ಮಂಗಳೂರು : ರಕ್ಷಿತ್ ಶೆಟ್ಟಿ ಪಡ್ರೆ ಶಿಷ್ಯ ವೃಂದದ ಯಕ್ಷ ಸಿದ್ದಿಸಂಭ್ರಮ ‘ಸಿದ್ಧಿ ದಶಯಾನ’ ಕಾರ್ಯಕ್ರಮದ ಸಮಾರೋಪ ಸಮಾರಂಭವು 11 ಆಗಸ್ಟ್ 2024ರಂದು ಉರ್ವಸ್ಟೋರ್ ಇಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಮಾತನಾಡಿ “ಯಕ್ಷಗಾನ ಕಲೆಯು ಜಾಗತಿಕ ಮಟ್ಟದಲ್ಲಿ ವಿಸ್ತರಿಸುತ್ತಿರುವ ಶ್ರೇಷ್ಠ ಕಲೆಯಾಗಿದ್ದು ಇದನ್ನು ರಾಜ್ಯ ಕಲೆ ಎಂದು ಘೋಷಣೆ ಮಾಡಬೇಕು. ರಾಜ್ಯದ 22 ಜಿಲ್ಲೆಗಳಲ್ಲಿ ವಿವಿಧ ಪ್ರಕಾರಗಳಲ್ಲಿ ಪ್ರಮುಖವಾಗಿರುವ ಯಕ್ಷಗಾನ ರಾಜ್ಯದ ಕಲೆಯಾಗಬೇಕು. ಯಕ್ಷಗಾನ ಕ್ಷೇತ್ರದಲ್ಲಿ ಬದಲಾವಣೆ ಬಂದರೂ ಕಲೆಗೆ ಕೊನೆ ಇಲ್ಲ. ಪ್ರಸ್ತುತ ಶಿಕ್ಷಣದ ಜತೆ ಯಕ್ಷಗಾನ ಬೆಸೆದುಕೊಂಡಿರುವುದು ಯಕ್ಷಗಾನದ ಉಳಿವು ಹಾಗೂ ಬೆಳವಣಿಗೆಗೆ ಪೂರಕವಾಗಿದೆ.” ಎಂದರು.
ಕಟೀಲು ದೇವಸ್ಥಾನದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ “ಯಕ್ಷಗಾನದಿಂದ ಮಕ್ಕಳಿಗೆ ಪೌರಾಣಿಕ ಜ್ಞಾನ ಸಿಗುತ್ತದೆ. ಒಳಿತು ಕೆಡುಕುಗಳು ಹಾಗೂ ನ್ಯಾಯ ಅನ್ಯಾಯದ ಬಗ್ಗೆ ಅರಿವು ಮೂಡುತ್ತದೆ. ಇದು ಉತ್ತಮ ಜೀವನ ಶೈಲಿಯ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕವಾಗಲಿದೆ.” ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ “ಯಕ್ಷಗಾನವನ್ನು ಉಳಿಸಿ, ಬೆಳೆಸುವಲ್ಲಿ ಯಕ್ಷ ಶಿಕ್ಷಣ ಮಹತ್ತರ ಪಾತ್ರ ವಹಿಸಿದೆ. ಉತ್ತಮ ಕಲಾವಿದರನ್ನು ರೂಪಿಸುವ ರಕ್ಷಿತ್ ಶೆಟ್ಟಿ ಅವರ ಪ್ರಯತ್ನ ಅಭಿನಂದನೀಯ.” ಎಂದರು.
ರಾಮನಗರದ ಪೊಲೀಸ್ ಉಪ ಅಧೀಕ್ಷಕ ದಿನಕರ ಶೆಟ್ಟಿ ಮಾತನಾಡಿ “ಯಕ್ಷಗಾನ ಸಮೃದ್ಧ ಕಲೆಯಾಗಿದ್ದು, ಜಗದಗಲ ಪಸರಿಸಿದೆ. ರಕ್ಷಿತ್ ಉನ್ನತ ಶಿಕ್ಷಣ ಪಡೆದರೂ ಯಕ್ಷಗಾನದಲ್ಲಿ ತೊಡಗಿಸಿರುವುದು ಸಂತಸವಾಗಿದೆ.” ಎಂದರು.
ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಪಡ್ರೆ ರಚನೆಯ ‘ಯಕ್ಷ ಶಿಕ್ಷಣ’ ಪುಸ್ತಕ ಲೋಕಾರ್ಪಣೆಗೊಂಡಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ‘ಯಕ್ಷಸಿದ್ಧಿ ಪ್ರಶಸ್ತಿ’-ಸಮ್ಮಾನ ಹಾಗೂ 300ಕ್ಕೂ ಮಿಕ್ಕಿ ಯಕ್ಷ ವಿದ್ಯಾರ್ಥಿಗಳಿಂದ ವಿವಿಧ ಯಕ್ಷಗಾನ ಪ್ರದರ್ಶನ ನಡೆಯಿತು. ಪ್ರಕಾಶ್ ಮೂಡಿತ್ತಾಯ ಸ್ವಾಗತಿಸಿ, ರವಿ ಪ್ರಸಾದ್ ಶೆಟ್ಟಿ ನಿರೂಪಿಸಿ, ಉಮೇಶ್ ಆಚಾರ್ಯ ವಂದಿಸಿದರು.