ಮಂಗಳೂರು : ರಾಗತರಂಗ ಮಂಗಳೂರು ಇದರ ವತಿಯಿಂದ ‘ವಸಂತಗಾನ ಝೇಂಕಾರ-2025’ ಮಕ್ಕಳ ಸಂಗೀತ, ನೃತ್ಯ ಮತ್ತು ಕಿರು ನಾಟಕ ಕಾರ್ಯಕ್ರಮವು ಮಂಗಳೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ದಿನಾಂಕ 20 ಏಪ್ರಿಲ್ 2025ರಂದು ನಡೆಯಿತು. ಜೀವವಿಮಾ ನಿಗಮದ ನಿವೃತ್ತ ಹಿರಿಯ ವಿಭಾಗಾಧಿಕಾರಿ ಕೆ. ರಮೇಶ್ ರಾವ್ ಇವರು ಮಾಸ್ಟರ್ ಸಾಯಿ ಅನೂಪ್ ಜತೆಗೂಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಾಗತರಂಗದ ಪೂರ್ವಾಧ್ಯಕ್ಷ ಅನಂತಕೃಷ್ಣ ಉಡುಪ, ವಾಮನ್ ಬಿ. ಮೈಂದನ್, ಅಧ್ಯಕ್ಷ ಕೆ.ಎನ್. ಶಶಿಧರ್, ಉಪಾಧ್ಯಕ್ಷರಾದ ಚಂದ್ರಶೇಖರ ದೈತೋಟ, ಕೃಷ್ಣ ಶೆಟ್ಟಿ ತಾರೆಮಾರ್, ಕಾರ್ಯದರ್ಶಿ ಪಿ.ಸಿ. ರಾವ್, ಜತೆ ಕಾರ್ಯದರ್ಶಿ ಜಯಪ್ರಕಾಶ ಶೆಟ್ಟಿ, ಕೋಶಾಧಿಕಾರಿ ಸೌಮ್ಯಾ ಪಿ. ರಾವ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಮಕ್ಕಳಿಂದ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ, ಜಾನಪದ ನೃತ್ಯ, ಭಾವ ಗಾಯನ, ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ, ವೃಂದಗಾನ, ನೃತ್ಯ ರೂಪಕ ಪುಣ್ಯಕೋಟಿ, ಹಿಂದೂಸ್ಥಾನಿ ವಾದ್ಯ ಸಂಗೀತ, ಭರತನಾಟ್ಯ, ಪ್ಯೂಶನ್ ಮ್ಯೂಸಿಕ್, ಕಿರು ನಾಟಕ ಪ್ರದರ್ಶನಗೊಂಡಿತು.
ಯಾವುದೇ ಸಭಾ ಕಾರ್ಯಕ್ರಮ ಇಲ್ಲದೆ, ಕೇವಲ ಉದ್ಘಾಟನೆ ನಡೆಸಿ ಕಾರ್ಯಕ್ರಮವನ್ನು ಮಕ್ಕಳಿಗಾಗಿಯೇ ನಡೆಸಿದ್ದು ವಿಶೇಷವಾಗಿತ್ತು. ನಾಲ್ಕು ದಶಕಗಳ ಹಿಂದೆ ಆರಂಭವಾದ ರಾಗ ತರಂಗ ಸಂಸ್ಥೆ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ಭಾರತೀಯ ಕಲಾಪ್ರಕಾರಗಳು, ಸೃಜನಶೀಲ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚು ಭಾಗವಹಿಸುವಂತೆ ಆಗಲು ಪ್ರತಿವರ್ಷ ಮಕ್ಕಳಿಗಾಗಿಯೇ ಸ್ಪರ್ಧೆ, ಕಾರ್ಯಕ್ರಮ ಆಯೋಜಿಸುತ್ತಿದೆ.