ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಹಾಗೂ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಸಹಯೋಗದೊಂದಿಗೆ ಸುರತ್ಕಲ್ ಅಮರಾಲ್ಡ್ ಬೇ ಬೀಚ್ ರೆಸಾರ್ಟ್ ನ ‘ಕನಸು’ ಮನೆಯಂಗಳದಲ್ಲಿ ಆಯೋಜಿಸಿದ ‘ವರ್ಷ ವೈಭವ’ ಕವಿ ಗೋಷ್ಠಿ ಹಾಗೂ ಕನ್ನಡ ಹಾಡು ಕಾರ್ಯಕ್ರಮ ದಿನಾಂಕ 02-06-2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಮಾತನಾಡಿ “ಇಂತಹ ತಳಮಟ್ಟದ ಕಾರ್ಯಕ್ರಮಗಳು ಕನ್ನಡದ ಕಂಪು ಹರಡುವಲ್ಲಿ ಹೆಚ್ಚು ಪರಿಣಾಮಕಾರಿ. ಈ ನಿಟ್ಟಿನಲ್ಲಿ ತಾಲೂಕು ಘಟಕ ಶ್ಲಾಘನೀಯ ಸೇವೆ ಸಲ್ಲಿಸುತ್ತಿದೆ.” ಎಂದರು.
ಎಸ್. ಕೆ. ಗೋಪಾಲಕೃಷ್ಣ ಭಟ್, ಗೋಪಾಲಕೃಷ್ಣ ಬೊಳುಂಬು , ಡಾ. ಶೈಲಜಾ ಏತಡ್ಕ, ಅಕ್ಷತಾ ಶೆಟ್ಟಿ, ಗಣೇಶ್ ಪ್ರಸಾದ್ ಜೀ ಹಾಗೂ ಎನ್. ಸುಬ್ರಾಯ ಭಟ್ ವರ್ಷದ ಸ್ಪರ್ಶದ ಕವನಗಳ ಮೂಲಕ ಸಾಹಿತ್ಯಾಸಕ್ತರಿಗೆ ಹರ್ಷ ತಂದರೆ ಮುರಳೀಧರ ಭಾರದ್ವಾಜ್ , ಪ್ರತೀಕ್ಷಾ ಭಟ್ ಕೋಂಬ್ರಾಜೆ , ಪುಟಾಣಿ ಸಹಸ್ರ ಕೋಂಬ್ರಾಜೆ , ಮತ್ತು ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವುಡ ಅವರ ಮಳೆ ಸಂಬಂಧಿತ ಮತ್ತು ಇತರ ಕನ್ನಡ ಹಾಡುಗಳ ಗಾಯನ ಕೇಳುಗರು ತಲೆದೂಗುವಂತೆ ಮಾಡಿದವು.
ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಯೋಧ ಕಾಂತಿಲ ಶಿವರಾಮ ಭಟ್ ಉಪಸ್ಥಿತರಿದ್ದರು. ಕ. ಸಾ. ಪ. ಕೇಂದ್ರ ಮಾರ್ಗದರ್ಶಕ ಸಮಿತಿಯ ಸದಸ್ಯರು ಹಾಗೂ ಪ್ರತಿಷ್ಠಾನದ ಮುಖ್ಯಸ್ಥರಾದ ಡಾ. ಮುರಲೀಮೋಹನ್ ಚೂಂತಾರು ಸ್ವಾಗತಿಸಿ, ಎನ್. ಸುಬ್ರಾಯ ಭಟ್ ನಿರೂಪಿಸಿ, ಗಣೇಶ್ ಪ್ರಸಾದ್ ಜೀ ವಂದಿಸಿದರು.