ಕಾಸರಗೋಡು : ಕಾಸರಗೋಡಿನ ಕೂಡ್ಲಿನಲ್ಲಿ ದೇಶೀಯ ಅಧ್ಯಾಪಕ ಪರಿಷತ್ ಇದರ ಕಾರ್ಯಾಲಯದ ಉದ್ಘಾಟನೆಯು ದಿನಾಂಕ 03-04-2024 ರಂದು ನಡೆಯಿತು.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಕಲಾವಿದರಿಂದ ‘ವೀರಮಣಿ ಕಾಳಗ’ ಎಂಬ ಪ್ರಸಂಗವು ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ಶತ್ರುಘ್ನನಾಗಿ ಮಾ. ಮನ್ವಿತ್ ಕೃಷ್ಣ ನಾರಾಯಣಮಂಗಲ ಅವರ ರಂಗನಡೆಗಳು, ಹನುಮನಾಗಿ ಕು. ಅಭಿಜ್ಞಾ ಭಟ್ ಅವರ ಉತ್ತಮ ವಾಕ್ಸರಣಿ, ವೀರಮಣಿಯ ಗತ್ತುಗಾರಿಕೆಯೊಂದಿಗೆ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ, ಶಿವನಾಗಿ ಶ್ರೀ ಶಶಿಧರ ಕುದಿಂಗಿಲ ಅವರ ರಂಗವೈಖರಿ ಹಾಗೂ ಲಾಲಿತ್ಯ ಗಾಂಭೀರ್ಯದೊಂದಿಗೆ ಶ್ರೀರಾಮನಾಗಿ ವಿನಯ ಚಿಗುರುಪಾದೆ ಅವರು ಪ್ರಸಂಗದ ಯಶಸ್ಸಿಗೆ ಕಾಣಿಕೆಯಿತ್ತರು.
ಭಾಗವತರಾಗಿ ಶ್ರೀ ಕೇಶವ ಪ್ರಸಾದ, ಚೆಂಡೆ ಹಾಗೂ ಮದ್ದಳೆಗಳಲ್ಲಿ ಶ್ರೀ ಚೇವಾರು ಶಂಕರ ಕಾಮತ್, ಯಕ್ಷಗಾನ ಗುರು ಶ್ರೀ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಹಾಗೂ ಶ್ರೀ ಕೃಷ್ಣಮೂರ್ತಿ ಎಡನಾಡು ಹಿಮ್ಮೇಳಗಳಲ್ಲಿ ಸಹಕರಿಸಿದರು. ಪ್ರಬುದ್ಧ ಪ್ರೇಕ್ಷಕ ಗಡಣ ಮೌನವಾಗಿ ವೀಕ್ಷಿಸಿ, ಸೂಕ್ತ ಪ್ರತಿಕ್ರಿಯೆ ನೀಡಿದರು.