ಮಂಗಳೂರು : ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ಘಟಕವು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದೊಂದಿಗೆ ಜಂಟಿಯಾಗಿ ಆಯೋಜಿಸಿದ ‘ಕಡಲ ಕಿನಾರೆಯಲ್ಲಿ ವರ್ಷವೈಭವ, ಖ್ಯಾತ ಸಾಹಿತಿ ಭುವನೇಶ್ವರಿ ಹೆಗಡೆಯವರೊಂದಿಗೆ ಸಂವಾದ ಮತ್ತು ಕವಿಗೋಷ್ಠಿ’ ಕಾರ್ಯಕ್ರಮವು ದಿನಾಂಕ 19-08-2023ರಂದು ಜರಗಿತು. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ ಕಾರ್ಯದರ್ಶಿ ಡಾ.ಮುರಲಿ ಮೋಹನ ಚೂಂತಾರು ಇವರ ಕಡಲ ಕಿನಾರೆಯ ಪ್ರಕೃತಿ ರಮಣೀಯ ಪರಿಸರದ ‘ಕನಸು’ ಮನೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಮಂಜುನಾಥ ಎಸ್.ರೇವಣ್ಕರ್ ವಹಿಸಿದ್ದರು.
“ಹಾಸ್ಯ ಸಾಹಿತಿಗೆ ಪಂಥ ಇಲ್ಲ. ಹಾಸ್ಯ ಎಂದರೆ ಅಪಹಾಸ್ಯ ಅಲ್ಲ. ಬಡವರನ್ನು, ಅಂಗವಿಕಲರನ್ನು, ಹುಚ್ಚರನ್ನು, ಜಾತಿಗಳನ್ನು ಹಾಸ್ಯ ಮಾಡಬಾರದು. ಏನೇನೋ ಕಲ್ಪಿಸಿ ಸಾಹಿತ್ಯ ಬರೆಯುವುದು ನನಗೆ ಸೇರದು. ನಮ್ಮ ಸಮಾಜದಲ್ಲಿರುವ ಸ್ವಭಾವ ವೈಚಿತ್ರ್ಯಜನರನ್ನು ಗಮನಿಸುತ್ತ ಹಾಸ್ಯವನ್ನು ಮಾತ್ರ ನಾನು ಬರೆದೆ. ಜನರು ನಕ್ಕು ಹಗುರಾಗಬೇಕು. ಕಷ್ಟಗಳನ್ನು ಮರೆತು ನಗದಿದ್ದರೆ ಬದುಕು ಮುಂದುವರಿಯದು. ಅದಕ್ಕಾಗಿ ನಾನು ನಲಿವನ್ನು ಮಾತ್ರ ಬರೆಯುತ್ತೇನೆ. ಹಾಸ್ಯ ಸಾಹಿತ್ಯದಲ್ಲಿ ಹಲವು ಬಗೆಗಳಿವೆ ಲಲಿತಪ್ರಬಂಧ, ಹಾಸ್ಯಲೇಖನ, ನಗೆಬರಹ, ಜೋಕ್ಸ್, ವ್ಯಂಗ್ಯಚಿತ್ರ ಇತ್ಯಾದಿ. ಅವುಗಳೊಳಗೆ ವ್ಯತ್ಯಾಸ ತುಂಬಾ ಇಲ್ಲ. ಜೋಕ್ಸ್ ಎಂಬುದು ಹಾಸ್ಯ ಸಾಹಿತ್ಯದ ಭಾಗ. ಅದರ ಪರಿಣಾಮ ಕ್ಷಣಿಕ. ಜನರು ಒಮ್ಮೆ ನಗುತ್ತಾರೆ. ಅದರಿಂದ ಅವರಿಗೇನೂ ಲಭಿಸದು. ಲಲಿತ ಪ್ರಬಂಧ ಮತ್ತು ಹಾಸ್ಯ ಲೇಖನಗಳು ಹಾಗಲ್ಲ. ಅವುಗಳಿಂದ ಓದುಗರಿಗೆ ವಿಚಾರ ಮಾಡಲು ಏನಾದರೂ ಸಿಗುತ್ತವೆ. ಹಾಸ್ಯ ಎಂಬುದು ಮನಸ್ಸುಗಳನ್ನು ಬೆಸೆಯುವುದರೊಂದಿಗೆ, ನೋವುಗಳನ್ನು ಮರೆಸುವ ದಿವ್ಯೌಷಧಿಯೂ ಹೌದು. ನಾನು ಹುಟ್ಟಿ ಬೆಳೆದ ಪರಿಸರದಲ್ಲಿ ಎಲ್ಲೆಡೆಯೂ ನಾನು ಸಂತೋಷವನ್ನು ಮಾತ್ರ ಕಂಡೆ. ಇನ್ನೊಬ್ಬರಿಗೆ ಯಾವುದೇ ರೀತಿಯಲ್ಲೂ ಯಾರೂ ನೋವುಂಟು ಮಾಡಿದ್ದನ್ನು ನಾನು ಕಂಡೇ ಇಲ್ಲ. ಹುಟ್ಟಿದೂರನ್ನು ಬಿಟ್ಟು ಮಂಗಳೂರಿಗೆ ಬಂದ ಮೇಲೆ ನನ್ನನ್ನು ಇಲ್ಲಿನವರು ಮುಕ್ತವಾಗಿ ಸ್ವೀಕರಿಸಿ, ತುಂಬು ಪ್ರೀತಿಯನ್ನು ಕೊಟ್ಟಿದ್ದಾರೆ. ಹಾಗಿರುವಾಗ ನಾನು ಹಾಸ್ಯ ಬರಹಗಳನ್ನಲ್ಲದೆ ಇನ್ನೇನನ್ನು ತಾನೇ ಬರೆಯಲಿ?” ಎಂದು ಪ್ರಖ್ಯಾತ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆಯವರು ಹೇಳಿದರು. ಈ ಕಾರ್ಯಕ್ರಮದಲ್ಲಿ ಸಂವಾದಕಾರರಾದ ಡಾ.ಮೀನಾಕ್ಷಿ ರಾಮಚಂದ್ರರ ಜೊತೆಗೆ ಅವರು ಮಾತನಾಡುತ್ತಿದ್ದರು. ಸಂವಾದದಲ್ಲಿ ಪ್ರಸಿದ್ಧ ಸಾಹಿತಿ ಕೇಶವ ಕುಡ್ಲ, ಗೋವಿಂದದಾಸ ಕಾಲೇಜಿನ ಉಪ ಪ್ರಾಂಶುಪಾಲರಾದ ರಮೇಶ್ ಭಟ್ ಎಸ್.ಜಿ ಮತ್ತು ಇನ್ನಿತರರು ಪಾಲುಗೊಂಡಿದ್ದರು.
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಪ್ರಮುಖರಾದ ನ್ಯಾಯವಾದಿ ಗಣೇಶ ಪ್ರಸಾದ್ ಇವರು ಉಪಸ್ಥಿತರಿದ್ದರು. ಸಾಹಿತಿಗಳ ಹಾಗೂ ಆಪ್ತ ವಲಯದ ಈ ಕಾರ್ಯಕ್ರಮ ಬಹಳಷ್ಟು ಆಹ್ಲಾದಕಾರಿ ಹಾಗೂ ಚೇತೋಹಾರಿಯಾಗಿತ್ತು. ಸಂವಾದದ ಅನಂತರ ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ ಎಸ್.ಕೆ.ಗೋಪಾಲಕೃಷ್ಣ ಭಟ್, ಬದ್ರುದ್ದೀನ್ ಕೂಳೂರು, ರಘು ಇಡ್ಕಿದು, ಸಾವಿತ್ರಿ ರಮೇಶ್ ಭಟ್, ರವಿರಾಜ್, ಸುಬ್ರಾಯ ಭಟ್, ರೇಖಾ ಶಂಕರ್, ಗಣೇಶ್ ಪ್ರಸಾದ್ ಜೀ, ಡಾ.ಮೀನಾಕ್ಷಿ ರಾಮಚಂದ್ರ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಮುರಲಿ ಮೋಹನ ಚೂಂತಾರು ಸ್ವಾಗತಿಸಿದರು. ಉಷಾ ಪ್ರಸಾದ್ ಜೀ ಪ್ರಾರ್ಥಿಸಿ, ಪದಾಧಿಕಾರಿ ರಘು ಇಡ್ಕಿದು ಪರಿಚಯಿಸಿದರು. ಕಾರ್ಯದರ್ಶಿ ಗಣೇಶ ಪ್ರಸಾದ್ ಜೀ ಹಾಗೂ ಪದಾಧಿಕಾರಿ ಶ್ರೀಮತಿ ರತ್ನಾವತಿ ಜೆ.ಬೈಕಾಡಿ ನಿರೂಪಿಸಿದರು.