ಬದುಕೆಂಬುದನ್ನು ಕಲೆಯಾಗಿ ತಿಳಿದು ಕಲೆಯ ಬದುಕನ್ನೇ ಬಾಳಿದವರು ಉಡುಪಿಯ ವಸಂತಲಕ್ಷ್ಮೀ ಹೆಬ್ಬಾರ್ ಅವರು. ಕಾಲೇಜಿನ ದಿನಗಳಿಂದಲೇ ಶಾಸ್ತ್ರೀಯ ಸಂಗೀತ, ನೃತ್ಯ, ಯಕ್ಷಗಾನಗಳಲ್ಲಿ ಪರಿಣತಿ ಸಾಧಿಸಿದ ಇವರು ಯಾವ ಗುರುವಿನ ಆಶ್ರಯವಿಲ್ಲದೇ ಚಿತ್ರ ಕಲೆಗೂ ಕೈಯಾಡಿಸಿದರು. ಎಂ.ಜಿ.ಎಂ. ಕಾಲೇಜಿನಲ್ಲಿ ಓದುತ್ತಿರುವ ವೇಳೆಯಲ್ಲಿ ಹವ್ಯಾಸವೆಂದು ಚಿತ್ರಿಸುತ್ತಾ ವರ್ಣ ಬಳಿಯುತ್ತಾ ನೈಫ್ ವರ್ಕ್ ನಲ್ಲಿ ಕೆತ್ತಿದ ಯೇಸು ಕ್ರಿಸ್ತನ ಪೈಂಟಿಂಗ್ ಅಂದಿನ ವಾರ ಪತ್ರಿಕೆ ತರಂಗದಲ್ಲಿ ಪ್ರಕಟಗೊಂಡಿತ್ತು. ಸಸ್ಯ ಶಾಸ್ತ್ರ ಉಪನ್ಯಾಸಕ ಶ್ರೀ ವೀ. ಅರವಿಂದ ಹೆಬ್ಬಾರರೊಂದಿಗಿನ ವಿವಾಹನಂತರ ಅವರ ಪ್ರೋತ್ಸಾಹದೊಂದಿಗೆ, ವಸಂತಲಕ್ಷ್ಮೀ ಅವರ ಸಂಗೀತ ಮತ್ತು ಪೈಂಟಿಂಗ್‌ಗಳು ಬಲವಾದ ಪ್ರವೃತ್ತಿಯಾಗಿ ಮುಂದೆ ಬೆಳೆಯಿತು. ರಂಜನಿ ಹೆಬ್ಬಾರ್ ಮತ್ತು ಸಾರಂಗ ಹೆಬ್ಬಾರ್ ಅವರ ತಾಯಿಯಾಗಿ, ಪುತ್ರಿ ರಂಜನಿ ಹೆಬ್ಬಾರ್ ಅವರನ್ನು ಸಂಗೀತ ಕ್ಷೇತ್ರದ ತಾರೆಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪುತ್ರಿ ರಂಜನಿಯ ಅಕಾಲ ಮೃತ್ಯುವಿನ ಬಳಿಕ (1983) ದುಃಖದ ಮಡುವಿನಿಂದ ಮರೆಯಾಗಲು ಕಲಾ ಮಾಧ್ಯಮವನ್ನು ಬಳಸಿದ ಈ ಸಂಗೀತ ಟೀಚರು ಪೈಂಟಿಂಗನ್ನೇ ಗಂಭೀರವಾಗಿ ಆಯ್ದುಕೊಂಡು ಚಿತ್ರಕಲೆಯಲ್ಲಿ ಮುಳುಗಿದರು. ಆಯಿಲ್, ಏಕ್ರಿಲಿಕ್, ಪೆನ್ಸಿಲ್ ಡ್ರಾಯಿಂಗ್‌ಗಳನ್ನು ಬ್ರಶ್, ನೈಫ್, ಸ್ಕಾಲ್ಪೆಲ್, ಡ್ರಾಯಿಂಗ್ ಬೋರ್ಡ್ ಮುಂತಾದ ಸಾಧನಗಳನ್ನು ಬಳಸಿ ಸೀನರಿ, ಪೋರ್ಟ್ರೈಟ್, ಥೀಮಾಟಿಕ್, ಮಾಡರ್ನ್ ಪೈಂಟಿಂಗ್‌ನ ಹಲವಾರು ಕೃತಿಗಳನ್ನು ತನ್ನಷ್ಟಕ್ಕೇ ತಾನೇ ಹೆಣೆಯುತ್ತಾ ಬಂದರು. ಉಡುಪಿಯ ದೃಶ್ಯ ಸ್ಕೂಲಿನ ಹಿರಿಯ ಶಿಕ್ಷಕ ಶ್ರೀ ರಮೇಶ್ ರಾಯರಲ್ಲಿ ಮಾರ್ಗದರ್ಶನ ಪಡೆದ ನಂತರದಲ್ಲಿ ತನ್ನ ಬಂಧು ಸಪ್ನಾ ಗಣೇಶ್ ಅವರ ಪ್ರೋತ್ಸಾಹದೊಂದಿಗೆ ಮುಂದೆ ಮುಂಬೈನ ಶ್ರೀಮತಿ ಶರ್ಮಿಳಾ ಗುಪ್ತೆ ಅವರಲ್ಲಿ ವಿಧ್ಯುಕ್ತ ತರಬೇತಿಯನ್ನು ತನ್ನ 57ರ ವಯಸ್ಸಿನಲ್ಲಿ ಪಡೆದ ಸಾಧನೆ ಇವರದು. ವಸಂತಲಕ್ಷ್ಮೀಯವರ ಮನೆ ಮಂದಿ, ವಿಶೇಷವಾಗಿ ಅವರ ತಮ್ಮ ಶ್ರೀ ರಾಜಮೋಹನ ವಾರಂಬಳ್ಳಿಯವರ ನಿರಂತರ ಪ್ರೋತ್ಸಾಹದಿಂದ ವಸಂತಲಕ್ಷ್ಮೀಯವರ ಕಲಾ ಪ್ರವೃತ್ತಿ ಮೇಲೇರಿತ್ತೆಂದರೆ ಉತ್ಪ್ರೇಕ್ಷೆಯ ಮಾತಲ್ಲ.
