದರ ಬದಲು ನಾಟಕ, ಯಕ್ಷಗಾನ, ಸಂಗೀತ, ನೃತ್ಯ ಜಾನಪದ ಮುಂತಾದವುಗಳು ನಮ್ಮ ಲೋಕಾನುಭವವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇಲ್ಲಿನ ನೃತ್ಯ ಗುರು ವಿದ್ವಾನ್ ಚಂದ್ರಶೇಖರ ನಾವುಡ ಮಾತನಾಡಿ “ತನ್ನ ವಾಸದ ಮನೆಯನ್ನೇ ಸಾಂಸ್ಕೃತಿಕ ತಾಣವನ್ನಾಗಿಸಿದ ಉದಾಹರಣೆ ಬೇರೆಲ್ಲೂ ಸಿಗಲಾರದು. ಇಲ್ಲಿನ ಸಮಯಪ್ರಜ್ಞೆ, ಅಚ್ಚುಕಟ್ಟುತನ ಹಾಗೂ ಕಾರ್ಯಕ್ರಮದ ಗುಣಮಟ್ಟ ಎಲ್ಲವೂ ಇತರ ಸಂಘಟಕರಿಗೆ ಮಾದರಿಯಾಗಿದೆ.” ಎಂದರು.
ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಮತ್ತು ಗಾಯಕ ರಾಮಕೃಷ್ಣ ಕಾಟುಕುಕ್ಕೆ ಅವರನ್ನು ಸನ್ಮಾನಿಸಲಾಯಿತು. ರಂಗ ಮನೆಯ ಅಧ್ಯಕ್ಷ ಡಾ. ಜೀವನರಾಮ ಸುಳ್ಯ ಸ್ವಾಗತಿಸಿ, ರವೀಶ್ ಪಡ್ಡಂಬೈಲು ವಂದಿಸಿದರು. ಅಚ್ಚುತ ಅಟ್ಟೂರು ಕಾರ್ಯಕ್ರಮ ನಿರ್ವಹಿಸಿದರು.
ರಂಗಸಂಭ್ರಮದ ನಾಲ್ಕು ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಂಗಮನೆಯ ಸಭಾಂಗಣ ಪ್ರೇಕ್ಷಕರಿಂದ ತುಂಬಿ ತುಳುಕಿತು.
ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ‘ನಾಯಿಮರಿ’ ನಾಟಕ, ಮೈಸೂರು ನಟನ ತಂಡದ ‘ಕಣಿವೆಯ ಹಾಡು’ ನಾಟಕ, ರಾಮಕೃಷ್ಣ ಕಾಟುಕುಕ್ಕೆಯವರಿಂದ 999 ನೇ ‘ದಾಸ ಸಂಕೀರ್ತನೆ’, ಕೆನರಾ ಕಲ್ಬರಲ್ ಅಕಾಡೆಮಿ ಮಂಗಳೂರು ಅಭಿನಯದ ‘ಶೂರ್ಪಣಖಾಯನ’ ನಾಟಕ, ಆಳ್ವಾಸ್ ನ ‘ಏಕಾದಶಾನನ’ ನಾಟಕ, ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇವರಿಂದ ‘ದಶಾವತಾರ’ ನೃತ್ಯ ರೂಪಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಬಹು ಮೆಚ್ಚುಗೆಗೆ ಪಾತ್ರವಾದವು.