ಮಂಗಳೂರು : ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಕೇಂದ್ರೀಯ ಹಿಂದಿ ನಿರ್ದೇಶನಾಲಯ, ಮಂಗಳೂರು ವಿಶ್ವವಿದ್ಯಾನಿಲಯ, ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟ ಮತ್ತು ಆಂತರಿಕ ಗುಣಮಟ್ಟ ಖಾತರಿಕೋಶದ ಸಹಭಾಗಿತ್ವದಲ್ಲಿ ಐದು ದಿನಗಳ ಕಾಲ ನಡೆದ ‘ಹಿಂದಿ ಯುವ ಬರಹಗಾರರ ಶಿಬಿರ’ದ ಸಮಾರೋಪ ಸಮಾರಂಭವು ದಿನಾಂಕ 17-05-2024ರಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಮಾತನಾಡಿದ ಮೂಡುಬಿದಿರೆ ಮಹಾವೀರ ಕಾಲೇಜು ನಿವೃತ್ತ ಪ್ರಾಧ್ಯಾಪಕ ಡಾ. ವಿದ್ಯಾಕುಮಾರ್ “ಭಾರತದಲ್ಲಿ ಹಿಂದಿ ರಾಜ್ಯಭಾಷಾ ಸ್ಥಾನ ಪಡೆದಿದ್ದು, ವಿಶ್ವದ ಮೂಲೆ ಮೂಲೆಗೂ ಹಿಂದಿ ಭಾಷೆಯ ಸಾರ ತಲುಪಿದೆ. ಈ ಮೂಲಕ ಹಿಂದಿ ಭಾಷೆ ವಿಶ್ವಮಾನ್ಯವಾಗಿದೆ. ಭಾಷೆ ಎಂಬುದು ಸಂವಹನ ಮಾಧ್ಯಮ ಮಾತ್ರವಲ್ಲದೆ ಸಂಸ್ಕೃತಿ ಜನಾಂಗಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ. ದೇಶದಲ್ಲಿ ಅತಿ ಹೆಚ್ಚಿನ ಜನರು ಹಿಂದಿ ಭಾಷೆ ಮಾತನಾಡಬಲ್ಲವರಾಗಿದ್ದಾರೆ. ಹಾಗಾಗಿ ಹಿಂದಿ ಭಾಷೆ ಮಾತನಾಡುವುದಕ್ಕೆ ಯಾವುದೇ ರೀತಿಯ ಸಂಕೋಚ ಇರಕೂಡದು. ವಿದ್ಯಾರ್ಥಿಗಳನ್ನು ಲೇಖಕರನ್ನಾಗಿ ಪ್ರೇರೇಪಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ” ಎಂದು ಹೇಳಿದರು.
ವಿ.ವಿ. ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ ಮಾತನಾಡಿ, “ಭಾಷೆ ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರುವುದಿಲ್ಲ. ನಾವು ಹೆಚ್ಚು ಭಾಷೆ ತಿಳಿದಷ್ಟು ಜ್ಞಾನವೂ ಹೆಚ್ಚಾಗಿ ವಿಸ್ತಾರಗೊಳ್ಳುತ್ತದೆ. ಹಿಂದಿ ಭಾಷಾ ಕಾರ್ಯಾಗಾರದಲ್ಲಿ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಇಲ್ಲಿ ಕಲಿತಂತಹ ವಿಷಯವನ್ನು ಅವರ ಮುಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸದುಪಯೋಗಪಡಿಸಿಕೊಳ್ಳುವುದು ಅಗತ್ಯ” ಎಂದರು.
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಕೇಂದ್ರೀಯ ಹಿಂದಿ ನಿರ್ದೇಶನಾಲಯ ಅಧಿಕಾರಿ ಪ್ರದೀಪ್ ಕುಮಾರ್, ಕರ್ನಾಟಕ ವಿ.ವಿ.ಯ ನಿವೃತ್ತ ಹಿಂದಿ ಪ್ರಾಧ್ಯಾಪಕ ಪ್ರೊ. ಪ್ರಭಾ ಭಟ್, ಡಿ.ವಿ. ಮೋರ್ಕರ್ ಕಾಲೇಜು ಪುಣೆ ಇಲ್ಲಿನ ಹಿಂದಿ ಪ್ರಾದ್ಯಾಪಕ ಪ್ರೊ. ಈಶ್ವರ್ ಪವಾರ್, ಕಾರ್ಯಕ್ರಮ ಸಂಯೋಜಕಿ ಡಾ. ನಾಗರತ್ನ ಎನ್. ರಾವ್, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸುಮಾ ಟಿ.ಆರ್., ನಿವೃತ್ತ ಉಪನ್ಯಾಸಕಿ ಡಾ. ಸುಧಾ ಭಟ್, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.