ವಸಂತಲಕ್ಷ್ಮೀಯವರು ಅಕಾಲಿಕವಾಗಿ ನಿಧನರಾದ ಒಂದು ವರ್ಷದಲ್ಲೇ ಅವರ ಚಿತ್ರ ಕಲಾ ನೈಪುಣ್ಯವನ್ನು ಸಾರುವ ‘ವಸಂತ ಕಲಾ’ ಎಂಬ ಈ ಚಿತ್ರಕಲಾ ಪ್ರದರ್ಶನವನ್ನು ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್ ಮತ್ತು ಅದಿತಿ ಆರ್ಟ್ ಗ್ಯಾಲರಿ ಜಂಟಿಯಾಗಿ ಆಯೋಜಿಸಿತ್ತು. ದಿನಾಂಕ 01-11-2023ರಂದು ಅದಿತಿ ಆರ್ಟ್ ಗ್ಯಾಲರಿಯಲ್ಲಿ ನಡೆದ ಈ ಪ್ರದರ್ಶನವು ವಸಂತಲಕ್ಷ್ಮೀ ಹೆಬ್ಬಾರರ ಸಂಗೀತ ಶಿಷ್ಯರು, ಸ್ನೇಹಿತರು, ಸಂಬಂಧಿಕರು ಹಾಗೂ ಉಡುಪಿಯ ಸಂಗೀತ ಹಾಗೂ ಚಿತ್ರಕಲಾ ಆಸಕ್ತರು, ಹೀಗೆ ಹಲವಾರು ವೀಕ್ಷಕರನ್ನು ಕಂಡಿತು. ಅದಿತಿ ಆರ್ಟ್ ಗ್ಯಾಲರಿಯ ಡಾ. ಕಿರಣ್ ಆಚಾರ್ಯರ ಕಲಾತ್ಮಕ ಕಲ್ಪನೆಯೊಂದಿಗೆ ವ್ಯವಸ್ಥಿತಗೊಂಡು ಸುಸಜ್ಜಿತವಾದ `ವಸಂತ ಕಲಾ’ ಪ್ರದರ್ಶನವು ವಸಂತಲಕ್ಷ್ಮೀ ಹೆಬ್ಬಾರರ ಚಿತ್ರಕಲಾ ಗುರುಗಳಾದ ಉಡುಪಿಯ ರಮೇಶ್ ಹೆಬ್ಬಾರ್ ಹಾಗು ಮುಂಬೈನ ಶರ್ಮಿಳಾ ಗುಪ್ತೆಯವರಿಂದ ಉದ್ಘಾಟಿಸಲ್ಪಟ್ಟಿತು. ವಸಂತಲಕ್ಷ್ಮೀ ಹೆಬ್ಬಾರರ ಪತಿ ಹಾಗು ರಂಜನಿ ಮೆಮೊರಿಯಲ್ ಟ್ರಸ್ಟಿನ ಅಧ್ಯಕ್ಷರಾದ ಪ್ರೊ. ವೀ ಅರವಿಂದ ಹೆಬ್ಬಾರರು ಪ್ರದರ್ಶನದ ಕುರಿತು ಪ್ರಸ್ತಾವಿಸಿ ವಸಂತಲಕ್ಷ್ಮೀಯವರ ಚಿತ್ರಕಲಾ ಪಯಣದ ಚಿತ್ರಣವನ್ನಿತ್ತರು. ಡಾ. ಕಿರಣ್ ಆಚಾರ್ಯರು ಸಭಿಕರನ್ನು ಸ್ವಾಗತಿಸಿದ ಬಳಿಕ ಈರ್ವರು ಮುಖ್ಯ ಅತಿಥಿಗಳು ವಸಂತಲಕ್ಷ್ಮೀಯವರ ಆತ್ಮ ಸ್ಥೈರ್ಯ ಹಾಗೂ ಕಲಿಕೆಯ ದಾಹದ ಕುರಿತು ಮಾತನಾಡಿದರು. ವಸಂತಲಕ್ಷ್ಮೀಯವರ ತಮ್ಮ, ದೆಹಲಿಯ ಶ್ರೀ ರಾಜಮೋಹನ್ ವಾರಂಬಳ್ಳಿಯವರು ಧನ್ಯವಾದವಿತ್ತರು. ಉದ್ಘಾಟನೆಯ ಬಳಿಕ, ವಸಂತಲಕ್ಷ್ಮೀಯವರ ಶಿಷ್ಯೆಯರಿಂದ ತಯಾರಿಸಲ್ಪಟ್ಟ ಅವರ ಜೀವನದ ಕುರಿತ ಒಂದು ಚಿತ್ರಪ್ರದರ್ಶನವು ಕೂಡ ನೆರವೇರಿತು. ಸಂಜೆ 8 ಗಂಟೆಯವರೆಗೆ ನಡೆದ ವಸಂತ ಕಲಾ ದಿನವಿಡೀ ಪ್ರದರ್ಶನದೊಂದಿಗೆ ವಸಂತಲಕ್ಷ್ಮೀಯವರ ಸಂಗೀತ ಶಿಷ್ಯಯರಿಂದ ಸಂಗೀತ ಸಮಾರಾಧನೆಯೂ ನಡೆಯಿತು.