ಮಂಗಳೂರು : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಉಳ್ಳಾಲದ ನಗರಸಭೆಯ ಮಹಾತ್ಮಾ ಗಾಂಧಿ ರಂಗ ಮಂದಿರದಲ್ಲಿ ‘ವೀರರಾಣಿ ಅಬ್ಬಕ್ಕ ಉತ್ಸವ 2023-24’ ಕಾರ್ಯಕ್ರಮಗಳು ದಿನಾಂಕ 24-02-2024ರಂದು ಜರಗಿದವು. ಈ ಸಮಾರಂಭಕ್ಕೆ ಚಾಲನೆ ನೀಡಿದ ಚೌಟರ ಅರಮನೆ ಮೂಡುಬಿದಿರೆ ಅಬ್ಬಕ್ಕ ವಂಶಸ್ಥೆ ಮತ್ತು ವೀರರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘ ಮಂಗಳೂರು ಇದರ ಕಾರ್ಯದರ್ಶಿ ಡಾ. ಅಕ್ಷತಾ ಅದರ್ಶ್ ಜೈನ್ ಇವರು ಮಾತನಾಡಿ “ವೀರರಾಣಿ ಅಬ್ಬಕ್ಕ ಉಳ್ಳಾಲ ಮತ್ತು ಮೂಡುಬಿದಿರೆಗೆ ಮಾತ್ರ ಸೀಮಿತವಲ್ಲ. ಅವರು ಇಡೀ ಭಾರತ ದೇಶದ ಸುಪುತ್ರಿ. ಈ ನಿಟ್ಟಿನಲ್ಲಿ ವೀರರಾಣಿ ಅಬ್ಬಕ್ಕ ಉತ್ಸವವನ್ನು ಇಡೀ ಭಾರತ ದೇಶದಾದ್ಯಂತ ಆಚರಿಸುವಂತಾಗಬೇಕು” ಎಂದು ಅಭಿಪ್ರಾಯಪಟ್ಟರು.
ವಿವಿಧ ಗೋಷ್ಠಿಗಳಿಗೆ ಚಾಲನೆ ನೀಡಿದ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಮಾತನಾಡಿ, “ರಾಣಿ ಅಬ್ಬಕ್ಕನ ಬಗ್ಗೆ ಮಾತನಾಡುವಾಗ ಅವಳು ನಮ್ಮವಳು ಮತ್ತು ರಾಷ್ಟ್ರ ಇತಿಹಾಸಕ್ಕೆ ಸೇರಿದವಳು ಎನ್ನವುದು ಉಲ್ಲೇಖಾರ್ಹವಾಗಿದೆ. ಅಬ್ಬಕ್ಕಳ ಇತಿಹಾಸವನ್ನು ಮರು ಕಟ್ಟುವ ಕೆಲಸವಾಗಬೇಕಾಗಿದ್ದು, ಕಳೆದ 27 ವರುಷಗಳಿಂದ ಅಬ್ಬಕ್ಕಳ ವಿಚಾರದಲ್ಲಿ ಇತಿಹಾಸವನ್ನು ಕಟ್ಟುವ ಕೆಲಸ ಮಾಡುತ್ತಿರುವ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಕಾರ್ಯ ಶ್ಲಾಘನೀಯ. ಇತಿಹಾಸಕಾರರು ಉಲ್ಲೇಖಿಸಿರುವ ಆಂಗ್ಲ ಭಾಷೆಯಲ್ಲಿ ಉಲ್ಲೇಖಿತ ಒಂದು ಲೇಖನದಲ್ಲಿ ಭಾರತದ ಕಚ್ಚೆದೆಯ ವೀರರಾಣಿಯರ 11 ಮಂದಿಯಲ್ಲಿ ವೀರರಾಣಿ ಅಬ್ಬಕ್ಕಳ ಹೆಸರು ಆರನೇಯವಳಾಗಿ ಉಲ್ಲೇಖವಾಗಿರುವುದು ನಾವು ಅಭಿಮಾನ ಪಡೆಯುವ ವಿಚಾರವಾಗಿದೆ” ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಲನಚಿತ್ರ ನಟಿ ಶ್ರೀಮತಿ ಸರೋಜಿನಿ ಎಸ್. ಶೆಟ್ಟಿ ಚಾಲನೆ ನೀಡಿದರು. ಕಾರ್ಯಕ್ರಮದ ಉದ್ಘಾಟನೆಗೂ ಮೊದಲು ವೀರರಾಣಿ ಅಬ್ಬಕ್ಕ ಉತ್ಸವ ಪ್ರಯುಕ್ತ ಮಾಸ್ತಿಕಟ್ಟೆ ಭಾರತ್ ಹೈಸ್ಕೂಲ್ ಬಳಿಯಿಂದ ಮಹಾತ್ಮಾ ಗಾಂಧಿ ರಂಗ ಮಂದಿರದವರೆಗೆ ನಡೆದ ಆಕರ್ಷಕ ತುಳುನಾಡ ಜಾನಪದ ದಿಬ್ಬಣವನ್ನು ಉಳ್ಳಾಲ ಪೊಲೀಸ್ ಇನ್ಸ್ಪೆಕ್ಟರ್ ಬಾಲಕೃಷ್ಣ ಹೆಚ್.ಎನ್. ಉದ್ಘಾಟಿಸಿದರು. ಮಂಗಳೂರಿನ ಗಾನ ಸರಸ್ವತಿ ಸಂಗೀತ ವಿದ್ಯಾಲಯದ ಶ್ರೀಮತಿ ಲಾವಣ್ಯ ಸುಧಾಕರ್ ಇವರು ವಂದನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮವನ್ನು ಲೀಲಾವತಿ ಸ್ವಾಗತಿಸಿ, ರತ್ನಾವತಿ ಜೆ. ಬೈಕಾಡಿ ನಿರೂಪಿಸಿ, ರಾಜೀವಿ ಕೆಂಪುಮಣ್ಣು ವಂದಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀ ರಾಜೇಶ್ ಜಿ., ಕನ್ನಡ ಸಾಹಿತ್ಯ ಪರಿಷತ್ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ, ದರ್ಗಾ ಅಧ್ಯಕ್ಷರಾದ ಹಾಜಿ ಬಿ.ಜಿ. ಹನೀಫ್, ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಕುಮಾರ್ ಸಾಲ್ಯಾನ್, ಶ್ರೀ ಚೀರುಂಬ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ, ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಉಪಾಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಯೆನಪೋಯ ಕಾಲೇಜು ಉಪ ಪ್ರಾಂಶುಪಾಲ ಡಾ. ಜೀವನ್ ರಾಜ್ ಕುತ್ತಾರ್, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ.ಟ್ರಸ್ಟ್ ಯೋಜನಾಧಿಕಾರಿ ಚೆನ್ನಕೇಶವ, ಬ್ಯಾರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ನಝೀರ್ ಉಳ್ಳಾಲ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ 2023ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು, ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಉಳ್ಳಾಲದ ಅಧ್ಯಕ್ಷ ರಾಜೇಶ್ ಪುತ್ರನ್, ಮೊಗವೀರಪಟ್ಣ ಯೂತ್ ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷ ಸಾಜಿದ್ ಉಳ್ಳಾಲ, ಕೊಲ್ಯ ಬಿಲ್ಲವ ಸೇವಾ ಸಮಾಜ ಟ್ರಸ್ಟಿನ ಅಧ್ಯಕ್ಷ ವೇಣುಗೋಪಾಲ್ ಕೊಲ್ಯ, ಸಯ್ಯದ್ ಮದನಿ ಚಾರಿಟೆಬಲ್ ಟ್ರಸ್ಟಿನ ಅಧ್ಯಕ್ಷ ಹನೀಫ್ ಹಾಜಿ, ಇರಾ ಯುವಕ ಮಂಡಲ, ಆಲ್ವಿನ್ ಡಿ’ಸೋಜಾ, ಉಮೇಶ್ ಬೋಳಾರ್, ಪ್ರಮೋದ್ ಉಳ್ಳಾಲ್, ಇರಾ ನೇಮು ಪೂಜಾರಿ, ಎಂ.ಎಚ್. ಮಲಾರ್, ಬದ್ರುದ್ದೀನ್ ಹರೇಕಳ, ಮಂಜುನಾಥ್ ಎಸ್. ರೇವಣ್ ಕರ್, ಶೇಖರ ಪಂಬದ ಇವರನ್ನು ಸಮ್ಮಾನಿಸಲಾಯಿತು.
