ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪರ್ಯಾಯ ಪುತ್ತಿಗೆ ಮಠದ ಸಹಯೋಗದಲ್ಲಿ ಆಯೋಜಿಸಿದ್ದ 2 ದಿನಗಳ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ದಿನಾಂಕ 01 ಮೇ 2025ರಂದು ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಮಾತನಾಡಿ “ರಾಜ್ಯದಲ್ಲಿ ಕನ್ನಡ ಶಾಲೆ ಹಾಗೂ ಕನ್ನಡದ ಅಸ್ಮಿತೆ ಉಳಿಸಲು ಕನ್ನಡ ಸಾಹಿತ್ಯ ಪರಿಷತ್ ಸರಕಾರದ ಮುಂದೆ ಹಕ್ಕೊತ್ತಾಯ ಮಂಡಿಸಬೇಕು. ಗ್ರಾಮಕ್ಕೆ 2-3 ಶಾಲೆಗಳನ್ನು ನೀಡುವುದಕ್ಕಿಂತ 10 ಗ್ರಾಮಗಳನ್ನು ಒಟ್ಟುಮಾಡಿ ಒಂದು ಮಾದರಿ ಕನ್ನಡ ಶಾಲೆ ನಿರ್ಮಿಸಿ ಇಂಗ್ಲಿಷ್ ಪ್ರಧಾನವಾಗಿರಿಸಿಕೊಂಡು ಶಿಕ್ಷಣ ನೀಡಬೇಕು” ಎಂದರು.
ಸಮ್ಮೇಳನದ ಅಧ್ಯಕ್ಷರಾದ ಡಾ. ಪಾದೇಕಲ್ಲು ವಿಷ್ಣುಭಟ್ ಮಾತನಾಡಿ “ಸತತ ಅಭ್ಯಾಸ ಪ್ರಯತ್ನ ಎಲ್ಲರಿಗೂ ಬೇಕಿದೆ. ಸಂದೇಹ ಬಂದರೆ ಅದಕ್ಕೆ ಪರಿಹಾರ ನೀಡುವವರು ಇಂದು ಇಲ್ಲವಾಗುತ್ತಿದ್ದಾರೆ” ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಪಾದೇಕಲ್ಲು ವಿಷ್ಣು ಭಟ್ ದಂಪತಿಯನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಸಮ್ಮಾನಿಸಲಾಯಿತು. ಕ. ಸಾ. ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮಂಗಳೂರು ವಿ. ವಿ. ಕುಲಪತಿ ಡಾ. ಪಿ. ಎಲ್. ಧರ್ಮ, ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಇದರ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ದ. ಕ. ಜಿಲ್ಲಾ ಕ. ಸಾ. ಪ. ಇದರ ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಪುತ್ತಿಗೆ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು.