ಮಂಗಳೂರು: ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮವಾಗಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ಆಯೋಜಿಸಿದ್ದ 12ನೇ ವರ್ಷದ ನುಡಿ ಹಬ್ಬ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭ 17 ನವೆಂಬರ್ 2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ “ಕಲೆಯ ಆರಾಧನೆಯಿಂದ ಕಲಾವಿದ ಬೆಳೆಯುತ್ತಾನೆ. ಕಲೆಯೂ ತನ್ನ ಮೌಲ್ಯ ಹೆಚ್ಚಿಸಿಕೊಳ್ಳುತ್ತದೆ. ಕಲಾರಾಧನೆಯಿಂದ ಯಕ್ಷಗಾನ ಕಲೆ ಹೆಚ್ಚು ಶ್ರೀಮಂತಗೊಳ್ಳಲಿದೆ. ನುರಿತ ಕಲಾವಿದ ತನ್ನ ಪ್ರಾವೀಣ್ಯವನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡದೆ ಕಲೆಯ ಶ್ರೀಮಂತಿಕೆ ಹೆಚ್ಚಿಸಲು ನಡೆಸುವ ಪ್ರಯತ್ನಗಳು ಕಲೆಯ ಬೆಳವಣಿಗೆಗೆ ಕಾರಣವಾಗುತ್ತವೆ. ಕಲೆ ತನ್ನ ಬದುಕಿಗೆ ಮೌಲ್ಯ ತಂದುಕೊಟ್ಟಿದೆ ಎಂಬ ವಿನೀತ ಭಾವದಿಂದ ಕಲೆಯನ್ನು ಅರಾಧಿಸುತ್ತ ಹೋದರೆ ಅದು ಇನ್ನಷ್ಟು ಹೆಚ್ಚಿನ ಸಿದ್ಧಿ ಮತ್ತು ಪ್ರಸಿದ್ಧಿ ಸಾಧಿಸಲು ಸಾಧ್ಯ.” ಎಂದರು.
ಕರ್ಣಾಟಕ ಬ್ಯಾಂಕ್ ಇದರ ಮಹಾಪ್ರಬಂಧಕಿ ಸುಮನಾ ಘಾಟೆ ಮಾತನಾಡಿ “ಗತ್ತು, ಗಾಂಭೀರ್ಯ, ಶ್ರುತಿ, ತಾಳ, ಲಯ, ನೃತ್ಯ ಹೀಗೆ ಹತ್ತು ಹಲವು ಸಂಸ್ಕಾರಗಳ ಮೇಳೈಸುವಿಕೆಯೇ ಯಕ್ಷಗಾನ. ತನ್ನ ಸ್ವರ ಮಾಧುರ್ಯದಲ್ಲೇ ಇಡೀ ಪ್ರಸಂಗವನ್ನು ವರ್ಣಿಸಬಲ್ಲ ಚಾತುರ್ಯತೆ ತಾಳಮದ್ದಳೆಯ ವಿಶೇಷತೆ. ಈ ಪ್ರಬುದ್ಧ ಕಲೆಯನ್ನು ಮೈದುಂಬಿಕೊಂಡು ಪ್ರತಿಭೆ ಒಗ್ಗೂಡುವಿಕೆಯಲ್ಲಿ ಸಿದ್ಧಗೊಂಡ ತಂಡದಿಂದ ಶ್ರೀಮಂತ ಕಲಾಪ್ರಕಾರ ಯಕ್ಷಗಾನವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ.” ಎಂದರು. ಇದೇ ಸಂದರ್ಭದಲ್ಲಿ ಹವ್ಯಾಸಿ ಭಾಗವತ ಮತ್ತು ಪ್ರಸಂಗಕರ್ತ ಕೆ. ಎಸ್. ಮಂಜುನಾಥ ಶೇರೆಗಾರ್ ಹರಿಹರಪುರ ಅವರಿಗೆ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಯಕ್ಷ ಭಾರತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಉದ್ಯಮಿ ಜಯರಾಮ್ ಶೇಖ, ಯಕ್ಷಾಂಗಣ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಕಾರ್ಯದರ್ಶಿಗಳಾದ ಲಕ್ಷ್ಮೀನಾರಾಯಣ ರೈ, ಸುಮಾ ಪ್ರಸಾದ್, ಉಪಾಧ್ಯಕ್ಷ ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಂಚಾಲಕರಾದ ಕೆ. ರವೀಂದ್ರ ರೈ ಕಲ್ಲಿಮಾರು ಹಾಗೂ ನಿವೇದಿತಾ ಎನ್. ಶೆಟ್ಟಿ ಉಪಸ್ಥಿತರಿದ್ದರು.