ಕೋಟ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ಸುವರ್ಣ ಪರ್ವದ ಸರಣಿ ಕಾರ್ಯಕ್ರಮವಾಗಿ ಕೋಟ ಮೂರ್ಕೈಯ ಹಂದೆ ಮಹಾ ವಿಷ್ಣು ವಿನಾಯಕ ದೇವಸ್ಥಾನದಲ್ಲಿ ಆಯೋಜಿಸಿದ ಎರಡು ದಿವಸಗಳ ಆಹ್ವಾನಿತ ತಂಡಗಳ ‘ಯಕ್ಷ ತ್ರಿವಳಿ’ ಯಕ್ಷೋತ್ಸವದ ಸಮಾರೋಪ ಸಮಾರಂಭ ದಿನಾಂಕ 18 ಏಪ್ರಿಲ್ 2025ರ ಶುಕ್ರವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಾಮಚಂದ್ರ ಐತಾಳ್ ಮಾತನಾಡಿ “ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಕೆಯಾಗುತ್ತದೆ, ಚಿನ್ನಕ್ಕೆ ಸಂಸ್ಕಾರ ಕೊಟ್ಟರೆ ಒಡವೆಯಾಗುತ್ತದೆ, ಸೆಗಣಿಗೆ ಸಂಸ್ಕಾರ ಕೊಟ್ಟರೆ ವಿಭೂತಿಯಾಗುತ್ತದೆ, ಮಕ್ಕಳಿಗೆ ಸಂಸ್ಕಾರ ಕೊಟ್ಟರೆ ಮಹಾದೇವನಾಗುತ್ತಾನೆ. ಮಕ್ಕಳಿಗೆ ಬದುಕಿನ ಮೌಲ್ಯವನ್ನು ಕೊಡ ಬಲ್ಲ ಶಕ್ತಿ ಯಕ್ಷಗಾನಕ್ಕಿದೆ. ಮಗುವನ್ನು ತಾಯಿಯಂತೆ ಪೋಷಿಸಬಲ್ಲ ಶಕ್ತಿ ಯಕ್ಷಗಾನದ ನಿಜ ಸತ್ವವಾಗಿದೆ. ಸಾಲಿಗ್ರಾಮ ಮಕ್ಕಳ ಮೇಳದ ಹಂದೆ ಉಡುಪರು ಕಲೆಯ ಮೂಲಕ ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಹೇಳಿದರು.
ಸಮಾರಂಭದಲ್ಲಿ ಮಕ್ಕಳ ಕ್ಷೇತ್ರದ ಅನನ್ಯ ಸಾಧಕ ಯಕ್ಷ ಗುರು ಶ್ರೀಧರ ಹೆಬ್ಬಾರ್ ಇವರಿಗೆ ‘ಸುವರ್ಣ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಯಕ್ಷ ವಿಮರ್ಶಕ ಬೇಳೂರು ರಾಘವ ಶೆಟ್ಟಿ, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ, ಹಂದೆ ದೇವಳದ ಆನುವಂಶಿಕ ಮೊಕ್ತೇಸರರಾದ ಅಮರ ಹಂದೆ, ಯಕ್ಷ ಸಂಘಟಕ ಸುದರ್ಶನ ಉರಾಳ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಅಧ್ಯಕ್ಷರಾದ ಬಲರಾಮ ಕಲ್ಕೂರ, ಉಪಾಧ್ಯಕ್ಷರಾದ ಜನಾರ್ದನ ಹಂದೆ, ಟ್ರಸ್ಟಿಯಾದ ಶ್ರೀಕಾಂತ ಉಡುಪ ಉಪಸ್ಥಿತರಿದ್ದರು.
ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಸ್ವಾಗತಿಸಿ, ಉಪನ್ಯಾಸಕ ರಾಘವೇಂದ್ರ ತುಂಗ ಕೆ. ಕಾರ್ಯಕ್ರಮ ನಿರೂಪಿಸಿ, ಮಕ್ಕಳ ಮೇಳದ ಉಪಾಧ್ಯಕ್ಷ ಜನಾರ್ದನ ಹಂದೆ ವಂದಿಸಿದರು. ಸಭಾ ಕಾರ್ಯಕ್ರಮದ ಮೊದಲು ಯಕ್ಷ ಆರಾಧನಾ ಕಿದಿಯೂರು ಇವರಿಂದ ಕೆ.ಜೆ. ಗಣೇಶ್ ನಿರ್ದೇಶನದಲ್ಲಿ ಶಶಿಪ್ರಭಾ, ಬಳಿಕ ಮಯೂರ ಕಲಾ ಪ್ರತಿಷ್ಠಾನ ಮಂಗಳೂರು ತಂಡದಿಂದ ರಕ್ಷಿತ್ ಪಡ್ರೆ ಇವರ ನಿರ್ದೇಶನದಲ್ಲಿ ‘ಶರಣ ಸೇವಾ ರತ್ನ’ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.
Subscribe to Updates
Get the latest creative news from FooBar about art, design and business.
Previous Articleಮಂಗಳೂರಿನಲ್ಲಿ ವಿಶ್ವ ಪುಸ್ತಕ ದಿನಾಚರಣೆ | ಏಪ್ರಿಲ್ 23