ಮಂಗಳೂರು : ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಲಾದ 32ನೇ ವರ್ಷದ ‘ಯಕ್ಷೋತ್ಸವ’ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯ ಸಮಾರೋಪ ಸಮಾರಂಭವು ದಿನಾಂಕ 25-02-2024ರಂದು ಕಾಲೇಜಿನ ಆವರಣದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಯಕ್ಷಗಾನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದ ಕರ್ನಾಟಕ ಸರಕಾರದ ಮಾನವ ಹಕ್ಕುಗಳ ಆಯೋಗದ ಆಡಳಿತಾತ್ಮಕ ಸದಸ್ಯ ಶ್ಯಾಮ್ ಭಟ್ ಇವರು ಮಾತನಾಡುತ್ತಾ “ವಿದ್ಯಾವಂತ ಸಮಾಜ ಯಕ್ಷಗಾನ ಕ್ಷೇತ್ರದತ್ತ ಒಲವು ಹೊಂದಿರುವುದು ಉತ್ತಮ ವಿಚಾರ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಲೆ ಉಳಿಸಲು ಮುಂದಾಗಿರುವುದು ಅವುಗಳ ಶ್ರೀಮಂತಿಕೆಯನ್ನು ವಿವರಿಸುತ್ತಿದ್ದು. ವಿದ್ಯಾರ್ಥಿಗಳ ಕಲಾ ಜೀವನ ಯಶಸ್ವಿಯಾಗಲಿ. ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸ ಮುಂದುವರಿಸಲಾಗದವರು ಯಕ್ಷಗಾನ ಕ್ಷೇತ್ರವನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಇಂದು ಚಿತ್ರಣವೇ ಬದಲಾಗಿದ್ದು, ವಿದ್ಯಾವಂತರು ಯಕ್ಷಗಾನದಲ್ಲಿ ಹೆಚ್ಚು ಭಾಗವಹಿಸುತ್ತಿರುವುದು ಕಲೆಯ ಬೆಳವಣಿಗೆಗೆ ಪೂರಕ. ಮೂವತ್ತೆರಡು ವರ್ಷಗಳ ಹಿಂದೆಯೇ ಯಕ್ಷಗಾನ ಸ್ಪರ್ಧೆಯನ್ನು ಆರಂಭಿಸಿರುವುದು ಸಂಸ್ಥೆಗೆ ಹಿರಿಮೆ ತಂದಿದೆ. ಎಲ್ಲಾ ತಂಡಗಳು ಒಂದೇ ಪ್ರಸಂಗವನ್ನು ಪ್ರದರ್ಶಿಸಿರುವ ಕಾರಣ ತೀರ್ಪುಗಾರಿಕೆಗೆ ನೆರವಾಗಿದೆ. ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ಕಲಿಯುವುದು, ಕಲೆಯತ್ತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗಲು ಕಾರಣವಾಗುತ್ತದೆ. ಉದ್ಯೋಗದ ಬಗ್ಗೆ ಹೆಚ್ಚು ಚಿಂತಿಸದೆ ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವುದರಿಂದ ಗೌರವ, ಗುರುತಿಸುವಿಕೆಯ ಜೀವನ ನಡೆಸಲು ಸಾಧ್ಯ” ಎಂದರು.
ತೀರ್ಪುಗಾರರಾದ ಎಂ.ಕೆ. ಆಚಾರ್ಯ, ಅಂಬಾ ಪ್ರಸಾದ್, ಶ್ಯಾಮ್ ಭಟ್ ಅವರನ್ನು ಸಮ್ಮಾನಿಸಲಾಯಿತು. ಪ್ರಾಂಶುಪಾಲ ಡಾ. ತಾರಾನಾಥ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ದೇವರಾಜ ಟಿ., ಯಕ್ಷೋತ್ಸವ ಸಂಚಾಲಕ ಪುಷ್ಪರಾಜ್ ಕೆ. ಶುಭಹಾರೈಸಿದರು.
ಸಮಾರೋಪದಲ್ಲಿ ಪ್ರಶಸ್ತಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ನಿಟ್ಟೆ ಎನ್.ಎಂ.ಎ.ಎಂ. ಟೆಕ್ನಾಲಜಿ ಸಂಸ್ಥೆ ಪ್ರಥಮ ಸಮಗ್ರ ಪ್ರಶಸ್ತಿ ಗೆದ್ದು ಕೊಂಡಿತ್ತು. ಎಸ್.ಡಿ.ಎಂ. ಉಜಿರೆ ಕಾಲೇಜು ದ್ವಿತೀಯ, ಉಡುಪಿ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಸಂಸ್ಥೆ ತೃತೀಯ ಪ್ರಶಸ್ತಿಗಳನ್ನು ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜು ತಂಡ ನಾಲ್ಕು ಹಾಗೂ ಮಂಗಳೂರಿನ ಎಸ್.ಡಿ.ಎಂ. ಉದ್ಯಮಾಡಳಿತ ಕಾಲೇಜು ತಂಡ ಐದನೇ ಸ್ಥಾನ ಪಡೆದುಕೊಂಡಿತು.