ಕೋಟ : ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ತನ್ನ ಐವತ್ತರ ಸಂಭ್ರಮಾಚರಣೆಯ ಸುವರ್ಣ ಪರ್ವದ ಮೂರನೆಯ ಕಾರ್ಯಕ್ರಮವು ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ (ರಿ.) ಪಾರಂಪಳ್ಳಿ, ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಕಾರ್ಕಡ ಗೆಳೆಯರ ಬಳಗದ ಜಂಟಿ ನೆರವಿನೊಂದಿಗೆ ದಿನಾಂಕ 23 ನವಂಬರ್ 2024 ಶನಿವಾರದಂದು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಮಾತನಾಡಿ “ಯಕ್ಷಗಾನದ ಪರಂಪರೆ ಮತ್ತು ಶಿಸ್ತನ್ನು ಕಾಪಿಡುವಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಯಕ್ಷ ಪಯಣವು ಸಾರ್ಥಕವಾದುದು. ಹಾರಾಡಿ ಮಟಪಾಡಿ ತಿಟ್ಟುಗಳ ಪರಂಪರೆಗೆ ಸುವರ್ಣ ಸ್ಪರ್ಶದ ಮೆರುಗನ್ನು ಈ ತಂಡ ಕೊಟ್ಟಿದೆ. ಉಡುಪ ಮತ್ತು ಹಂದೆಯವರ ಜೋಡಿ ಯಕ್ಷಗಾನ ಪರಂಪರೆಯಲ್ಲಿ ಐತಿಹಾಸಿಕ ದಾಖಲೆಯನ್ನು ಮೆರದಿದೆ. ಯಕ್ಷಗಾನದ ಕುಣಿತ ಮತ್ತು ವೇಷಭೂಷಣಗಳ ನಿಜವಾದ ಚೆಲುವು ಮಕ್ಕಳ ಮೇಳದಲ್ಲಿ ಮಾತ್ರ ಕಾಣಲು ಸಾಧ್ಯ” ಎಂದು ಹೇಳಿದರು.
ಗುರುನರಸಿಂಹ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಎಸ್. ಕಾರಂತರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಲೆಯು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಶಕ್ತಿ ಹೊಂದಿರುವಂತಹದು. ಸಾಲಿಗ್ರಾಮ ಮಕ್ಕಳ ಮೇಳ ಸುಮಾರು ಐವತ್ತು ವರ್ಷಗಳ ಕಾಲ ಜನ ಮನದ ಸ್ವಾಸ್ಥ್ಯವನ್ನು ಕಾಪಿಡುವಲ್ಲಿ ಯಶಸ್ವಿಯಾಗಿದೆ” ಎಂದರು.
ಮಕ್ಕಳ ಕ್ಷೇತ್ರದಲ್ಲಿ ಅನುಪಮವಾದ ಕೃಷಿ ಮಾಡಿದ ನಿವೃತ್ತ ಅಧ್ಯಾಪಕ, ಯಕ್ಷ ಗುರು, ಲೇಖಕ, ಹವ್ಯಾಸಿ ಯಕ್ಷಗಾನ ಮತ್ತು ನಾಟಕ ಕಲಾವಿದರಾದ ಮಣೂರಿನ ಎಂ.ಎನ್. ಮಧ್ಯಸ್ಥರಿಗೆ ಮಕ್ಕಳ ಮೇಳದ ‘ಸುವರ್ಣ ಪರ್ವ ಪರಸ್ಕಾರ’ವನ್ನು ನೀಡಿ ಗೌರವಿಸಲಾಯಿತು. ಮುಖ್ಯ ಪ್ರಾಯೋಜಕರಾದ ನಿವೃತ್ತ ಅಂಚೆ ಪಾಲಕರೂ, ಪ್ರಗತಿಪರ ಕೃಷಿಕರಾದ ಪಾರಂಪಳ್ಳಿ ಪಿ. ಸದಾಶಿವ ಮಧ್ಯಸ್ಥ, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಲಕ್ಷ್ಮೀನಾರಾಯಣ ಮಧ್ಯಸ್ಥ ಪ್ರಶಸ್ತಿ ಪ್ರದಾನ ಮಾಡಿದರು. ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷರಾದ ಐರೋಡಿ ಜಗದೀಶ ಕಾರಂತ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀದರ ಹಂದೆ, ಕೋಟ ಸಿ.ಎ. ಬ್ಯಾಂಕ್‌ನ ಅಧ್ಯಕ್ಷರಾದ ಡಾ ಕೃಷ್ಣ ಕಾಂಚನ್, ಕಾರ್ಕಡ ಗೆಳೆಯರ ಬಳಗ ಅಧ್ಯಕ್ಷರಾದ ತಾರಾನಾಥ ಹೊಳ್ಳ, ಸಾಲಿಗ್ರಾಮ ಮಕ್ಕಳ ಮೇಳದ ಕಾರ್ಯಾಧ್ಯಕ್ಷ ಕೆ. ಮಹೇಶ್ ಉಡುಪ, ಅಧ್ಯಕ್ಷ ಬಲರಾಮ ಕಲ್ಕೂರ, ಶ್ರೀಕಾಂತ ಉಡುಪ ಉಪಸ್ಥಿತರಿದ್ದರು.
ಮೇಳದ ನಿರ್ದೇಶಕ ಸುಜಯೀಂದ್ರ ಹಂದೆ ಸ್ವಾಗತಿಸಿ, ಉಪಾಧ್ಯಕ್ಷ ಜನಾರ್ದನ ಹಂದೆ ವಂದಿಸಿ, ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಮೇಳದ ಕಲಾವಿದರಿಂದ ಸ್ಥಾಪಕ ನಿರ್ದೇಶಕ ದಿವಂಗತ ಕಾರ್ಕಡ ಶ್ರೀನಿವಾಸ ಉಡುಪ ವಿರಚಿತ ‘ವೀರ ವೃಷಸೇನ’ ಯಕ್ಷಗಾನ ಪ್ರದರ್ಶನಗೊಂಡಿತು.