ಉತ್ಸವ ಸಮಿತಿಯ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಉಪಾಧ್ಯಕ್ಷೆ ದೇವಕಿ ಆರ್. ಉಳ್ಳಾಲ, ಯು.ಪಿ. ಆಲಿಯಬ್ಬ, ನಗರಸಭಾ ಸದಸ್ಯರು ಉಪಸ್ಥಿತರಿದ್ದರು. ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷರಾದ ದಿನಕರ್ ಉಳ್ಳಾಲ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ ಮತ್ತು ಕೆ.ಎಂ.ಕೆ. ಮಂಜನಾಡಿ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ ವಂದಿಸಿದರು.
ಪ್ರೊ. ಅಮೃತ ಸೋಮೇಶ್ವರ ಸ್ಮರಣಾರ್ಥ ‘ಪ್ರೊ. ಅಮೃತರ ಬದುಕು ಬರಹ’ ಎಂಬ ವಿಷಯದ ಕುರಿತು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಾವೇರಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಮಾತನಾಡಿ “ಪ್ರಾದೇಶಿಕ ವಿವರಗಳನ್ನು ಇಟ್ಟುಕೊಂಡು ಕೃತಿಯ ಮೂಲಕ ಜಾಗತಿಕವಾಗಿ ಸಾರ್ವತ್ರಿಕ ಮೌಲ್ಯವನ್ನು ಪಸರಿಸಿದವರು ಡಾ. ಅಮೃತ ಸೋಮೇಶ್ವರರು ತಮ್ಮ ಕನ್ನಡ, ತುಳು ಕೃತಿಗಳಲ್ಲಿ ತುಳುನಾಡು ಸೇರಿದಂತೆ ಸುತ್ತುಮುತ್ತಲಿನ ವಿಚಾರಗಳನ್ನು ಅದರ ನೈಜ್ಯ ಮೌಲ್ಯಗಳನ್ನು ಕಟ್ಟಿಕೊಡುವ ಕಾರ್ಯ ನಡೆಸಿದವರು. ಸಾಮಾನ್ಯವಾಗಿ ತುಳುನಾಡಿನ ಮತ್ತು ಕನ್ನಡ ಸಾಹಿತಿಗಳನ್ನು ಪ್ರಾದೇಶಿಕ ಸಾಹಿತಿಗಳು ಎಂದು ಪರಿಗಣಿಸುತ್ತಾರೆ. ಕೋಟ ಶಿವರಾಮ ಕಾರಂತರೂ ಪ್ರಾದೇಶಿಕ ಸಾಹಿತಿಗಳೆಂದೇ ಗುರುತಿಸಿಕೊಂಡಿದ್ದರು. ಆದರೆ ಡಾ. ಕಾರಂತರು ಇಲ್ಲಿನ ಪ್ರಾದೇಶಿಕ ವಿವರಗಳನ್ನು ಕೃತಿಯ ಮೂಲಕ ಜಾಗತಿಕವಾಗಿ ಪಸರಿಸಿದ ಆಗ್ರಗಣ್ಯ ವಿಶ್ವಮಾನ್ಯ ಸಾಹಿತಿಯಾಗಿದ್ದು, ಅವರ ದಾರಿಯಲ್ಲೇ ಡಾ. ಅಮೃತ ಸೋಮೇಶ್ವರರು ಗುರುತಿಸಿಕೊಳ್ಳುತ್ತಾರೆ. ಅಮೃತರು ತಮ್ಮ ಸಾಹಿತ್ಯ, ನಾಟಕ, ಕಾದಂಬರಿಯಲ್ಲಿ ಸಾರ್ವತ್ರಿಕ ಮೌಲ್ಯವನ್ನು ಕಟ್ಟಿಕೊಡುವ ಕಾರ್ಯ ನಡೆಸಿದ್ದಾರೆ. ಅವರ ಗರಡಿಯಲ್ಲಿ ಪಳಗಿದ ಅವರ ವಿದ್ಯಾರ್ಥಿಗಳು ಇಂದು ಲೇಖಕರಾಗಿ, ಸಾಹಿತಿಗಳಾಗಿ, ಸಂಶೋಧಕರಾಗಿ ಗುರುತಿಸಿಕೊಂಡಿದ್ದಾರೆ” ಎಂದು ಅಭಿಪ್ರಾಯಪಟ್ಟರು.
ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪಾದೆಕಲ್ಲು ವಿಷ್ಣುಭಟ್ ತಮ್ಮ ವಿಚಾರವನ್ನು ಮಂಡಿಸುತ್ತಾ “ಅಮೃತ ಸೋಮೇಶ್ವರರ ಸಾಹಿತ್ಯ ಕ್ಷೇತ್ರ ಬಹುವಿಧದಲ್ಲಿ ಹರಡಿಕೊಂಡಿರುವಂತದ್ದು, ಒಂದು ಕಡೆ ತುಳು ಭಾಷೆಯ ಜಾನಪದ ಹಾಡು, ಆಚರಣೆ, ಯಕ್ಷಗಾನ ಪ್ರಸಂಗ ರಚನೆ, ವಿಮರ್ಶೆ ಅದರಲ್ಲಿ ಹೊಸ ವಿಚಾರಗಳನ್ನು ಹುಟ್ಟು ಹಾಕುವ ಕಾರ್ಯ ಮತ್ತು ಇನ್ನೊಂದು ಕಡೆ ಕನ್ನಡ ಸಾಹಿತ್ಯ ಮತ್ತು ಅದರ ವಿಮರ್ಶೆ ಹೀಗೆ ಅವರ ಸಾಹಿತ್ಯದ ಎಲ್ಲಾ ಮಜಲುಗಳು ನಮಗೆ ನೋಡಲು ಸಿಗುತ್ತದೆ. ಬೇರೆ ಬೇರೆ ಪ್ರಾಂತ್ಯದ ವಿದೇಶದ ವಿಚಾರಗಳನ್ನು ತುಳುವಿಗೆ ಭಾಷಾಂತರ ಮಾಡಿ ತುಳು ಭಾಷೆಯನ್ನು ಶ್ರೀಮಂತಗೊಳಿಸಿದವರು ಅಮೃತರು” ಎಂದರು.
ಸಂತ ಆ್ಯಗ್ನೆಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಅರುಣ್ ಉಳ್ಳಾಲ ಇವರು “ಭಗವತಿ ಆರಾಧನೆಯ ಸಮುದಾಯದ ಆರಾಧನೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಕೃತಿ, ಭಗವತಿ ಆರಾಧನೆ ಮಾಡುವ ತುಳುನಾಡಿನ ಪ್ರಮುಖ ನಾಲ್ಕು ಸಮುದಾಯ ಆರಾಧನೆಯನ್ನು ಸಮಷ್ಠಿಯ ಎದುರಿಗಿಟ್ಟು ವಿಮರ್ಶೆ ಮಾಡಿದ ಕೀರ್ತಿ ಡಾ. ಅಮೃತ ಸೋಮೇಶ್ವರರಿಗೆ ಸಲ್ಲುತ್ತದೆ. ತುಳುನಾಡಿನ ದೈವಾರಾಧನೆ ಮತ್ತು ಭಗವತಿ ಆರಾಧನೆಯ ವಿಚಾರದಲ್ಲಿ ಇರುವ ವಿಶೇಷತೆಗಳನ್ನು ಅವರು ಈ ಕೃತಿಯಲ್ಲಿ ತಿಳಿಸಿದ್ದಾರೆ” ಎಂದರು.
ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ್ ಉಳ್ಳಾಲ, ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಡಾ. ಮೀನಾಕ್ಷಿ ರಾಮಚಂದ್ರ ಸ್ವಾಗತಿಸಿ, ರತ್ನಾವತಿ ಜೆ. ಬೈಕಾಡಿ ಕಾರ್ಯಕ್ರಮ ನಿರ್ವಹಿಸಿ, ಶಶಿಕಾಂತಿ ಉಳ್ಳಾಲ ವಂದಿಸಿದರು.
ಇದೇ ವೇದಿಕೆಯಲ್ಲಿ ತುಳು, ಬ್ಯಾರಿ, ಕೊಂಕಣಿ, ಕನ್ನಡ ಹಾಗೂ ಅರೆಭಾಷೆ ಕವನಗಳ ‘ಅಮೃತ ಬಹುಭಾಷಾ ಕಾವ್ಯ ಗಾಯನ’ ಕಾರ್ಯಕ್ರಮವು ಶ್ರೀಮತಿ ಸುಲೋಚನಾ ಪಚ್ಚಿನಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಗೋಷ್ಠಿಯಲ್ಲಿ ಶ್ರೀಮತಿ ರಶ್ಮಿ ಸನಿಲ್ ತುಳುವಿನಲ್ಲಿ, ಶ್ರೀಮತಿ ಫೆಲ್ಸಿ ಲೋಬೊ ಕೊಂಕಣಿಯಲ್ಲಿ, ಶಮೀಮಾ ಕುತ್ತಾರ್ ಬ್ಯಾರಿ ಭಾಷೆಯಲ್ಲಿ, ಸುಮಂಗಲಾ ದಿನೇಶ್ ಶೆಟ್ಟಿ ಕನ್ನಡದಲ್ಲಿ ಹಾಗೂ ಅಪೂರ್ವ ಟಿ.ಕೆ. ಅರೆಭಾಷೆಯಲ್ಲಿ ತಮ್ಮ ಸ್ವರಚಿತ ಕವನ ವಾಚಿಸಿದರು. ಇವರ ಕವನಗಳನ್ನು ಕುಮಾರಿ ಪೂಜಾ ಸನಿಲ್ ಶುಶ್ರಾವ್ಯವಾಗಿ ಹಾಡಿದರು. ಇವರಿಗೆ ಕೊಳಲಿನಲ್ಲಿ ಶಿವಪ್ರಸಾದ್ ಬಿ.ಸಿ. ರೋಡ್, ಕೀಬೋರ್ಡಿನಲ್ಲಿ ಸ್ವಾತಿ ಸತೀಶ್ ಸಾಥ್ ನೀಡಿದರು. ಗೋಷ್ಠಿಯನ್ನು ವಾಣಿ ಲೋಕಯ್ಯ ನಿರೂಪಿಸಿ, ಸರೋಜಾ ಕುಮಾರಿ ವಂದಿಸಿದರು.
ಇದೇ ದಿನ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಲೇಖಕಿ ಡಾ. ಪ್ರಮೀಳಾ ಮಾಧವ್ ಮತ್ತು ಪದ್ಮಶ್ರೀ ಪುರಸ್ಕೃತ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು ಡಾ. ಮಾಲತಿ ಕೆ. ಹೊಳ್ಳ ಅವರಿಗೆ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮಂಗಳೂರು ವಿ.ವಿ. ಕುಲಪತಿ ಡಾ. ಜಯರಾಜ್ ಅಮೀನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, “ವಿ.ವಿ.ಯಲ್ಲಿರುವ ವೀರ ರಾಣಿ ಅಬ್ಬಕ್ಕ ಪೀಠ ಹಾಗೂ ಅಬ್ಬಕ್ಕ ಉತ್ಸವ ಸಮಿತಿ ಜಂಟಿಯಾಗಿ ಅಬ್ಬಕ್ಕಳ ವಿಚಾರದಲ್ಲಿ ಸಂಶೋಧನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು” ಎಂದರು. ಹಾವೇರಿ ವಿ.ವಿ.ಯ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಅಭಿನಂದನ ಮಾತುಗಳನ್ನಾಡಿ, “ಅಬ್ಬಕ್ಕ ಉತ್ಸವ ಸಮಿತಿ 27 ವರ್ಷಗಳಿಂದ ರೂ.25,000/- ನಗದು ಸಹಿತವಾಗಿ ಪ್ರಶಸ್ತಿ ನೀಡುತ್ತಾ ಬಂದಿರುವುದು ಶ್ಲಾಘನೀಯ” ಎಂದು ಹೇಳಿದರು.
