ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 116ನೇ ಸರಣಿಯಲ್ಲಿ ವರ್ಣಿಕ- 3 ಶೀರ್ಷಿಕೆಯಲ್ಲಿ ಸಂಸ್ಥೆಯ ಹಿರಿಯ ಕಲಾವಿದರಾದ ವಿದ್ವಾನ್ ಗಿರೀಶ್ ಕುಮಾರ್ ಮತ್ತು ವಿದುಷಿ ವಸುಧಾ ಜಿ.ಎನ್. ಇವರಿಂದ ವರ್ಣಗಳ ವಿಶೇಷ ಪ್ರಸ್ತುತಿಯು ದಿನಾಂಕ 01 ಸೆಪ್ಟೆಂಬರ್ 2024ರಂದು ನಡೆಯಿತು.
ಗಿರೀಶ್ ಇವರು ಶ್ರೀ ಮುತ್ತಯ್ಯ ಭಾಗವತರ ಕಮಾಚ್ ರಾಗದ ದರು ವರ್ಣ ನರ್ತಿಸಿದರೆ, ವಸುಧಾರವರು ತಂಜಾವೂರು ಸಹೋದರರ ರಚನೆಯಾದಂತಹ ನಾಟಕುರುಂಜಿರಾಗ, ರೂಪಕತಾಳದ ಬಹಳ ಹಳೆಯ ಸಾಂಪ್ರದಾಯಿಕ ಶೈಲಿಯ ಪದವರ್ಣ ಪ್ರಸ್ತುತಪಡಿಸಿದರು. ಎಸ್.ಡಿ.ಪಿ. ರೆಮೆಡೀಸ್ & ರಿಸರ್ಚ್ ಸೆಂಟರಿನ ಹಿರಿಯ ಮ್ಯಾನೇಜರ್ ಹಾಗೂ ಭರತನಾಟ್ಯ ಕಲಾವಿದೆ ವಿದುಷಿ ಮೇಘನಾ ಪಾಣಾಜೆಯವರು ಅಭ್ಯಾಗತರಾಗಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು.
ಹಿಮ್ಮೇಳದಲ್ಲಿ ನಟುವಾಂಗದಲ್ಲಿ ಗುರು ದೀಪಕ್ ಕುಮಾರ್ ಪುತ್ತೂರು, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ಶ್ರೀ ಗಿತೇಶ್ ಗೋಪಾಲಕೃಷ್ಣನ್ ನೀಲೇಶ್ವರ ಹಾಗೂ ಕೊಳಲಿನಲ್ಲಿ ಶ್ರೀ ರಾಜಗೋಪಾಲನ್ ಕಾಞಂಗಾಡ್ ಇವರು ಸಹಕರಿಸಿದ್ದರು. ಸಭೆಯಲ್ಲಿ ಕರಾವಳಿಯ ಹಿರಿಯ ನೃತ್ಯಗುರು ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮವನ್ನು ಕುಮಾರಿ ವಿಂಧ್ಯಾ ಕಾರಂತ ನಿರ್ವಹಿಸಿ ವಿವಿಧ ಕಲಾಪಗಳನ್ನು ಕುಮಾರಿ ಮಾತಂಗಿ, ವರ್ಷಾ ಕೆ., ಪ್ರಣವಿ, ಮೇಧಾ ಭಟ್, ಮಿತಾಂಶ, ಬೃಂದಾ ಇವರು ನಿಭಾಯಿಸಿದರು. ವಿದುಷಿ ಸುಮಂಗಲ ಗಿರೀಶ್ ಕಾರ್ಯಕ್ರಮದ ಅಭಿಪ್ರಾಯ ಹಂಚಿಕೊಂಡರು.