ಸೈಂಟ್ ಸೆಬೆಸ್ಟಿಯನ್ ಧರ್ಮಕೇಂದ್ರದ ವಂದನೀಯ ಸಿಪ್ರಿಯನ್ ಪಿಂಟೋ, ಹಿಂದುಳಿದ ವರ್ಗದ ಆಯೋಗದ ಸದಸ್ಯ ಕೆ.ಟಿ. ಸುವರ್ಣ, ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಗಂಗಾಧರ ಉಳ್ಳಾಲ, ಭಾರತೀಯ ತೀಯಾ ಸಮಾಜದ ಅಧ್ಯಕ್ಷ ಸದಾಶಿವ ಉಳ್ಳಾಲ, ಮೈಸೂರು ಎಲೆಕ್ಟಿಕಲ್ ಇಂಡಸ್ಟ್ರೀಸ್‌ನ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಉದ್ಯಮಿ ಪ್ರಕಾಶ್ ಕುಂಪಲ, ಸೋಮೇಶ್ವರ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಚಂದ್ರಶೇಖರ ಉಚ್ಚಿಲ, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಕೃಷ್ಣಪ್ಪ ಸಾಲಿಯಾನ್, ದ.ಕ. ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಹಿರಿಯರಾದ ಸೀತಾರಾಮ ಬಂಗೇರ, ಉಳ್ಳಾಲ ನಗರಸಭೆಯ ಮಾಜಿ ಉಪಾಧ್ಯಕ್ಷ ಆಯೂಬ್ ಮಂಚಿಲ, ಸದಸ್ಯರಾದ ಸಪ್ನಾ ಹರೀಶ್, ನಮಿತಾ ಗಟ್ಟಿ ಸೋಮೇಶ್ವರ ಪುರಸಭಾ ಸದಸ್ಯೆ ಸಪ್ನಾ ಗಟ್ಟಿ ಉತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ ಸ್ವಾಗತಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಕೆ. ಜಯರಾಮ ಶೆಟ್ಟಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ಮತ್ತು ಕೆ.ಎಂ.ಕೆ. ಮಂಜನಾಡಿ ಕಾರ್ಯಕ್ರಮ ನಿರ್ವಹಿಸಿ, ರತ್ನಾವತಿ ಜೆ. ಬೈಕಾಡಿ ವಂದಿಸಿದರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಬ್ಯಾರಿ ಭಾಷೆ ಕಾರ್ಯಕ್ರಮ, ತುಳು ಹಾಸ್ಯ, ಕೊಂಕಣಿ ಜಾನಪದ ಹಾಡು ಮತ್ತು ನೃತ್ಯ, ಅಮೃತ ಬಹುಭಾಷಾ ಕಾವ್ಯ ಗಾಯನ, ಸ್ವಾಗತ ನೃತ್ಯ, ಜಾನಪದ ನೃತ್ಯ, ‘ಸತ್ಯನಾಪುರೊತ ಸಿರಿ’ ತುಳು ನೃತ್ಯ ರೂಪಕ ಹಾಗೂ ‘ಗೋಂದೋಳು’ ತುಳು ನಾಟಕದ ಪ್ರದರ್ಶನ ನಡೆಯಿತು.